ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಬದುಕು ರೂಪಿಸುವ ಶಿಕ್ಷಕ ಶ್ರೇಷ್ಠ: ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್

ಜಿಲ್ಲೆಯಾದ್ಯಂತ ಶಿಕ್ಷಕರ ದಿನಾಚರಣೆ: ‘ಜಿಲ್ಲಾ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ಪ್ರದಾನ
Last Updated 6 ಸೆಪ್ಟೆಂಬರ್ 2021, 8:51 IST
ಅಕ್ಷರ ಗಾತ್ರ

ಕೊಪ್ಪಳ: ‘ಬೋಧನಾ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿ ಎಂಬುದನ್ನು ಪರಿಗಣಿಸಿರುವ ದೇಶ ನಮ್ಮದು. ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದರ ಜತೆಗೆ, ಸರಿ ತಪ್ಪುಗಳನ್ನು ತಿದ್ದುವ, ಅವರಲ್ಲಿನ ಆಸಕ್ತಿಗಳನ್ನು ವೃದ್ಧಿಸುವ, ಬದುಕಿಗೆ ಗುರಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು’ ಎಂದುಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರ ನಿರ್ಮಾಣದಲ್ಲಿ, ಮಗುವಿನ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಅಪಾರ. ಇಂದು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಅತ್ಯವಶ್ಯಕವಾಗಿದೆ. ಮಕ್ಕಳನ್ನು ಕಲೆ, ಸಾಹಿತ್ಯ, ಕ್ರೀಡೆ ಹೀಗೆ ಎಲ್ಲರಂಗದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಬೆಳೆಸಬೇಕು. ಇದು ಸ್ಪರ್ಧಾತ್ಮಕ ಯುಗವಾಗಿದೆ. ಈ ವೇಗಯುತ ಜಗತ್ತಿನಲ್ಲಿ ಶಿಕ್ಷಣದ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ಹಾಗೂ ಕಾಲಕಾಲಕ್ಕೆ ಸುಧಾರಣೆ ಆಗಬೇಕು. ಕಲ್ಯಾಣ ಕರ್ನಾಟಕ ಭಾಗಕ್ಕೆ ಅನೇಕ ಸೌಲಭ್ಯಗಳು, ಅವಕಾಶಗಳು ಇದ್ದು ಅವುಗಳನ್ನು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬೇಕು ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಬದಲಾವಣೆ ಎಂಬುದು ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ. ಸರ್ಕಾರದ ಎಲ್ಲ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಸರ್ಕಾರಿ ಶಾಲೆಯ ಮಕ್ಕಳು ಉನ್ನತ ಹುದ್ದೆಗಳನ್ನು ಪಡೆಯಬೇಕು. ಖಾಸಗಿ ಶಾಲೆಯಷ್ಟೇ ಸರ್ಕಾರಿ ಶಾಲೆಗಳೂ ಬಲಗೊಳ್ಳಬೇಕು. ನಮ್ಮ ಜಿಲ್ಲೆಯ ಮಕ್ಕಳು ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರು ಶ್ರಮಿಸಬೇಕು. ಇಂದು ಬಡವರ ಮಕ್ಕಳು ಬಡವರಾಗಿ ಉಳಿಯಕೂಡದು ಎಂದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19 ಸೋಂಕಿನಿಂದ ಶೈಕ್ಷಣಿಕ ರಂಗದಲ್ಲಿ ಕೆಟ್ಟ ದಿನಗಳನ್ನು ಅನುಭವಿಸಬೇಕಾಯಿತು. ಕೋವಿಡ್ ಸೋಂಕಿನಿಂದ ಶಿಕ್ಷಣದಲ್ಲಿ ಹಿಂದುಳಿಯಬೇಕಾಯಿತು. ಇದರಿಂದ ಮಕ್ಕಳ ಭವಿಷ್ಯಕ್ಕೆ ಹಾನಿಯಾಗಿದೆ. ಅದರಲ್ಲೂ ಬಡ ಹಾಗೂ ಗ್ರಾಮೀಣ ಭಾಗದ ಮಕ್ಕಳ ಸುಂದರ ಭವಿಷ್ಯಕ್ಕೆ ಪೆಟ್ಟು ನೀಡಿದೆ. ಆದ್ದರಿಂದ ಶಿಕ್ಷಕರು ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಶ್ರಮಿಸಬೇಕು ಎಂದರು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ಭೀಮಣ್ಣ ತಳ್ಳಿಕೇರಿ, ನರಗಸಭೆ ಅಧ್ಯಕ್ಷೆ ಲತಾ ಗವಿಸಿದ್ಧಪ್ಪ ಚಿನ್ನೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಎಸ್.ಪಾಟೀಲ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಸಿಇಒ ಬಿ.ಫೌಜಿಯಾ ತರನ್ನುಮ್,ಎಸ್‌ಪಿ ಟಿ.ಶ್ರೀಧರ್,ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಮುಂತಾದವರು ಇದ್ದರು.

ಕಾರಟಗಿ: ಶಾಲೆಯಲ್ಲಿ ಭಾವಚಿತ್ರಕ್ಕೆ ಪೂಜೆ

ಕಾರಟಗಿ: ಪಟ್ಟಣದ ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಆಂಗ್ಲ, ಕನ್ನಡ ಮಾಧ್ಯಮ ಶಾಲೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಶಿಕ್ಷಕರ ದಿನವನ್ನು ಭಾನುವಾರ
ಆಚರಿಸಲಾಯಿತು.

ಮುಖ್ಯಗುರು ಅಮರೇಶ ಮಾತನಾಡಿ, ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಿಸುವುದರೊಂದಿಗೆ ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವ ಮಹತ್ವದ ಜವಾಬ್ದಾರಿಯನ್ನು ಶಿಕ್ಷಕರು ನಿಭಾಯಿಸುತ್ತಿದ್ದಾರೆ. ಶಿಕ್ಷಕರು ಸದಾ ಅಧ್ಯಯನಶೀಲರಾಗಿರುವ ಜೊತೆಗೆ ಮಕ್ಕಳಿಗೆ ಸಾಮಾಜಿಕ ಹಿತಾಸಕ್ತಿ ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಬೇಕು. ಬದುಕಿನ ಮೌಲ್ಯಗಳ ಅರಿವು ಮೂಡಿಸುವುದರೊಂದಿಗೆ ಉತ್ತಮ ಜೀವನ ಕಟ್ಟಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದರು.

ಶಾಲೆಯ ಮುಖ್ಯಗುರು ಮಹಾಂತೇಶ ಗದ್ದಿ, ಶಿಕ್ಷಕರಾದ ಜಗದೀಶ ಭಜಂತ್ರಿ, ಗಿರೀಶ್, ದೇವೇಂದ್ರಪ್ಪ, ಈಶ್ವರಪ್ಪ ಇಟಗಿ, ಸಿಬ್ಬಂದಿ ಮಹ್ಮದ್ ಇಬ್ರಾಹಿಂ, ಅಮರೇಶ ನಾಯ್ಕ, ನಾಗರಾಜ ಭಜಂತ್ರಿ, ಆನಂದ, ನವೀನಕುಮಾರ ಉಪಸ್ಥಿತರಿದ್ದರು.

ತಾವರಗೇರಾ: ಪಟ್ಟಣ ಸೇರಿ ವಿವಿಧೆಡೆ ಆಚರಣೆ

ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿಯ ಶಾಲಾ ಕಾಲೇಜುಗಳು ಮತ್ತು ವಿವಿಧ ಇಲಾಖೆಯ ಸರ್ಕಾರಿ ಕಚೇರಿಗಳಲ್ಲಿಭಾನುವಾರ ಶಿಕ್ಷಕರ ದಿನ ಆಚರಿಸಲಾಯಿತು.

ತಾವರಗೇರಾ ಪಟ್ಟಣದ ಸರ್.ಎಂ.ವಿಶ್ವೇಶ್ವರಯ್ಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಭಾನುವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಶಿಕ್ಷಕರ ದಿನ ಆಚರಿಸಲಾಯಿತು.

ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಪ್ರಕಾಶ ಮಳಗಿ, ಪ್ರೌಢಶಾಲೆ ವಿಭಾಗ ಮುಖ್ಯ ಶಿಕ್ಷಕ ಡಿ.ಆರ್.ಪಾಟೀಲ, ಕಾಲೇಜು ವಿಭಾಗದ ಪ್ರಾಚಾರ್ಯ ಲಕ್ಷ್ಮಣ ವಗರನಾಳ ಮತ್ತು ಶಿಕ್ಷಕರಾದ ದೊಡ್ಡನಗೌಡ, ಜಗದೀಶ, ಸಂಗಪ್ಪ ಗುಡದೂರು, ಬಿ.ಎಸ್.ಮಠ, ಎಸ್.ಬಿ.ಬಿರಾದಾರ ಇದ್ದರು.

ಪಟ್ಟಣದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.

ಮುಖ್ಯ ಶಿಕ್ಷಕರಾದ ಶ್ಯಾಮಣ್ಣ ಉಪ್ಪಾರ, ಮಂಗಲಸಾ ವಾಲೇಕಾರ, ಬಸಮ್ಮ ಕೆಂಭಾವಿ, ಪರಸಪ್ಪ ಹೊಸಮನಿ ಇದ್ದರು.

ಶಶಿಧರಸ್ವಾಮಿ ವಿದ್ಯಾನಿಕೇತನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಿಕ್ಷಕರ ದಿನಾಚರಣೆ ಮಾಡಲಾಯಿತು. ಶಿಕ್ಷಕ, ಶಿಕ್ಷಕಿಯರು ಹಾಗೂ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿ ಇದ್ದರು.

ಕಿತ್ತೂರರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಿಕ್ಷಕರ ದಿನ ಆಚರಿಸಲಾಯಿತು. ಪ್ರಾಚಾರ್ಯ ನಾಗರಾಜ ಸಂಗನಾಳ, ಕೊಟ್ರೇಶ ಮುಕಾರಿ, ರವಿಚಂದ್ರ ಭಜೇಂತ್ರಿ, ನಾಗಭೂಷಣ, ಶಿಕ್ಷಕ, ಶಿಕ್ಷಕಿಯರು ಇದ್ದರು.

ಸರ್ಕಾರಿ ಬಾಲಕರ, ಬಾಲಕಿಯರ ಪ್ರೌಢ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಕ್ಷಕರ ತರಬೇತಿ ಕೇಂದ್ರ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಇನ್ನಿತರ ಕಡೆ ಶಿಕ್ಷಕರ ದಿನಾಚರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT