ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ | ಸೇತುವೆಯಡಿ ಕೊಳಚೆ ನೀರು ಸಂಗ್ರಹ; ಪರದಾಟ

ರೈಲ್ವೆ ಇಲಾಖೆ ಮೇಲ್ಸೇತುವೆ ಅವೈಜ್ಞಾನಿಕ: ರೈತರ ಆರೋಪ
Published 20 ಮೇ 2024, 16:16 IST
Last Updated 20 ಮೇ 2024, 16:16 IST
ಅಕ್ಷರ ಗಾತ್ರ

ಕುಷ್ಟಗಿ: ಗದಗ ವಾಡಿ ರೈಲ್ವೆ ಮಾರ್ಗ ನಿರ್ಮಾಣದ ವೇಳೆ ಪಟ್ಟಣ ಹಾಗೂ ಯಲಬುರ್ಗಾ ತಾಲ್ಲೂಕುಗಳ ಮಧ್ಯೆ ಹಿರೇಅರಳಿಹಳ್ಳಿ ಬಳಿ ನಿರ್ಮಿಸಿರುವ ಮೇಲ್ಸೇತುವೆ ಕೆಲಸ ಅವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಿರುವುದರಿಂದ ಗ್ರಾಮಸ್ಥರು, ರೈತರು ನಿತ್ಯ ಪರದಾಡುವಂಥ ಪರಿಸ್ಥಿತಿ ಎದುರಾಗಿದೆ.

ರೈಲ್ವೆ ಮಾರ್ಗವನ್ನು ಮೇಲ್ಸೇತುವೆಯನ್ನಾಗಿಸಲಾಗಿದ್ದು ಅದರ ಕೆಳಗೆ ಹಳ್ಳ ಇದೆ. ಕುಷ್ಟಗಿ ತಾಲ್ಲೂಕಿನ ಶಾಖಾಪುರ ಸೀಮೆ ಮತ್ತು ಹಿರೇಅರಳಿಹಳ್ಳಿ ಗ್ರಾಮಕ್ಕೆ ಮತ್ತು ಹೊಲಗದ್ದೆಗಳಿಗೆ ಹೋಗಿ ಬರಲು ರೈತರು, ಸಾರ್ವಜನಿಕರಿಗೆ ಇದೊಂದೆ ಮಾರ್ಗ. ಇಲ್ಲಿಯವರೆಗೂ ಸಮಸ್ಯೆ ಇರಲಿಲ್ಲ ಆದರೆ ಮಳೆ ಬೀಳುತ್ತಿದ್ದು, ನೀರು ರಭಸವಾಗಿ ಹರಿಯುತ್ತದೆ. ಅದರ ಜೊತೆಗೆ ಇಡೀ ಊರಿನ ಚರಂಡಿಯ ಕೊಳಚೆಯೂ ಹರಿಯುತ್ತಿದೆ. ಹಾಗಾಗಿ ಸೇತುವೆಯ ಎರಡೂ ಬದಿಯಲ್ಲಿನ ಪ್ರವೇಶ ದ್ವಾರದ ಬಳಿಯ ಮಣ್ಣು ಕೊಚ್ಚಿಹೋಗಿದ್ದು ಕೊರಕಲು ಉಂಟಾಗಿದೆ. 

ಕೊಳಚೆ ನೀರು, ಕೆಸರು ಸೇತುವೆಯಡಿ ಮಡುಗಟ್ಟಿದ್ದು, ನಡೆದು ಹೋಗಲೂ ಆಗುತ್ತಿಲ್ಲ. ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದ್ದು ಸದ್ಯ ಈ ದಾರಿ ಬಂದ್‌ ಆಗಿದೆ. ಪರ್ಯಾಯ ದಾರಿಯೇ ಇಲ್ಲದ ಕಾರಣ ರೈತರು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಪೂರ್ವದಲ್ಲಿ ಗ್ರಾಮಸ್ಥರು, ರೈತರು ನೀರಿಗೆ ಮತ್ತು ದಾರಿಗೆ ಪ್ರತ್ಯೇಕ ಮಾರ್ಗ ಕಲ್ಪಿಸುವಂತೆ ಅನೇಕ ಬಾರಿ ಮನವಿ ಮಾಡಿ, ಕಾಮಗಾರಿಯನ್ನೂ ಸ್ಥಗಿತಗೊಳಿಸಿದ್ದರು. ಆದರೆ ಜನರ ಮನವಿಗೆ ಸ್ಪಂದಿಸದ ರೈಲ್ವೆ ಇಲಾಖೆ ನಿರ್ಲಕ್ಷ್ಯ ವಹಿಸಿದ್ದರಿಂದ ಈಗ ಗ್ರಾಮಸ್ಥರು ಶಾಶ್ವತ ಸಮಸ್ಯೆಯ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರಾದ ಶೇಖರಗೌಡ, ಮಲ್ಲಪ್ಪ, ಷಣ್ಮುಖಪ್ಪ ಇತರರು ದೂರಿದರು.

ಪರಿಶೀಲಿಸಿ ಕ್ರಮ: ಈ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಬೇಕು ಇಲ್ಲದಿದ್ದರೆ ಜನರು ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ ಎಂದು ಗ್ರಾಮಸ್ಥರು ಹೇಳಿದರು. ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ನೈರುತ್ಯ ರೈಲ್ವೆ ವಲಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಶೋಕ ಮುದಗೌಡರ, ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಈಗ ಬರುವುದಿಲ್ಲ. ಆದರೆ ಕಿತ್ತುಹೋಗಿರುವ ರಸ್ತೆಯನ್ನು ದುರಸ್ತಿಗೊಳಿಸಲಾಗುವುದು
ಅಶೋಕ ಮುದಗೌಡರ ನೈರುತ್ಯ ರೈಲ್ವೆ ಎಇಇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT