ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿರಾಬಾದ್‌: ನದಿ ತೀರದಲ್ಲಿ ಈಗ ಸ್ವಚ್ಛತೆಯ ಹೊಳಪು

ಸೋದರಿ ನಿವೇದಿತಾ ಪ್ರತಿಷ್ಠಾನದ ಸದಸ್ಯೆಯರಿಂದ ಕಾರ್ಯ
Last Updated 12 ಫೆಬ್ರುವರಿ 2023, 6:14 IST
ಅಕ್ಷರ ಗಾತ್ರ

ಮುನಿರಾಬಾದ್‌ (ಕೊಪ್ಪಳ ಜಿಲ್ಲೆ): ಜಿಲ್ಲೆಯ ಹುಲಿಗಿಯಲ್ಲಿ ಹರಿದಿರುವ ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಭರತ ಹುಣ್ಣಿಮೆಗೆ ಲಕ್ಷಾಂತರ ಭಕ್ತರು ಸೇರಿದ್ದರು. ಆಗ ನದಿಯಲ್ಲಿ ತುಂಬಿ ಹೋಗಿದ್ದ ತ್ಯಾಜ್ಯವನ್ನು 50ಕ್ಕೂ ಹೆಚ್ಚು ಸದಸ್ಯೆಯರನ್ನು ಒಳಗೊಂಡ ‘ಸೋದರಿ ನಿವೇದಿತಾ ಪ್ರತಿಷ್ಠಾನ’ ತಂಡ ಸ್ವಚ್ಛಗೊಳಿಸುವ ಕೆಲಸ ಶನಿವಾರ ಆರಂಭಿಸಿದೆ.

‘ಸ್ವಚ್ಛ ಮನಸ್ಸು’ ಎನ್ನುವ ಪರಿಕಲ್ಪನೆಯಲ್ಲಿ ರಾಜ್ಯಾದಾದ್ಯಂತ ಸ್ವಚ್ಛತಾ ಅಭಿಯಾನದ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಈ ಮಹಿಳಾ ತಂಡದಲ್ಲಿ ಶಿವಮೊಗ್ಗ, ಬೆಂಗಳೂರು, ಕೊಪ್ಪಳ, ವಿಜಯನಗರ, ಧಾರವಾಡ, ದಕ್ಷಿಣ ಕನ್ನಡ ಹಾಗೂ ಬಳ್ಳಾರಿ ಜಿಲ್ಲೆಗಳ ಸದಸ್ಯೆಯರು ಇದ್ದಾರೆ. ಎಂಟು ವರ್ಷಗಳಿಂದ ರಾಜ್ಯದ ವಿವಿಧೆಡೆ ಸ್ವಚ್ಛತಾ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ.

ನಿಷೇಧವಿದ್ದರೂ ಕೆಲ ಭಕ್ತರು ಹುಲಿಗಿಯಲ್ಲಿ ನದಿಯಲ್ಲಿಯೇ ಪ್ರಾಣಿಬಲಿ ಮಾಡಿದ್ದರು. ದೇವರಿಗೆ ಉಡಿಸಲು ತಂದಿದ್ದ ವಸ್ತ್ರಗಳು, ಭಂಡಾರ, ಹೂವು, ಸ್ಯಾನಿಟರ್‌ ಪ್ಯಾಡ್‌ ಸೇರಿದಂತೆ ಅನೇಕ ತ್ಯಾಜ್ಯ ನದಿ ಹಾಗೂ ಸುತ್ತಮುತ್ತಲು ಬೀಸಾಡಲಾಗಿತ್ತು. ಸುಮಾರು ಒಂದು ಟ್ರಾಕ್ಟರ್‌ನಷ್ಟು ಬಟ್ಟೆಯ ತ್ಯಾಜ್ಯವೇ ನದಿಯಲ್ಲಿ ಹೂತು ಹೋಗಿತ್ತು. ಇದೆಲ್ಲವನ್ನೂ ಪ್ರತಿಷ್ಠಾನದ ಸದಸ್ಯೆಯರು ಸ್ವಚ್ಛ ಮಾಡಿದರು. ಭಾನುವಾರ ಸಂಜೆ ತನಕ ಈ ಕೆಲಸ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಚಾಲಕಿ ಡಾ. ರಚನಾ ಸಿ.ಆರ್‌. ‘ಪ್ರಜಾವಾಣಿ’ಗೆ ತಿಳಿಸಿದರು. ತ್ಯಾಜ್ಯದ ತೊಟ್ಟಿಯಂತಾಗಿದ್ದ ನದಿ ತೀರ ಮಹಿಳೆಯರ ಶ್ರಮದಿಂದಾಗಿ ಈಗ ಸ್ವಚ್ಛತೆಯಿಂದ ನಳನಳಿಸುತ್ತಿದೆ.

‘ನಾವೇ ಮಲೀನ ಮಾಡಿರುವ ಕಾರಣ ನಾವೇ ಸ್ವಚ್ಛ ಮಾಡಬೇಕಾಗಿದೆ. ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಸ್ಥಳೀಯರಿಗೆ ಪ್ರೇರಣೆಯಾಗಲಿ ಎನ್ನುವ ಕಾರಣಕ್ಕೆ ಮಹಿಳಾ ತಂಡ ರಚಿಸಿಕೊಂಡು ರಾಜ್ಯದ ಹಲವು ಕಡೆ ಸ್ವಚ್ಛತಾ ಕಾರ್ಯಗಳನ್ನು ಮಾಡಲಾಗುತ್ತಿದೆ’ ಎಂದು ರಚನಾ ಹೇಳಿದರು.

ಇಂದು ಅರತಿ: ಸ್ವಚ್ಛತಾ ಕಾರ್ಯ ಪೂರ್ಣಗೊಂಡ ಬಳಿಕ ಭಾನುವಾರ ಸಂಜೆ ಆರು ಗಂಟೆಗೆ ‘ನಮಾಮಿ ತುಂಗಭದ್ರೆ’ ಹೆಸರಿನಲ್ಲಿ ತುಂಗಾರತಿ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT