ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಓಟ’ದ ಭರದಲ್ಲಿ ಆಟದ ಸೊಬಗು

ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಸಿಇಒ ಚಾಲನೆ
Published 7 ಮಾರ್ಚ್ 2024, 6:39 IST
Last Updated 7 ಮಾರ್ಚ್ 2024, 6:39 IST
ಅಕ್ಷರ ಗಾತ್ರ

ಕೊಪ್ಪಳ: ನಿತ್ಯ ಕಚೇರಿ, ಕೆಲಸದ ನಿರ್ವಹಣೆ ಒತ್ತಡ, ಸಭೆ ಹೀಗೆ ಕಾರ್ಯಾಲಯಕ್ಕೆ ಸಂಬಂಧಿಸಿದ ಒಂದಿಲ್ಲೊಂದು ಕಾರ್ಯದಲ್ಲಿ ತಲ್ಲೀನರಾಗುತ್ತಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಬುಧವಾರ ಸ್ವಲ್ಪ ನಿರಾಳತೆಯಿತ್ತು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭವಾದ ರಾಜ್ಯ ಸರ್ಕಾರಿ ನೌಕರರ ಎರಡು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮ ’ಓಟ’ದ ಒತ್ತಡಕ್ಕೆ ಆಟದ ಮುಲಾಮು ನೀಡಿದರು. ಪ್ರತಿವರ್ಷದ ಕ್ರೀಡಾಕೂಟದಲ್ಲಿ ಅಂದಾಜು 1500 ತನಕ ನೌಕರರು ಪಾಲ್ಗೊಳ್ಳುತ್ತಿದ್ದರು. ಈ ಬಾರಿ 1600ಕ್ಕೂ ಹೆಚ್ಚು ನೌಕರ ಕ್ರೀಡಾಪಟುಗಳು ಹೆಸರು ನೋಂದಾಯಿಸಿ ಉತ್ಸಾಹ ತೋರಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ ಕ್ರೀಡಾಕೂಟಕ್ಕೆ ಚಾಲನೆ ನೀಡಿ ‘ನಾವು ಎಷ್ಟೇ ಹಣ ಗಳಿಸಿದರೂ ಆರೋಗ್ಯ ಸರಿಯಿಲ್ಲವಾದರೆ ಏನನ್ನೂ ಅನುಭವಿಸಲು ಆಗುವುದಿಲ್ಲ. ನಿಮ್ಮ ಕ್ರೀಡಾಸಕ್ತಿ ಕ್ರೀಡಾಕೂಟವಿದ್ದಾಗ ಮಾತ್ರ ಸೀಮಿತವಾಗದೇ ನಿತ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ’ ಎಂದು ಸಲಹೆ ನೀಡಿದರು.

‘ಡಿಸೆಂಬರ್‌ ಅಥವಾ ಜನವರಿಯಲ್ಲಿ ಬಿಸಿಲು ಕಡಿಮೆ ಪ್ರಮಾಣದಲ್ಲಿರುತ್ತದೆ. ಆ ಅವಧಿಯಲ್ಲಿ ಕ್ರೀಡಾಕೂಟ ಆಯೋಜಿಸಿದರೆ ಉತ್ತಮ. ನಿತ್ಯ ವ್ಯಾಯಾಮ ಮಾಡಬೇಕು. ಆಟದಲ್ಲಿ ಖುಷಿ ಕಾಣುವ ಜೊತೆಗೆ ಕ್ರೀಡಾಮನೋಭಾವವನ್ನೂ ರೂಢಿಸಿಕೊಳ್ಳಬೇಕು. ಈ ಕ್ರೀಡಾಕೂಟಕ್ಕೆ ಮುಂದಿನ ವರ್ಷ ₹5 ಲಕ್ಷ ನೀಡಲಾಗುವುದು. ನೌಕರರ ನಡುವಿನ ಬಾಂಧವ್ಯ ವೃದ್ಧಿಗೆ ಇಂಥ ವೇದಿಕೆಗಳು ಅನುಕೂಲವಗುತ್ತವೆ’ ಎಂದರು.

ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ ಮಾತನಾಡಿ ‘ನಿತ್ಯ ಕೆಲಸಗಳ ಒತ್ತಡದಿಂದ ಹೊರಬಂದು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಸರ್ಕಾರ ಎರಡು ದಿನ ಅವಕಾಶ ನೀಡಿದೆ. ಜಿಲ್ಲೆಯ ನೌಕರರು ಉತ್ತಮ ಸಾಧನೆ ಮಾಡುತ್ತಿದ್ದರು ನಾಲ್ಕು ವರ್ಷಗಳಿಂದ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗೆಲ್ಲುತ್ತಿದ್ದಾರೆ’ ಎಂದರು.

ಡಿಎಚ್‌ಒ ಡಾ. ಲಿಂಗರಾಜು ಟಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಪ್ರಕಾಶ, ಅಬಕಾರಿ ಡಿವೈಎಸ್ಪಿ ಭಾರತಿ, ನೌಕರರ ಸಂಘದ ಗೌರವಾಧ್ಯಕ್ಷ ಬಿ‌.ಜಿ.ಸುಧಾಕರ, ಗೋಪಾಲ್ ದುಬೆ, ವೆಂಕಟೇಶ ಕುಲಕರ್ಣಿ, ಶಿವಪ್ಪ ಜೋಗಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಧ್ಯಕ್ಷ ಶರಣೇಗೌಡ, ಪ್ರಾಥಮಿಕ ಶರಣಬಸನಗೌಡ ಪಾಟೀಲ್, ಮಾರ್ತಾಂಡರಾವ್ ದೇಸಾಯಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT