ಕೊಪ್ಪಳ: ತಾಲ್ಲೂಕಿನ ಚಿಕ್ಕಬಗನಾಳ ಸಮೀಪದಲ್ಲಿರುವ ಧ್ರುವದೇಶ ಮೆಟಾಸ್ಟೀಲ್ ಪ್ರವೇಟ್ ಲಿಮಿಟೆಡ್ ಕಾರ್ಖಾನೆಯ ಮತ್ತೊಂದು ಘಟಕ ಆರಂಭದ ಕುರಿತು ಮಂಗಳವಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಮ್ಮಿಕೊಂಡಿದ್ದ ಅಹವಾಲು ಸಭೆಯಲ್ಲಿ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾದವು.
ಕಾರ್ಖಾನೆಯು ಈಗ 84 ಎಕರೆಯಲ್ಲಿ ಘಟಕ ವಿಸ್ತೀರ್ಣಕ್ಕೆ ಮುಂದಾಗಿದ್ದು ಜಿಲ್ಲಾಡಳಿತ ವತಿಯಿಂದ ಅಹವಾಲು ಸ್ವೀಕಾರ ಸಭೆ ನಡೆಯಿತು. ಕೆಲ ರೈತರು ಕಾರ್ಖಾನೆ ವಿಸ್ತರಣೆಯಾಗಲಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಯಾವುದೇ ಕಾರಣಕ್ಕೂ ಬೇಡವೇ ಬೇಡ ಎಂದು ವಿರೋಧ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಪರಿಸ್ಥಿತಿಗೆ ಹೋದಾಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.
ಅಂತಿಮವಾಗಿ ಮಾತನಾಡಿದ ಜಿಲ್ಲಾಧಿಕಾರಿ ನಲಿನ್ ಅತುಲ್ ‘ಇದು ಅಹವಾಲು ಸಭೆಯಾಗಿದ್ದು, ಅಭಿಪ್ರಾಯಗಳನ್ನು ಇಲ್ಲಿ ಕೆಲವರು ಕೊಟ್ಟಿದ್ದೀರಿ. ಮನವಿಗಳನ್ನೂ ದಾಖಲಿಸಿದ್ದೀರಿ. ಅವುಗಳನ್ನು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.
ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ವಿಜಯನಗರ ವಲಯ ಕಚೇರಿ ಹಿರಿಯ ಪರಿಸರ ಅಧಿಕಾರಿ ಬಿ.ಎಸ್.ಮುರಳೀಧರ, ಪರಿಸರ ಅಧಿಕಾರಿ ಸುರೇಶ್, ಕೊಪ್ಪಳ ತಹಶೀಲ್ದಾರ್ ವಿಠ್ಠಲ ಚೌಗುಲೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.