ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ತಾ.ಪಂ ಕೊಠಡಿಗಳಿಗಿಲ್ಲ 'ಉದ್ಘಾಟನೆ ಭಾಗ್ಯ'

55 ಲಕ್ಷ ವೆಚ್ಚ ಮಾಡಿ ನಾಲ್ಕು ಕೊಠಡಿ ನಿರ್ಮಾಣ
Published 19 ಫೆಬ್ರುವರಿ 2024, 6:00 IST
Last Updated 19 ಫೆಬ್ರುವರಿ 2024, 6:00 IST
ಅಕ್ಷರ ಗಾತ್ರ

ಕುಷ್ಟಗಿ: ವಿವಿಧ ಯೋಜನೆಗಳ ಅನುದಾನ ಬಳಸಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಾಲ್ಕು ಹೊಸ ಕೊಠಡಿ ನಿರ್ಮಿಸಿದರೂ ಉದ್ಘಾಟನೆ ಭಾಗ್ಯ ಬಂದಿಲ್ಲ. ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ಹಣ ಖರ್ಚು ತಗುಲಿದರೂ ಕೊಠಡಿಗಳು ಬಳಕೆಯಾಗದೆ ನಿರುಪಯುಕ್ತವಾಗಿರುವೆ.

ಅಂಗವಿಕಲರ ವಿಶ್ರಾಂತಿಗೆ, ನರೇಗಾ ಸಹಾಯಕ ನಿರ್ದೇಶಕರ ಕಚೇರಿ, ಎನ್‌ಆರ್‌ಎಲ್‌ಎಂ ಶಾಖೆ, ನರೇಗಾ ಕಚೇರಿಗಾಗಿ ಪ್ರತ್ಯೇಕ ಕಟ್ಟಡಗಳನ್ನು ಕಟ್ಟಲಾಗಿದೆ. ಈ ನಾಲ್ಕೂ ಕಟ್ಟಡಗಳು ನಿರ್ಮಾಣಗೊಂಡು ಒಂದೂವರೆ ವರ್ಷ ಕಳೆದಿದೆ. ಆದರೆ, ಅವುಗಳ ಉದ್ಘಾಟನೆ ನೆರವೇರಿಸಿಲ್ಲ. ಕಟ್ಟಡಗಳ ನಿರ್ಮಾಣದ ವಿಷಯದಲ್ಲಿ ಅಧಿಕಾರಿಗಳು ತೋರಿದ ಉತ್ಸಾಹ ಅವುಗಳನ್ನು ಬಳಕೆ ಮಾಡಿಕೊಳ್ಳುವಲ್ಲಿ ಮಾತ್ರ ಏಕಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಸರ್ಕಾರದ ಕೆಲಸ ಕಾರ್ಯಗಳಿಗೆ ತಾಲ್ಲೂಕು ಕೇಂದ್ರಕ್ಕೆ ಬರುವ ಅಂಗವಿಲಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ 2022-23ನೇ ಹಣಕಾಸು ವರ್ಷದಲ್ಲಿ ತಾಲ್ಲೂಕು ಪಂಚಾಯಿತಿ ಅನಿರ್ಬಂಧಿತ ಅನುದಾನದ ₹10 ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಗೊಂಡಿದೆ. ಹಣ ವ್ಯಯವಾದರೂ ಉದ್ದೇಶ ಮಾತ್ರ ಈಡೇರಿಲ್ಲ ಎಂಬ ದೂರು ಕೇಳಿಬಂದಿದೆ.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಶಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ಕಚೇರಿಗೆಂದು ಹಾಗೂ ನರೇಗಾ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಮುದ್ರಾಂಕ ಶುಲ್ಕದ ₹25 ಲಕ್ಷ ಖರ್ಚಿನಲ್ಲಿ ಎರಡು ಕಟ್ಟಡಗಳನ್ನು ನವೀಕರಿಸಲಾಗಿದೆ. ಅವುಗಳ ಕೀಲಿ ಸಹ ತೆಗೆದಿಲ್ಲ. ಅಚ್ಚರಿಯ ಎಂದರೆ ಹೊಸ ಕಟ್ಟಡಗಳು ನಿರ್ಮಾಣಗೊಂಡರೂ ಈ ಎರಡೂ ಶಾಖೆಗಳಿಗೆ ಸೇರಿದ ಬಹಳಷ್ಟು ಸಿಬ್ಬಂದಿ, ಗಣಕಯಂತ್ರ ಇಟ್ಟುಕೊಂಡು ಇನ್ನೂ ಇಕ್ಕಟ್ಟಾದ ಕೊಠಡಿಗಳಲ್ಲಿಯೇ ಕಷ್ಟಪಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ.

ತಾಲ್ಲೂಕು ಪಂಚಾಯಿತಿ ನಿರ್ವಹಿಸುವ ಪ್ರಮುಖ ಯೋಜನೆಗಳ ಪೈಕಿ ನರೇಗಾ ಯೋಜನೆಯೂ ಒಂದು. ಅದಕ್ಕಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆಯನ್ನೂ ಸೃಜಿಸಿದೆ. ಕರ್ತವ್ಯ ನಿರ್ವಹಿಸುವುದಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮುದ್ರಾಂಕ ಶುಲ್ಕದ ₹10 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿರುವ ಹೊಸ ಕಟ್ಟಡಕ್ಕೂ ಇನ್ನೂ ಉದ್ಘಾಟನೆ ಭಾಗ್ಯ ಬಂದಿಲ್ಲ.

’ಈ ಕಟ್ಟಡಗಳನ್ನು ನಿರ್ಮಿಸಿರುವುದರ ಉದ್ದೇಶವಾದರೂ ಏನು?. ಸರ್ಕಾರದ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುವ ಅಧಿಕಾರಿಗಳಿಗೆ ಚಾಟಿ ಬೀಸಬೇಕಿದ್ದ ಜಿಲ್ಲಾ ಪಂಚಾಯಿತಿಯೂ ನಿಷ್ಕ್ರೀಯವಾಗಿದೆ. ಇವುಗಳಿಂದ ಬೇನಾಮಿ ಗುತ್ತಿಗೆದಾರರಿಗೆ, ಸಾಮಗ್ರಿ ಪೂರೈಕೆದಾರರಿಗೆ ಮತ್ತು ಅಧಿಕಾರಿಗಳಿಗೆ ಮಾತ್ರ ಬಹಳಷ್ಟು ಪ್ರಯೋಜನ ದೊರೆತಿದೆ’ ಎಂದು ವೀರೇಶ ಮಠದ, ಸೋಮನಗೌಡ ಪಾಟೀಲ ಇತರರು ಆರೋಪಿಸಿದರು.

ತಾ.ಪಂ ಆವರಣ ಬಯಲು ಮೂತ್ರಾಲಯ: ಲಕ್ಷಾಂತರ ಹಣದಲ್ಲಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕಚೇರಿಗೆ ಬರುವವರಿಗಾಗಿ ಸುಸಜ್ಜಿತ ಮೂತ್ರಾಲಯ, ಶೌಚಾಲಯ ಕಟ್ಟಡ ನಿರ್ಮಿಸಲಾಗಿದೆ. ನೀರಿನ ವ್ಯವಸ್ಥೆ ಇಲ್ಲ. ಅವ್ಯವಸ್ಥೆಯಿಂದ ಗಬ್ಬೆದ್ದಿದೆ. ಮೂತ್ರಾಲಯ ಇದ್ದೂ ಇಲ್ಲದಂತಾಗಿದೆ. ಪುರುಷರು ಕಚೇರಿ ಆವರಣದ ಸಂದಿಗಳಲ್ಲೇ ನೈಸರ್ಗಿಕ ಕರೆ ನೀಗಿಸಿಕೊಳ್ಳುತ್ತಾರೆ. ಮಹಿಳೆಯರ ಪಾಡು ಹೇಳತೀರದಂತಿದೆ. ಅಧಿಕಾರಕ್ಕೆ ಬಂದು ವರ್ಷವಾಗುತ್ತ ಬಂದರೂ ಶಾಸಕ ದೊಡ್ಡನಗೌಡ ಪಾಟೀಲ ಈ ಕಚೇರಿಯ ಅವ್ಯವಸ್ಥೆಯನ್ನು ಗಮನಿಸಿಲ್ಲ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಸಾರ್ವಜನಿಕರು ಅತೃಪ್ತಿ ಹೊರಹಾಕಿದರು.

ಕಚೇರಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಿ ಉದ್ಘಾಟನೆ ಮಾಡಬೇಕೆಂಬ ಉದ್ದೇಶವಿತ್ತು. ಏನೇ ಆದರೂ ಶೀಘ್ರದಲ್ಲಿ ಕಟ್ಟಡಗಳ ಬಳಕೆಗೆ ಶಿಷ್ಟಾಚಾರದ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ.
ನಿಂಗಪ್ಪ ಮಸಳಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ
ಅಂಗವಿಕಲರ ಹೆಸರಿನ ಹೊಸ ಕಟ್ಟಡ ವರ್ಷವಾದರೂ ಬಾಗಿಲು ತೆರೆದಿಲ್ಲ. ಸರ್ಕಾರದ ಹಣ ಪೋಲು ಮಾಡುವಲ್ಲಿ ಅಧಿಕಾರಿಗಳು ಸಿದ್ಧಹಸ್ತರು ಎಂಬುದಕ್ಕೆ ಇದು ತಕ್ಕ ಉದಾಹರಣೆ.
ಶರಣಪ್ಪ ವಡ್ಡರ ಗೌರವ ಅಧ್ಯಕ್ಷ ತಾಲ್ಲೂಕು ಅಂಗವಿಕಲರ ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT