ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಬದುಕು ಹೈರಾಣಾಗಿಸಿದ ‘ಕೆಂಡದ ಬಿಸಿಲು’

ಮಕ್ಕಳು, ವೃದ್ಧರಿಗೆ ಅನಾರೋಗ್ಯದ ಆತಂಕ; ತಂಪು ಮಾರುವವರಿಗೆ ಬಿಸಿಲೇ ಬಂಡವಾಳ, ಶ್ರಮಿಕ ವರ್ಗಕ್ಕೆ ಹೆಚ್ಚು ಬಿಸಿ
Published 1 ಏಪ್ರಿಲ್ 2024, 5:37 IST
Last Updated 1 ಏಪ್ರಿಲ್ 2024, 5:37 IST
ಅಕ್ಷರ ಗಾತ್ರ

ಕೊಪ್ಪಳ: ಉಫ್‌. ಉಸ್ಸಪ್ಪಾ.

ಬೆಳಿಗ್ಗೆ ಎಂಟು ಗಂಟೆ ಬಳಿಕ ಅರ್ಧ ಗಂಟೆ ಹೊರಗಡೆ ಸುತ್ತಾಡಿ ಮನೆಯೊಳಗೆ ಕಾಲಿಟ್ಟರೆ ಸಾಕು ಪ್ರತಿಯೊಬ್ಬರಿಂದ ಹೊರಹೊಮ್ಮುವ ಉದ್ಗಾರವಿದು.

ಮೊದಲೇ ಮಳೆ ಕೊರತೆಯಿಂದಾಗಿ ನೀರು, ಜಾನುವಾರು, ಉದ್ಯೋಗದ ಅಭಾವ ಜನರನ್ನು ಕಾಡುತ್ತಿದೆ. ಇದರ ನಡುವೆ ನಿತ್ಯ ಜನರ ಬದುಕು ಹೈರಾಣಾಗಿಸುತ್ತಿರುವ ವಿಪರೀತ ಬಿಸಿಲು ಕೂಡ ಜನರನ್ನು ಸಾಕುಸಾಕಾಗಿಸಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಬೇಸಿಗೆಯ ಬಿರು ಬಿಸಿಲು ಹಿಂದಿನ ವರ್ಷದಲ್ಲಿ ವ್ಯಾಪಕ ಪರಿಣಾಮ ಬೀರಿರಲಿಲ್ಲ. ಈಗ ಮಳೆಯೂ ಇಲ್ಲ, ಚಳಿಯೂ ಇರಲಿಲ್ಲ. ಆದರೆ ನಿಗಿನಿಗಿ ಕೆಂಡದಂಥ ಬಿಸಿಲು ದಿನನಿತ್ಯದ ಚಟುವಟಿಕೆಗೆ ಅಡ್ಡಿಪಡಿಸುತ್ತಿದೆ.

ಜನರಿಗೆ ಮನೆಯಲ್ಲಾಗಲಿ, ಹೊರಗಡೆಯಾಗಲಿ ಕುಳಿತರೂ, ನಿಂತರೂ ಸಮಾಧಾನವಾಗುತ್ತಿಲ್ಲ. ಕ್ಷಣಕಾಲ ಫ್ಯಾನ್‌, ಎಸಿ (ಹವಾನಿಯಂತ್ರಿತ) ಇಲ್ಲದಿದ್ದರೆ ಚಡಪಡಿಕೆ ಶುರುವಾಗುತ್ತದೆ. ವಿದ್ಯುತ್‌ ಕಡಿತವಾದರಂತೂ ಬದುಕು ಸಂಕಷ್ಟಮಯ.

ಪ್ರತಿ ವರ್ಷ ಏಪ್ರಿಲ್‌ ಎರಡು ಅಥವಾ ಮೂರನೇ ವಾರದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಈಗಿನ ಬಿರು ಬಿಸಿಲಿನ ಅನುಭವವಾಗುತ್ತಿತ್ತು. ಆದರೆ ಈ ಸಲ ಮಾರ್ಚ್‌ ಕೊನೆಯ ವಾರದಲ್ಲಿಯೇ ಬಿಸಿಲಿನ ಕೆಂಡ ಜೊತೆಯಲ್ಲಿಟ್ಟುಕೊಂಡು ಸಾಗಿದಂತೆ ಅನುಭವ ಜನರಿಗೆ ಆಗುತ್ತಿದೆ. ಬಿಸಿಗಾಳಿಯ ಪ್ರಭಾವ, ನಿತ್ಯ ಉಷ್ಣಾಂಶ ಏರಿಕೆ, ದೈಹಿಕ ಆರೋಗ್ಯ ಸರಿಯಿಲ್ಲದಿರುವುದು, ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯ ಸರ್ಕಾರ ಮೊದಲು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಸಮಯದದಲ್ಲಿ ಬದಲಾವಣೆ ಮಾಡುತ್ತಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಇದನ್ನು ರದ್ದುಪಡಿಸಲಾಗಿದೆ. ಕಳೆದ ವರ್ಷ ಇದೇ ಸಮಯದ ವೇಳೆ ವಿಧಾನಸಭೆ ಚುನಾವಣೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ನೌಕರರಿಗೆ ಈ ವರ್ಷ ಲೋಕಸಭಾ ಚುನಾವಣೆ ಕೆಲಸದಲ್ಲಿ ಮಗ್ನರಾಗಿದ್ದಾರೆ. ಆರೋಗ್ಯದಲ್ಲಿ ವ್ಯಥೆಯ ಆಗದಂತೆ ಎಚ್ಚರಿಕೆ ವಹಿಸಲು ಯುವಕರು ಮತ್ತು ಹಿರಿಯರು ಬೆಳಗಿನ ಜಾವವೇ ಕ್ರೀಡಾಂಗಣಗಳಲ್ಲಿ ವಾಕಿಂಗ್‌ ಮಾಡುತ್ತಿದ್ದಾರೆ. ನಿರಂತರ ಬಿಸಿಗಾಳಿ ಬೀಸುತ್ತಿರುವ ಕಾರಣ ಜನ ಸಾಧ್ಯವಾದಷ್ಟು ಮಧ್ಯಾಹ್ನ ಹೊರಗಡೆ ಹೋಗುವುದಕ್ಕೆ ಕಡಿವಾಣ ಹಾಕಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಮಾರ್ಚ್‌ ಕೊನೆಯ ವಾರದಲ್ಲಿ ರಾಜ್ಯದ 18 ಜಿಲ್ಲೆಗಳಲ್ಲಿ ಬಿಸಿಗಾಳಿಯ ಮಿತಿಯಾದ 40 ಡಿಗ್ರಿ ಸೆಲ್ಸಿಯಸ್‌ ಗಡಿ ಮೀರಿವೆ ಎಂದು ಖುದ್ದು ಹವಾಮಾನ ಇಲಾಖೆಯೇ ಹೇಳಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೆಚ್ಚಾಗಲಿದೆ ಎನ್ನುವ ಎಚ್ಚರಿಕೆಯನ್ನೂ ನೀಡಿದೆ. ಹಿಂದಿನ ಐದು ವರ್ಷಗಳಲ್ಲಿಯೇ ಗರಿಷ್ಠ ತಾಪಮಾನ ಇದಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ವ್ಯಾಪಾರಿಗಳಿಗೆ ಬಿಸಿಲೇ ಬಂಡವಾಳ

ಬಿಸಿಲು ಜನರಿಗೆ ಶಾಪವಾಗಿ ಪರಿಣಮಿಸಿದರೆ ತಂಪು ಪಾನೀಯ, ಕಲ್ಲಂಗಡಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ವರವಾಗಿ ಪರಿಣಮಿಸಿದೆ. ಇವರಿಗೆ ಬಿಸಿಲೇ ಬಂಡವಾಳವಾಗಿದೆ.

ಒಂದು ಪ್ಲೇಟ್‌ ಕಲ್ಲಂಗಡಿ ಹಣ್ಣಿಗೆ ₹20ರಿಂದ ₹25 ಪಡೆಯಲಾಗುತ್ತಿದೆ. ಮಾರ್ಚ್‌ ಆರಂಭದಲ್ಲಿ ಪ್ರತಿ ಕೆ.ಜಿ. ಕಲ್ಲಂಗಡಿಗೆ ಇದ್ದ ₹20 ಬೆಲೆ ಈಗ ₹35ಕ್ಕೆ ಏರಿಕೆಯಾಗಿದೆ. ತಂಪು ಪಾನೀಯ ಮಾರಾಟ ಮಾಡುವ ಅಂಗಡಿಗಳು ಬೆಳಿಗ್ಗೆಯಿಂದಲೇ ಭರ್ತಿಯಾಗುತ್ತಿವೆ. ಎಳೆನೀರಿಗೂ ಸಾಕಷ್ಟು ಬೇಡಿಕೆಯಿದ್ದು ಫೆಬ್ರುವರಿ ಕೊನೆಯಲ್ಲಿ ₹25 ಅಥವಾ ₹30ಕ್ಕೆ ಮಾರಾಟವಾಗುತ್ತಿದ್ದ ಎಳೆನೀರನ್ನು ಈಗ ₹40ರಿಂದ ₹45ಕ್ಕೆ ಹೆಚ್ಚಿಸಿದ್ದಾರೆ. ಕಚೇರಿಗಳಲ್ಲಿ ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುವವರು ಬಿಸಿಲಿನ ತಾಪ ತಾಳದೇ ಏದುರಿಸು ಬಿಡುವ ಸ್ಥಿತಿ ನಿರ್ಮಾಣವಾಗಿದ್ದರೆ ಜಿಲ್ಲೆಯ ಹಲವು ಕಡೆ ರೈತರು ಕೆಂಡದಂತ ಬಿಸಿಲಿನ ಜೊತೆಗೆ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಕೂಲಿ ಕಾರ್ಮಿಕರು, ಹಮಾಲರು, ಆಟೊ ಚಾಲಕರು ಹೀಗೆ ಶ್ರಮಿಕ ಸಮುದಾಯಕ್ಕೆ ಬಿಸಿಲಿನ ’ಕೆಂಡ’ ಹೆಚ್ಚು ತಟ್ಟುತ್ತಿದೆ.

ಜಿಲ್ಲೆಯಾದ್ಯಂತ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ವ್ಯಾಪಕವಾಗಿರುವುದರಿಂದ ಜನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಪಾನೀಯ ಹೆಚ್ಚು ಸೇವಿಸಿ ದೇಹದಲ್ಲಿ ನೀರಿನ ಅಂಶ ಹೆಚ್ಚಿರುವಂತೆ ನೋಡಿಕೊಳ್ಳಬೇಕು.
ಡಾ. ಲಿಂಗರಾಜು ಟಿ. ಡಿಎಚ್‌ಒ ಕೊಪ್ಪಳ

ಆರೋಗ್ಯ ರಕ್ಷಣೆಗೆ ಇಲಾಖೆ ನೀಡುವ ಸಲಹೆಗಳೇನು?

  • ಪ್ರತಿಯೊಬ್ಬರೂ ಹೆಚ್ಚು ನೀರು ಕುಡಿಯಬೇಕು. ಮಜ್ಜಿಗೆ ಎಳೆನೀರು ಹಣ್ಣಿನ ರಸ ಹೆಚ್ಚಾಗಿ ಸೇವಿಸಬೇಕು.

  • ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು ಹಣ್ಣುಗಳನ್ನು ಸೇವಿಸುವುದು ಉತ್ತಮ.

  • ಸಡಿಲವಾದ ತೆಳುಬಣ್ಣದ ಹತ್ತಿಯ ಬಟ್ಟೆಯನ್ನು ಧರಿಸಿ

  • ಗಾಳಿಯಾಡುವ ಪಾದರಕ್ಷೆ ಧರಿಸಿ.

  • ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ ಛತ್ರಿ ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಪಾಲಿಸಿ.

  • ಬಿಸಿಲಿನಲ್ಲಿ ಜಮೀನು ಕೆಲಸ ರಸ್ತೆ ಕಾಮಗಾರಿ ಕೆಲಸ ಮಾಡುವ ಕಾರ್ಮಿಕರು ಬೆಳಿಗ್ಗೆ 11 ಗಂಟೆ ಒಳಗೆ ಹಾಗೂ ಸಂಜೆ 4 ಗಂಟೆ ನಂತರ ದುಡಿಯುವುದ ಉತ್ತಮ.

  • ಟೀ/ಕಾಫಿ ಹಾಗೂ ಹೆಚ್ಚು ಸಕ್ಕರೆ ಅಂಶ ಹೊಂದಿರುವ ಕಾರ್ಬೋನೇಟೆಡ್ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರಬೇಕು.

  • ಅನಾರೋಗ್ಯಕ್ಕೆ ಒಳಗಾದಾಗ ತುರ್ತು ಸಂದರ್ಭದಲ್ಲಿ 108 ಅಥವಾ 102 ಕರೆ ಮಾಡಿ.

ಚೆಕ್‌ಪೋಸ್ಟ್‌ಗಳಲ್ಲಿ ಡಬಲ್‌ ಬಿಸಿ

ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ 32 ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದ್ದು ಅಲ್ಲಿ ಸರತಿಯಲ್ಲಿ ದಿನಕ್ಕೆ ಮೂರು ಪಾಳೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳಿಗೆ ಡಬಲ್‌ ಬಿಸಿ ಕಾಡುತ್ತಿದೆ. ಒಂದೆಡೆ ಚುನಾವಣೆ ಕಾವು ಇನ್ನೊಂದೆಡೆ ಬಿಸಿಲಿನ ಕಾವು ಎರಡನ್ನೂ ಎದುರಿಸಬೇಕಾಗಿದೆ.  ಚೆಕ್‌ಪೋಸ್ಟ್‌ಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಸಿಬ್ಬಂದಿಗೆ ಕುಡಿಯುವ ನೀರಿಗಾಗಿ ಕ್ಯಾನ್‌ ಇರಿಸಲಾಗಿದೆ. ಈಗಿನ ಬಿಸಿಲ ಝಳಕ್ಕೆ ನೀರು ತಂದು ಒಂದು ತಾಸಿನಲ್ಲಿಯೇ ಬೆಚ್ಚಗೆ ಆಗುತ್ತಿವೆ. ಚೆಕ್‌ ಪೋಸ್ಟ್‌ ಟೆಂಟ್‌ನಲ್ಲಿ ಬೆಳಿಗ್ಗೆ ಕೆಲ ಹೊತ್ತಿನ ತನಕ ಮಾತ್ರ ತಂಪನೆಯ ವಾತಾವರಣ. ನಂತರ ಸೂರ್ಯ ಮುಳುಗುವ ತನಕವೂ ಬಿಸಿಲಿನಲ್ಲಿಯೇ ದಿನದೂಡಬೇಕಾದ ಸ್ಥಿತಿ ಇದೆ. ಹೆಸರು ಹೇಳಲು ಬಯಸದ ಸಿಬ್ಬಂದಿಯೊಬ್ಬರು ‘ಚೆಕ್‌ ಪೋಸ್ಟ್‌ ವ್ಯಾಪ್ತಿಯ ಸ್ಥಳೀಯ ಸಂಸ್ಥೆ ಸಿಬ್ಬಂದಿ ನೀರು ಒದಗಿಸುತ್ತಾರೆ. ಆದರೆ ಬೆಳಿಗ್ಗೆ ತಂದ ನೀರನ್ನು ದಿನಪೂರ್ತಿ ಕುಡಿಯುವುದು ಈಗಿನ ಸ್ಥಿತಿಯಲ್ಲಿ ಅಸಾಧ್ಯ. ಟೆಂಟ್‌ನಲ್ಲಿ ಝಳ ತಡೆಯಲು ಆಗುತ್ತಿಲ್ಲ. ಅನಿವಾರ್ಯವಾಗಿ ಕೆಲಸ ಮಾಡಬೇಕಾಗಿದೆ’ ಎಂದು ಹೇಳಿದರು.

ಕೊಪ್ಪಳದಲ್ಲಿ ನೆತ್ತಿ ಸುಡುವ ಬಿಸಿಲ ನಡುವೆಯೂ ಧಾನ್ಯಗಳ ಮೂಟೆಗಳನ್ನು ಹೇರಿಕೊಂಡ ಹೊರಟ ಬಂಡಿ ಹಮಾಲ
ಕೊಪ್ಪಳದಲ್ಲಿ ನೆತ್ತಿ ಸುಡುವ ಬಿಸಿಲ ನಡುವೆಯೂ ಧಾನ್ಯಗಳ ಮೂಟೆಗಳನ್ನು ಹೇರಿಕೊಂಡ ಹೊರಟ ಬಂಡಿ ಹಮಾಲ
ಕೊಪ್ಪಳದಲ್ಲಿ ಉರಿಬಿಸಿಲಲ್ಲೂ ಟಂಟಂ ಏರಿ ಕೆಲಸಕ್ಕೆ ಹೊರಟ ಕಾರ್ಮಿಕ ಮಹಿಳೆಯರು
ಕೊಪ್ಪಳದಲ್ಲಿ ಉರಿಬಿಸಿಲಲ್ಲೂ ಟಂಟಂ ಏರಿ ಕೆಲಸಕ್ಕೆ ಹೊರಟ ಕಾರ್ಮಿಕ ಮಹಿಳೆಯರು
ಬದುಕಿನ ಬಂಡಿ... ಉರಿ ಬಿಸಿಲ ನಡುವೆಯೂ ಕಾಯಕದಲ್ಲಿ ತೊಡಗಿದ್ದ ಟಾಂಗಾವಾಲಾ
ಬದುಕಿನ ಬಂಡಿ... ಉರಿ ಬಿಸಿಲ ನಡುವೆಯೂ ಕಾಯಕದಲ್ಲಿ ತೊಡಗಿದ್ದ ಟಾಂಗಾವಾಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT