ಭಾನುವಾರ, ಜೂನ್ 26, 2022
29 °C
ಗ್ರಾಮ ಪರಿವರ್ತನೆಗೆ ಪಣ: ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು ಭಾಗಿ

ತರಲಕಟ್ಟಿ: ಮದ್ಯ ಮುಕ್ತ ಗ್ರಾಮಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ತಾಲ್ಲೂಕಿನ ತರಲಕಟ್ಟಿ ಗ್ರಾಮವನ್ನು ಮದ್ಯ ಮುಕ್ತ ಎಂದು ಘೋಷಿಸಿ ನಾಮಫಲಕ ಅನಾವರಣಗೊಳಿಸಲಾಯಿತು.

ನೇತೃತ್ವ ವಹಿಸಿದ್ದ ಎಎಸ್‍ಐ ರಾಜಮಹ್ಮದ್ ಮಾತನಾಡಿ,‘ಗ್ರಾಮೀಣ ಪ್ರದೇಶದಲ್ಲಿ ಮದ್ಯ ಸೇವನೆ ಮತ್ತು ಅಕ್ರಮ ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕದ ಸಂಗತಿ. ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ’ ಎಂದರು.

‘ಅನೇಕ ಯುವಕರು ಮದ್ಯ ವ್ಯಸನಕ್ಕೆ ತುತ್ತಾಗಿ ತಮ್ಮ ಯೌವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಿ ಮದ್ಯ ಮಾರಾಟ ಅಥವಾ ಸೇವಿಸುವುದನ್ನು ನಿಯಂತ್ರಿಸಲು ಉದ್ದೇಶಿಸಲಾಗಿದೆ’ ಎಂದರು.

ಹಿರಿಯ ವಕೀಲ ಮಲ್ಲನಗೌಡ ಪಾಟೀಲ ಮಾತನಾಡಿ,‘ಗ್ರಾಮದಲ್ಲಿ ಈ ಹಿಂದೆ ಸಾಕಷ್ಟು ಅಕ್ರಮ ಮದ್ಯ ಮಾರಾಟ ನಡೆಯುತ್ತಿತ್ತು. ಆದರೆ ಈಚೆಗೆ ನಿಯಂತ್ರಣಕ್ಕೆ ಬಂದಿದೆ. ಇನ್ನು ಮುಂದೆ ತರಲಕಟ್ಟಿ ಮದ್ಯ ಮುಕ್ತ ಗ್ರಾಮವನ್ನಾಗಿ ಪರಿವರ್ತನೆಗೊಳ್ಳಲಿದೆ. ಇದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಹಾಗೂ ಪ್ರೋತ್ಸಾಹಿಸಬೇಕು. ಇದರಿಂದ ಮನೆಯ ಕುಟುಂಬಗಳು ನೆಮ್ಮದಿಯ ಜೀವನ ಮಾಡಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಮುದಾಯದಲ್ಲಿ ಸುಧಾರಣೆ ಕಂಡು ಕೊಳ್ಳಬೇಕಾದರೆ ಇಂಥ ಪರಿವರ್ತನೆಯ ಚಟುವಟಿಕೆಗಳು ನಡೆಯಬೇಕು. ಹಾಗೆಯೇ ಗ್ರಾಮಸ್ಥರು ಬೆಂಬಲಿಸಿ ಗ್ರಾಮದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹಿರಿಯ ಕಲಾವಿದ ತೇಜನಗೌಡ ಪಾಟೀಲ ಅಭಿಪ್ರಾಯಪಟ್ಟರು.

ಗ್ರಾಮಪಂಚಾಯಿತಿ ಸದಸ್ಯರಾದ ಹನುಮೇಶ ವಡ್ಡರ, ಬಸಪ್ಪ ಕೋಳೂರು, ಬಸವನಗೌಡ ಮಾಲಿಪಾಟೀಲ ಮುಖಂಡರುಗಳಾದ ಹನುಮಂತಪ್ಪ ದಳಪತಿ, ಶರಣು ಹಾವೇರಿ, ಮುತ್ತಣ್ಣ ಮೇಟಿ, ಟಾಕನಗೌಡ ಮಾಲಿ ಪಾಟೀಲ, ರಂಗನಾಥ ಮಲ್ಮಕೊಂಡಿ, ತೋಟಪ್ಪ ಬೇವೂರ, ಪ್ರಭುಗೌಡ ಪಾಟೀಲ್, ಕರಿಯಪ್ಪ ಶಿಲ್ಪಿ, ಅಶೋಕ ಕೋಡದಾಳ, ವಿರೇಶ ನಾಯಕ ಹಾಗೂ ಕೇಸಪ್ಪ ಮನ್ನಾಪುರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.