ಯಲಬುರ್ಗಾ: ತಾಲ್ಲೂಕಿನ ಮಾಟರಂಗಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಸಂಘದ ರೈತ ಮಹಿಳೆಯರಿಗೆ ಕ್ಯಾನ್‍ಗಳನ್ನು ಉಚಿತವಾಗಿ ವಿತರಿಸಲಾಯಿತು.
ಕೆಎಂಎಫ್ ಒಕ್ಕೂಟದ ನಿರ್ದೇಶಕ ಶಿವಪ್ಪ ವಾದಿ ಮಾತನಾಡಿ, ‘ಆರ್ಥಿಕ ಸುಧಾರಣೆಗೆ ಹೈನುಗಾರಿಕೆ ವರದಾನವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುತ್ತಿರುವುದು ಆಶಾದಾಯಕವಾಗಿದೆ. ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ವ್ಯಾಪ್ತಿಯನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಅನೇಕ ರೈತ ಮಹಿಳೆಯರು ಹೈನುಗಾರಿಕೆಯಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಇದರಿಂದ ಮತ್ತಷ್ಟು ರೈತರು ಹಾಗೂ ಮಹಿಳೆಯರಿಗೆ ಉತ್ತೇಜನ ನೀಡುತ್ತಿದೆ’ ಎಂದರು.
ಸಂಘದ ಅಧ್ಯಕ್ಷೆ ಅಕ್ಕಮ್ಮ ಗವಿಸಿದ್ದಯ್ಯ ಪೊಲೀಸ್‌ಪಾಟೀಲ ಮಾತನಾಡಿ, ‘ಆರಂಭದಲ್ಲಿ ದಿನಕ್ಕೆ 24 ಲೀಟರ್ ಮಾತ್ರ ಸಂಗ್ರಹವಾಗುತ್ತಿತ್ತು. ಈಗ ಪ್ರತಿದಿನ 170 ಲೀ. ಸಂಗ್ರಹವಾಗುತ್ತಿದೆ. ಕೆಎಂಎಫ್‍ನ ಅಧಿಕಾರಿಗಳಿಂದ ಉತ್ತಮ ಸಹಕಾರ ದೊರೆಯುತ್ತಿದೆ. ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಘದಿಂದ ಸ್ಟೀಲ್ ಕ್ಯಾನ್‍ಗಳನ್ನು ವಿತರಿಸುತ್ತಿರುವುದು ಹೈನುಗಾರಿಕೆ ವಲಯದ ಉತ್ತೇಜನಕ್ಕೆ ಕಾರಣವಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಸಂಘವು, ₹70,403 ಲಾಭ ಮಾಡಿದ್ದು, ಮುಂದಿನ ದಿನಗಳಲ್ಲಿ ಒಂದು ದಿನಕ್ಕೆ 500 ಲೀ. ಹಾಲು ಸಂಗ್ರಹಿಸುವ ಮೂಲಕ ಹೆಚ್ಚಿನ ಲಾಭಕ್ಕೆ ಕ್ರಮವಹಿಸಲಾಗುತ್ತದೆ’ ಎಂದರು.