ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಧರ್ಮ, ಹಿಂದುತ್ವ ಬಿಜೆಪಿ ಆಸ್ತಿಯಲ್ಲ: ವೀಣಾ ಕಾಶಪ್ಪನವರ್

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರ್ ಟೀಕೆ
Last Updated 24 ಏಪ್ರಿಲ್ 2022, 6:50 IST
ಅಕ್ಷರ ಗಾತ್ರ

ಕೊಪ್ಪಳ: ಹಿಂದೂ ಧರ್ಮ ಹಾಗೂ ಹಿಂದುತ್ವ ಬಿಜೆಪಿ ಆಸ್ತಿಯಲ್ಲ. ಎಲ್ಲರ ಹಕ್ಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರ್ ಹೇಳಿದರು.

ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ದುರ್ಗಾದೇವಿ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಿ ಅಂಜನಾದ್ರಿ ದೇವಸ್ಥಾನಕ್ಕೆ ಬಂದು ದರ್ಶನ ಪಡೆದು ಮಾತನಾಡಿದರು.

ಹಿಂದೂ ಧರ್ಮ, ದೇವರ ಬಗ್ಗೆ ನಮಗೆ ಅಪಾರ ಭಕ್ತಿ ಇದೆ. ಸನಾತನ ಕಾಲದಿಂದ ಆಂಜನೇಯನಿಗೆ ಪೂಜೆ ಸಲ್ಲಿಸುತ್ತಾ ಬರಲಾಗಿದೆ. ಆದರೆ ಕೆಲವರು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದಾರೆ.

ಹಿಂದೂ ಧರ್ಮದ ಬಗ್ಗೆ ಅಷ್ಟು ಕಾಳಜಿ ಇದ್ದರೆ, ಹನುಮನ ಜನ್ಮಸ್ಥಳದ ಬಗ್ಗೆ ತಿರುಪತಿ ತಿರುಮಲ ದೇವಸ್ಥಾನ ಆಕ್ಷೇಪ ಎತ್ತಿದಾಗ ಧ್ವನಿ ಏಕೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ರಾಜಕೀಯ ಲಾಭ ಪಡೆಯಲು ಇಲ್ಲಿಗೆ ಬಂದಿಲ್ಲ. ಜನಜಾಗೃತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಪಾದಯಾತ್ರೆ ಮಾಡಲಾಗಿದೆ. ಅಂಜನಾದ್ರಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಶೀಘ್ರ ಯೋಜನೆಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ಹಿಂದೂಗಳಿಗೆ ಉತ್ತರ ಭಾರತದಲ್ಲಿನ ಅಯೋಧ್ಯೆ ಎಷ್ಟು ಪವಿತ್ರವೋ, ದಕ್ಷಿಣ ಭಾರತದಲ್ಲಿ ಅಂಜನಾದ್ರಿ ಅಷ್ಟೇ ಪವಿತ್ರ. ಹನುಮನ ಜನ್ಮಸ್ಥಳ ನಮ್ಮ ಜಿಲ್ಲೆಯಲ್ಲಿದೆ ಎಂಬುದು ಹೆಮ್ಮೆ. ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯಬಾರದು. ದೇಶಕ್ಕೆ ಸಾಮರಸ್ಯ, ಸಹಬಾಳ್ವೆ, ಭಾವೈಕ್ಯತೆ ಅಗತ್ಯ ಹೆಚ್ಚಿದೆ ಎಂದರು.

ಪಾದಯಾತ್ರೆಯಲ್ಲಿ ಹುರುಪು: ಆನೆಗೊಂದಿ ದುರ್ಗಾದೇವಿ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆ ಅಂಜನಾದ್ರಿ ಪರ್ವತ ಹಿಂಬದಿಯಿಂದ (ಪಾಠಶಾಲಾ ಮಾರ್ಗ) ಬೆಟ್ಟ ಏರಲಾಯಿತು. ಭಾವೈಕ್ಯತೆ ಸಾರುವ ದೃಷ್ಟಿಯಿಂದ, ಜೈ ಶ್ರೀರಾಮ್, ಜೈ ಆಂಜನೇಯ ಎಂಬ ಘೋಷಗಳನ್ನು ಕೂಗುತ್ತಾ ಪಾದಯಾತ್ರೆ ನಡೆಸಲಾಯಿತು.

ಈ ವೇಳೆಯಲ್ಲಿ ಮಾಜಿ ಜಿ.ಪಂ ಸದಸ್ಯೆ ಲಲಿತಾ ರಾಣಿ, ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮಿದ್ ಮನಿಯಾರ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಕೀರಪ್ಪ ಎಮ್ಮಿ, ನಗರಸಭೆ ಸದಸ್ಯ ಸೋಮನಾಥ ಬಂಡಾರಿ, ಮಾಜಿ ಜಿ.ಪಂ ಸದಸ್ಯ ಅಮರೇಶ ಗೋನಾಳ,ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಮಾಲತಿ ನಾಯಕ, ಮುಖಂಡರಾದ ಕೆ.ವಿ.ಬಾಬು, ಹನುಮಂತಪ್ಪ ಅರಸನಕೇರಿ, ಸೀಮಣ್ಣ ಗಬ್ಬೂರು, ವಿಶ್ವನಾಥ ಮಾಲಿಪಾಟೀಲ್, ಗೀತಾ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT