ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ವೈಭವದ ವೀರಭದ್ರೇಶ್ವರ ಪ್ರಭಾವಳಿ ಉತ್ಸವ

Published 10 ಮೇ 2024, 5:35 IST
Last Updated 10 ಮೇ 2024, 5:35 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಸುಲೇಪೇಟದ ವೀರಭದ್ರೇಶ್ವರ ದೇವರ ಜಾತ್ರೆ ನಿಮಿತ್ತ ಗುರುವಾರ ಬೆಳಿಗ್ಗೆ ವೈಭವದ ಪ್ರಭಾವಳಿ ಉತ್ಸವವು, ಶ್ರದ್ಧೆ–ಭಕ್ತಿಯಿಂದ ಜರುಗಿತು.

ಬೆಳಿಗ್ಗೆ 7.30ಕ್ಕೆ ಆರಂಭವಾದ ಪ್ರಭಾವಳಿ ಮೆರವಣಿಗೆಯು, ಮುಖ್ಯಬೀದಿ ಮೂಲಕ ಖಟ್ವಾಂಗೇಶ್ವರ ಮಠದ ಬಳಿಯ ತೇರು ಮೈದಾನ ತಲುಪಿತು. ತೇರು ಮೈದಾನದಲ್ಲಿ ಅಗ್ನಿ ಕುಂಡಕ್ಕೆ ಜೋಡು ಪಲ್ಲಕ್ಕಿಯೊಂದಿಗೆ 5 ಸುತ್ತು ಪ್ರದಕ್ಷಿಣೆ ಹಾಕಿ, ನಂತರ ಪ್ರಭಾವಳಿ ಭೂಸ್ಪರ್ಶ ಮಾಡಿತು. ಭಕ್ತರು, ತಾವು ನಿಂತ ಸ್ಥಳದಲ್ಲಿಯೇ ಭೂಮಿಗೆ ಮುಟ್ಟಿ ನಮಸ್ಕರಿಸಿದರು. ಪುರವಂತರು ಧಾರ್ಮಿಕ ವಿಧಿ–ವಿಧಾನ ಪೂರೈಸಿ ಕೆಂಡ ಹಾಯ್ದರು.

ದೇಸಾಯಿ ಮನೆತನದ ಮಹಿಳೆಯರು, ಆರತಿಯೊಂದಿಗೆ ಕೆಂಡ ಹಾಯ್ದ ನಂತರ ಸಾವಿರಾರು ಭಕ್ತರು ಕೆಂಡ ಹಾಯ್ದು ಹರಕೆ ಸಲ್ಲಿಸಿದರು. ನಂತರ ಮತ್ತೆ ಆರಂಭವಾದ ಪ್ರಭಾವಳಿ ಮುಖ್ಯ ಬೀದಿಗಳ ಮೂಲಕ ದೇವಾಲಯಕ್ಕೆ ವಾಪಸ್ ಕೊಂಡೊಯ್ಯಲಾಯಿತು.

ಗ್ರಾಮದ ಹಿಂದೂ–ಮುಸಲ್ಮಾನರು ಪಾಲ್ಗೊಂಡು ಭಾವೈಕ್ಯತೆ ಮೆರೆದರು. ಗ್ರಾಮದಲ್ಲಿ ಜಾತ್ರೆ ಮುಗಿಯುವವರೆಗೆ ಶುಭ ಕಾರ್ಯ ನಡೆಯುವುದಿಲ್ಲ. ಜಾತ್ರೆಗಾಗಿ ಗ್ರಾಮದ ಯುವಕರು ಬಿಳಿ ಬನಿಯನ್ ಮತ್ತು ಲುಂಗಿ ಧರಿಸಿ ಪ್ರಭಾವಳಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಒಂದು ತಿಂಗಳು ನಡೆಯುವ ಜಾತ್ರಾ ಮಹೋತ್ಸವದಲ್ಲಿ 18 ದಿನಗಳವರೆಗೆ ಪಲ್ಲಕ್ಕಿ ಮೆರವಣಿಗೆ, 11 ದಿನ ಉಚ್ಚಾಯಿ ಮೆರವಣಿಗೆ ಹಾಗೂ ಕೊನೆಯ ದಿನ ಪ್ರಭಾವಳಿ ನಡೆಯುತ್ತದೆ.

ಶಂಕ್ರಯ್ಯ ಸ್ವಾಮಿ ಅವಧೂತ, ಪಂಪಾಪತಿ ದೇವರು, ಸಿದ್ರಾಮಯ್ಯ ಸ್ವಾಮಿ, ಜಗಪ್ಪ ಮುತ್ಯಾ, ನಂದಯ್ಯ ಸ್ವಾಮಿ ಕಪೂರ ಪಾಲ್ಗೊಂಡಿದ್ದರು. ಸಿಪಿಐ ರಾಘವೇಂದ್ರ, ಎಸ್‌ಐ ನಂದಿನಿ ಬಂದೋಬಸ್ತ್‌ ಒದಗಿಸಿದ್ದರು.

ಏನಿದು ಪ್ರಭಾವಳಿ?: ಎರಡು ಮರದ ಬೃಹತ್ ದಿನ್ನೆಗಳ ಮೇಲೆ ಪ್ರಭಾವಳಿ ನಿರ್ಮಿಸಿ, ಅದರಲ್ಲಿ ಉತ್ಸವ ಮೂರ್ತಿ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪಿಸಿ, ಮಿಂಚು ಕಾಗದ ಹೂವುಗಳಿಂದ ಅಲಂಕರಿಸುತ್ತಾರೆ. ಹಗ್ಗದಿಂದ ಬಿಗಿದು ಕಟ್ಟಿರುತ್ತಾರೆ. ಪ್ರಭಾವಳಿಯಲ್ಲಿ ಶಂಕ್ರಯ್ಯ ಸ್ವಾಮಿ ಅವಧೂತ ನಿಂತು ಪ್ರಭಾವಳಿಯ ಸಮತೋಲನ ಕಾಪಾಡಿದರು.

ಪ್ರಭಾವಳಿಯ ಎರಡು ದಿನ್ನೆಗಳಲ್ಲಿ ಒಂದು ಹಳೆ ಊರಿನ ಮತ್ತೊಂದು ಹೊಸ ಊರಿನ ಯುವಕರು ಹೊತ್ತು ಸಾಹಸ ಮೆರೆಯುತ್ತಾರೆ. ಹಿಂದಕ್ಕೆ ಮುಂದಕ್ಕೆ ಮೇಲಕ್ಕೆ ಕೆಳಕ್ಕೆ..ಹೀಗೆ ಎಳೆದಾಡುತ್ತ ನಡೆಸುವ ಉತ್ಸವ ಯುವಕರ ಉತ್ಸಾಹ ಇಮ್ಮಡಿಸುತ್ತದೆ. ಪ್ರಭಾವಳಿಯಲ್ಲಿ ಒಂದು ಕಡೆಗೆ ಭಾರ ಹೆಚ್ಚಾದಾಗ ಸಮತೋಲನೆಗಾಗಿ ಸ್ವಾಮೀಜಿ ಸ್ಥಾನಪಲ್ಲಟ ಮಾಡುತ್ತಾರೆ.

ಪವಾಡ ಸದೃಶ ಪಾರಾದ ಭಕ್ತರು...
ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ನಡೆದ ಉಚ್ಚಾಯಿ ಮೆರವಣಿಗೆಯಲ್ಲಿ ವೀರಗಾಸೆ ಪ್ರದರ್ಶನ ಮೇ 7ರಂದು ರಾತ್ರಿ ನಡೆಸಲಾಗಿದೆ. ವೀರಗಾಸೆ ಕಲೆ ವೀಕ್ಷಣೆಗೆ ಮಾಳಿಗೆಯ ಮನೆಯೊಂದರ ಮೇಲೆ ನಿಂತಿದ್ದರು. ಜನರ ಭಾರ ತಾಳದೇ ಕುಸಿದಿದೆ. ಸುಮಾರು 20ರಿಂದ 25 ಜನ ಮನೆಯೊಳಗಡೆ ಬಿದ್ದರೂ ಯಾರಿಗೂ ಅಪಾಯವಾಗಿಲ್ಲ. ಈ ಮೂಲಕ ಪವಾಡ ಸದೃಶ್ಯ ರೀತಿಯಲ್ಲಿ ಭಕ್ತರು ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT