ಕವಿಹೃದಯದ ನೇತಾರ: ಮಾತಿನ ಸೊಗಸುಗಾರ

7
ಮೂರು ಬಾರಿ ಅಭಿಜಿತ ಜಿಲ್ಲೆಗೆ ಅಟಲ್ ಬಿಹಾರಿ ವಾಜಪೇಯಿ ಭೇಟಿ ಸ್ಮರಿಸಿದ ಹಿರಿಯರು

ಕವಿಹೃದಯದ ನೇತಾರ: ಮಾತಿನ ಸೊಗಸುಗಾರ

Published:
Updated:

ಕೊಪ್ಪಳ: ಜನಸಂಘದಿಂದ ರಾಜಕೀಯ ಜೀವನ ಪ್ರವೇಶ ಮಾಡಿದ ದೇಶದ ನೇತಾರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರದ್ದು ವರ್ಣಮಯ ವ್ಯಕ್ತಿತ್ವ. ತಮ್ಮ ದಣಿವರಿಯದ ಸಂಚಾರದ ನಡುವೆಯೂ ಅವಿಭಿಜಿತ ರಾಯಚೂರು ಜಿಲ್ಲೆಗೆ ಬಂದಾಗ ಕೊಪ್ಪಳಕ್ಕೆ ಭೇಟಿ ನೀಡಿದ್ದನ್ನು ಹಿರಿಯರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.

ಬದುಕಿನ ಯಾತ್ರೆಯನ್ನು ಗುರುವಾರ ಮುಗಿಸಿದ ಈ ಕವಿಹೃದಯದ ರಾಜಕಾರಣಿ ತಮ್ಮ ಸರಳ ನಡೆ, ನುಡಿಯಿಂದ ಹೆಸರುವಾಸಿಯಾಗಿದ್ದರು. ಕೊಪ್ಪಳದ ಗಡಿಯಾರ ಸ್ತಂಭದ ಬಳಿ 1977ರಲ್ಲಿ ಜನಸಂಘದ ಹಾಗೂ 1981 ಮತ್ತು 83ರಲ್ಲಿ ಬಿಜೆಪಿಯಿಂದ ಚುನಾವಣೆ ಪ್ರಚಾರಕ್ಕೆ ಮೂರು ಬಾರಿ ಬಂದಿದ್ದರು.

ಸಾರ್ವಜನಿಕ ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಹಿರಿಯರಾದ ಡಿ.ಬಿ.ದೇಸಾಯಿ ಈಗಲೂ ನೆನಪಿಸಿಕೊಳ್ಳುತ್ತಾರೆ. 'ಅಸ್ಖಲಿತ ಮಾತುಗಳಿಂದ ಕೇಳುಗರನ್ನು ಮಂತ್ರಮುಗ್ಧರನ್ನಾಗಿ ಮಾಡಿದ ಅಟಲ್, ಇಂದಿರಾ ಹಾಗೂ ಕಾಂಗ್ರೆಸ್ ಸರ್ಕಾರವನ್ನು ತಮ್ಮ ಹಾಸ್ಯ ಶೈಲಿಯಲ್ಲಿ ಛಾಟಿ ಬೀಸಿ ಜನರ ಮನ ಗೆದ್ದಿದ್ದರು' ಎಂದರು.

‘ಪ್ರಚಾರ ಭಾಷಣ ಮುಗಿಸಿ ರೈಲಿನಲ್ಲಿ ತೆರಳುವ ಮುಂಚೆ ಮನೆಯಿಂದ ದೇಸಾಯಿ ಅವರು ತಂದಿದ್ದ ಊಟ ಮಾಡಿದ್ದು ನೆನಪಿಸಿಕೊಂಡರು. ಇಂತಹ ಧೀಮಂತ ರಾಜಕಾರಣದ ಒಂದು ಕೊನೆಯ ಪರಂಪರೆಯ ಕೊಂಡಿ ಕಳಚಿದಂತೆ ಆಗಿದೆ. ಮುಂದೆ ಅವರ ಆದರ್ಶಗಳು ಮಾತ್ರ ಉಳಿಯಲಿವೆ’ ಎಂದು ಹೇಳಿದರು.

'ವಾಜಪೇಯಿ ತಮ್ಮ ಕರ್ತೃತ್ವ ಶಕ್ತಿಯಿಂದಲೇ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಸಾಂಗತ್ಯವೆಂದರೆ ಅಪಾರ ಅನುಭವದ ಕಣಜ. ಅವರ ಮಾರ್ಗದರ್ಶನ, ದೇಶಪ್ರೇಮದ ಸ್ಫೂರ್ತಿದಾಯಕ ಮಾತುಗಳು ಇಂದಿಗೂ ನಮ್ಮಲ್ಲಿ ಅನುರಣಿಸುತ್ತವೆ' ಎಂದು ನಗರದ ಹಿರಿಯ ವೈದ್ಯ, ಬಿಜೆಪಿ ಮುಖಂಡ ಡಾ.ಕೆ.ಜಿ.ಕುಲಕರ್ಣಿ ತಿಳಿಸಿದರು.

‘ಶಕ್ತಿ ರಾಜಕಾರಣದ ಎದುರು ಅಟಲ್ ಮತ್ತು ಅಡ್ವಾಣಿ ದಣಿವರಿಯದೇ ಕಾಂಗ್ರೆಸ್ ಎಂಬ ಹೆಮ್ಮರಕ್ಕೆ ಪರ್ಯಾಯವಾಗಿ ನಿಂತು ಭಾರತದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದ ಸಾಧನೆ ಕಡಿಮೆಯೇನಲ್ಲ. ದೇಶಭಕ್ತ ಮತ್ತು ನಿಸ್ವಾರ್ಥ ಕಾರ್ಯಕರ್ತರ ತ್ಯಾಗ ಶ್ರಮದಿಂದ ಪಕ್ಷ ಇಂದು ಅಧಿಕಾರಕ್ಕೆ ಬರುವಂತೆ ಆಯಿತು’ ಎಂದು ಹೇಳಿದರು.

‘ಡಾ.ಶಿಂಗಟಾಲೂರ ಅವರು ಜನಸಂಘದಿಂದ ಚುನಾವಣೆಗೆ ಸ್ಪರ್ಧಿಸಿದಾಗ ಪ್ರಚಾರ ಭಾಷಣಕ್ಕೆ ಬಂದಿದ್ದ ವಾಜಪೇಯಿ ಪಕ್ಷದ ವತಿಯಿಂದ ₹ 2.500 ಪಕ್ಷದ ನಿಧಿಯನ್ನು ಕೊಟ್ಟಿದ್ದರು. ಆದರೆ ಜನರ ಹಣ ಸ್ವೀಕರಿಸಲೇ ಇಲ್ಲ. ಚುರುಮರಿ, ಚೂಡಾದಲ್ಲಿಯೇ ಚುನಾವಣೆ ಮುಗಿದಿತ್ತು. ಆದರೆ ಕೆಲವೇ ಅಂತರಗಳಿಂದ ಶಿಂಗಟಾಲೂರ ಅವರು ಸೋತು ಹೋದದ್ದು ಇತಿಹಾಸ’ ಎಂದು ಡಾ. ಶಿಂಗಟಾಲೂರ ಅವರ ಪುತ್ರ ಚಂದ್ರಕಾಂತ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !