ಕೊಪ್ಪಳ: ಜಿಲ್ಲೆಯ ಕನಕಗಿರಿಯಲ್ಲಿ ಒಂದೂವರೆ ವರ್ಷದಿಂದ ಪೊಲೀಸರಿಗೆ ಸವಾಲಾಗಿದ್ದ ಶಾಲೆ ಹಾಗೂ ಕಾಲೇಜುಗಳು ಗೋಡೆಗಳ ಮೇಲೆ ಅಶ್ಲೀಲ ಬರಹ ಬರೆಯುತ್ತಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆ ಯುವಕ ತಾನು ಪ್ರೀತಿಸುತ್ತಿದ್ದ ಬಾಲಕಿ ತನ್ನೊಂದಿಗೆ ಮಾತು ಬಿಟ್ಟಾಗ ಹಾಗೂ ಕೋಪಗೊಂಡಾಗ ಗೋಡೆಯ ಮೇಲೆ ಅಶ್ಲೀಲವಾಗಿ ಬರೆದು ಸೇಡು ತೀರಿಸಿಕೊಳ್ಳುತ್ತಿದ್ದ ಎನ್ನುವ ಅಂಶ ಕೂಡ ಪೊಲೀಸರ ವಿಚಾರಣೆಯಲ್ಲಿ ಬಹಿರಂಗವಾಗಿದೆ. ಕನಕಗಿರಿಯ 27 ವರ್ಷದ ಮೆಹಬೂಬ್ ಸಿಕಲಗಾರ ಬಂಧಿತ. ಅಶ್ಲೀಲ ಬರಹದ ಹಾವಳಿಯಿಂದಾಗಿ ಸಾರ್ವಜನಿಕರು ಬೇಸತ್ತು ಹೋಗಿದ್ದರು. ಇಬ್ಬರು ವಿದ್ಯಾರ್ಥಿನಿಯರನ್ನು ಗುರಿಯಾಗಿರಿಸಿಕೊಂಡು ಬರೆಯುತ್ತಿದ್ದರಿಂದ ಅವರ ಕುಟುಂಬದವರು ಸಾಕಷ್ಟು ನೊಂದಿದ್ದರು.
ಈ ಕುರಿತು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮತ್ತು ಇದೇ ತಿಂಗಳು 11ರಂದು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ತಾಂತ್ರಿಕ ತನಿಖೆಗಾಗಿ ಹೆಚ್ಚಿನ ಜವಾಬ್ದಾರಿಯನ್ನು ಕೊಪ್ಪಳದ ಸಿಇಎನ್ ಪೊಲೀಸ್ ಠಾಣೆಗೆ ವಹಿಸಲಾಗಿತ್ತು. ಮೇಲಿಂದ ಮೇಲೆ ದೊಡ್ಡದಾಗಿ ಗೋಡೆಗಳ ಮೇಲೆ ಅಶ್ಲೀಲವಾಗಿ ಬರೆಯುತ್ತಿದ್ದರಿಂದ ಆ ವಿದ್ಯಾರ್ಥಿಗಳು ಶಾಲೆಗೆ ಹೋಗುವುದೇ ಸಮಸ್ಯೆಯಾಗಿತ್ತು.
ಎರಡು ವರ್ಷಗಳಿಂದ ಪ್ರೀತಿ: ಮೆಹಬೂಬ್ ಸಿಕಲಗಾರ ಬಾಲಕಿಯೊಬ್ಬಳನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಸ್ನೇಹಿತನೆಂದುಕೊಂಡು ಆ ಬಾಲಕಿ ಮೆಹಬೂಬ್ ಜೊತೆ ಆಗಾಗ ಮಾತನಾಡುತ್ತಿದ್ದಳು. ಬಾಲಕಿ ಮಾತನಾಡುವುದನ್ನು ನಿಲ್ಲಿಸಿದಾಗ ಅಶ್ಲೀಲವಾಗಿ ಬರೆಯುವುದು, ಬೇರೆ ಹುಡುಗರ ಹೆಸರಿನಲ್ಲಿ ಸಾಮಾಜಿಕ ತಾಣದ ಖಾತೆ ತೆರೆದು ಅಶ್ಲೀಲವಾಗಿ ಸಂದೇಶ ಕಳಿಸುವುದನ್ನು ಮಾಡಿದ್ದಾನೆ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.
ಇದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಖಚಿತಪಡಿಸಿದರು.
‘ನೀವು ಬಡವರಿದ್ದೀರಿ. ನಮ್ಮ ಮನೆಯಲ್ಲಿ ಸರ್ಕಾರಿ ನೌಕರಿ ಇರುವ ಹುಡುಗನನ್ನು ನೋಡಿ ಮದುವೆ ಮಾಡುವುದಾಗಿ ಹೇಳಿದ್ದಾರೆ. ಇನ್ನು ಮುಂದೆ ನನ್ನ ಜೊತೆ ಮಾತನಾಡಬೇಡ’ ಎಂದು ಬಾಲಕಿ ಹೇಳಿದ ನಂತರ ಆರೋಪಿ ಗೋಡೆ ಮೇಲೆ ಹೆಚ್ಚು ಅಶ್ಲೀಲವಾಗಿ ಬರೆದಿದ್ದಾನೆ. ಬಾಲಕಿಯ ಮಾತಿನಿಂದ ಮತ್ತಷ್ಟು ಕೆರಳಿದ ಮೆಹಬೂಬ್ ಅಶ್ಲೀಲವಾಗಿ ಬರೆದು ತಾನು ಪ್ರೀತಿಸುತ್ತಿದ್ದ ಬಾಲಕಿಯ ಸ್ನೇಹಿತರ ಹಾಗೂ ಅವರ ಸಹೋದರಿಯರ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಚಿತ್ರಗಳನ್ನು ಎಡಿಟ್ ಮಾಡಿ ಬಾಲಕಿಯ ಪಾಲಕರ ಮತ್ತು ಸ್ನೇಹಿತರ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾನೆ.
‘ಈ ಎಲ್ಲಾ ವಿಷಯಗಳನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ ಇನ್‌ಸ್ಟಾಗ್ರಾಂ ಖಾತೆಯ ಮೆಹಬೂಬ್‌ನದ್ದೇ ಆಗಿದ್ದು, ನಕಲಿ ಖಾತೆ ಸೃಷ್ಟಿಸಿದ್ದ’ ಎಂದು ಎಸ್ಪಿ ವಂಟಗೋಡಿ ಹೇಳಿದರು.
Quote - ಬಂಧಿತ ಆರೋಪಿ ಸಾರ್ವಜನಿಕವಾಗಿ ತನ್ನನ್ನು ತಾನು ಸಂಭಾವಿತ ಎಂದು ಬಿಂಬಿಸಿಕೊಂಡಿದ್ದ. ಆತ ಪ್ರೀತಿಸುತ್ತಿದ್ದು ಬಾಲಕಿಯನ್ನಾದ ಕಾರಣ ಪೋಕ್ಸೊ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗುವುದು ಯಶೋಧಾ ವಂಟಗೋಡಿ ಎಸ್ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.