ಗುರುವಾರ , ಆಗಸ್ಟ್ 11, 2022
23 °C
ಗ್ರಾಮ ಪಂಚಾಯಿತಿ ಚುನಾವಣೆ: ನಿಯಮ ಪಾಲನೆಗೆ ಸೂಚನೆ

ಕೊಪ್ಪಳ: ಅಕ್ರಮ ಮದ್ಯ ಮಾರಿದರೆ ಕಠಿಣ ಕ್ರಮ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲೆಯ ಎಲ್ಲ ವಿವಿಧ ಸನ್ನದುದಾರರು ಗ್ರಾಮ ಪಂಚಾಯಿತಿ ಚುನಾವಣೆ ಪ್ರಯುಕ್ತ ಚುನಾವಣೆ ಆಯೋಗ ಘೋಷಿಸುವ ಮದ್ಯ ಮುಕ್ತ ದಿನಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಅವಧಿಯಲ್ಲಿ ಯಾವುದೇ ರೀತಿಯ ಅಕ್ರಮ ಮದ್ಯ ಮಾರಾಟಕ್ಕೆ ಆಸ್ಪದ ನೀಡಬಾರದು ಎಂದು  ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸೂಚನೆ ನೀಡಿದರು.

ಅಬಕಾರಿ ಇಲಾಖೆ ಹಾಗೂ ಜಿಲ್ಲೆಯ ಎಲ್ಲ ವಿವಿಧ ಸನ್ನದುದಾರರೊಂದಿಗೆ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣೆ ಪ್ರಯುಕ್ತ ಕೈಗೊಳ್ಳಬೇಕಾದ ಸಿದ್ಧತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಮದ್ಯ ಮಾರಾಟ ಮಳಿಗೆಗಳಿಂದ ಮದ್ಯವು ಚುನಾವಣಾ ಸಂಬಂಧ ಬಳಕೆಯಾಗದಂತೆ ಕ್ರಮ ವಹಿಸಬೇಕು. ಸನ್ನದು ಸ್ಥಳದಲ್ಲಿ ಯಾವುದೇ ಅಕ್ರಮಕ್ಕೆ ಆಸ್ಪದ ನೀಡಬಾರದು. ಮದ್ಯದ ಅಂಗಡಿಗಳಲ್ಲಿ ಮದ್ಯ ಎತ್ತುವಳಿಯು ಅಸಹಜ ಅಥವಾ ಅಸಾಧಾರಣವೆನಿಸಿದ್ದಲ್ಲಿ ಸದರಿ ಮದ್ಯದ ಅಂಗಡಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ನ್ಯೂನ್ಯತೆ ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸನ್ನದು ಸ್ಥಳ ಹೊರತುಪಡಿಸಿ ಅನಧಿಕೃತವಾಗಿ ಬೇರೆ ಸ್ಥಳಗಳಲ್ಲಿ ಮದ್ಯ ಸಂಗ್ರಹಿಸದಂತೆ ಮುನ್ನೆಚ್ಚರಿಕೆ ಕ್ರಮವನ್ನು ಜಿಲ್ಲೆಯ ಎಲ್ಲ ವಿವಿಧ ಸನ್ನದುದಾರರು ವಹಿಸಬೇಕು ಎಂದು ತಿಳಿಸಿದರು.

ಮದ್ಯ ಮಾರಾಟ ಸನ್ನದುಗಳಿಗೆ ನಿಗದಿಪಡಿಸಿದ ಸಮಯಪಾಲನೆ ಮಾಡಬೇಕು. ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಮಾಜ ಘಾತುಕ ವ್ಯಕ್ತಿಗಳು ಮದ್ಯ ಮಾರಾಟ ಮಳಿಗೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕೃತ್ಯಗಳನ್ನು ಎಸಗದಂತೆ ಕ್ರಮ ವಹಿಸಬೇಕು. ನಿಯಮನುಸಾರ ಒಬ್ಬ ವ್ಯಕ್ತಿ ಮದ್ಯ ಖರೀದಿಸಬಹುದಾದ ಪ್ರಮಾಣಕ್ಕಿಂತಲೂ ಹೆಚ್ಚು ಮದ್ಯವನ್ನು ನೀಡಬಾರದು ಎಂದು ಹೇಳಿದರು.

ಕೋವಿಡ್-19 ಕೊರೋನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ವಿವಿಧ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದರೊಂದಿಗೆ ಹೆಚ್ಚು ಜನರು ಸೇರುವಿಕೆಯನ್ನು ತಡೆಗಟ್ಟಬೇಕು. ಮಾಸ್ಕ್‌ ಕಡ್ಡಾಯವಾಗಿ ಧರಿಸುವಂತೆ ನೋಡಿಕೊಳ್ಳಬೇಕು. ಅಬಕಾರಿ ಉಪ ಅಧೀಕ್ಷಕರು ಹಾಗೂ ಜಿಲ್ಲೆಯ ಎಲ್ಲ ಅಧೀನ ಅಬಕಾರಿ ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಮಾತನಾಡಿ, ಅನಧಿಕೃತ ಮದ್ಯ ಮಾರಾಟ ಮತ್ತು ಚುನಾವಣಾ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಅಬಕಾರಿ ಇಲಾಖೆಯ ಇ-ಮೇಲ್ ವಿಳಾಸ dckpl-ex-ka@nic.in & dcekoppal@gmail.com ಕ್ಕೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಅಬಕಾರಿ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ವಿವಿಧ ಸನ್ನದುದಾರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು