ನೀರು ಬಿಡದಿದ್ದರೆ ಮುತ್ತಿಗೆ: ಶ್ರೀರಾಮುಲು
ಕೊಪ್ಪಳ: ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ತುಂಗಭದ್ರಾ ಜಲಾಶಯದ ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ಎರಡನೇ ಬೆಳೆಗೆ ನೀರು ಹರಿಸುವ ತೀರ್ಮಾನ ಕೈಗೊಳ್ಳದಿದ್ದರೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನ. 15ರಂದು ಸಭೆ ನಡೆಸಿ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. ಮುನಿರಾಬಾದ್‌ನಲ್ಲಿ ಗುರುವಾರ ನಡೆದ ನಾಲ್ಕೂ ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು ‘ನೀರು ಹರಿಸದಿದ್ದರೆ ತುಂಗಭದ್ರಾ ಜಲಾಶಯಕ್ಕೆ ಮುತ್ತಿಗೆ ಹಾಕಿ ನಾವೇ ಜಲಾಶಯಕ್ಕೆ ಹಾರಬೇಕಾಗುತ್ತದೆ. ಈ ಭಾಗದ ರೈತರನ್ನು ಸರ್ಕಾರ ಹಗುರವಾಗಿ ಪರಿಗಣಿಸಬಾರದು’ ಎಂದು ಎಚ್ಚರಿಕೆ ನೀಡಿದರು. ‘ಜಲಾಶಯಕ್ಕೆ ಕ್ರಸ್ಟ್‌ಗೇಟ್ ಅಳವಡಿಸುವ ವಿಚಾರದಲ್ಲಿ ₹52 ಕೋಟಿ ಅವ್ಯವಹಾರವಾಗಿದೆ’ ಎಂದೂ ಅವರು ಆರೋಪಿಸಿದರು.