ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ | ಕೆಲಸ ಮಾಡದಿದ್ದರೂ ಹಣ ಪಾವತಿ!

ಪಶು ಆಸ್ಪತ್ರೆ ದುರಸ್ತಿ ನೆಪದಲ್ಲಿ ನಕಲಿ ಬಿಲ್‌ ಸೃಷ್ಟಿ
Last Updated 3 ಜೂನ್ 2020, 10:42 IST
ಅಕ್ಷರ ಗಾತ್ರ

ಕುಷ್ಟಗಿ (ಕೊಪ್ಪಳ): ತಾಲ್ಲೂಕಿನ ವಿವಿಧ ಪಶು ಆಸ್ಪತ್ರೆಗಳ ದುರಸ್ತಿ ಹೆಸರಿನಲ್ಲಿ ನಕಲಿ ಬಿಲ್‌ ಸೃಷ್ಟಿಸಿ ಬೇನಾಮಿ ಗುತ್ತಿಗೆದಾರರಿಗೆ ಹಣ ಪಾವತಿಸಿದ ಪ್ರಕರಣದ ಬೆಳಕಿಗೆ ಬಂದಿದ್ದು, ಈ ಸಂಬಂಧದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

2019-20ನೇ ಹಣಕಾಸು ವರ್ಷದಲ್ಲಿ ಜಿಲ್ಲಾ ಪಂಚಾಯಿತಿ ಕ್ರಿಯಾಯೋಜನೆಯಲ್ಲಿ ತಾಲ್ಲೂಕಿನ ಹನುಮಸಾಗರ, ಹಿರೇಮನ್ನಾಪುರ ಪಶು ಆಸ್ಪತ್ರೆಗಳ ದುರಸ್ತಿಗೆ ತಲಾ ₹1.50 ಲಕ್ಷ ಮತ್ತು ಕೊರಡಕೇರಾ, ಹೂಲಗೇರಾ, ಮುದೇನೂರು ಗ್ರಾಮಗಳ ಪಶು ಆಸ್ಪತ್ರೆಗಳ ದುರಸ್ತಿಗೆ ತಲಾ ₹1 ಲಕ್ಷದಂತೆ ಅನುದಾನ ಬಿಡುಗಡೆ ಮಾಡಲಾಗಿತ್ತು.

2019ರ ಜುಲೈ 9ರಂದು ಈ ಎಲ್ಲ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಡಳಿತಾತ್ಮಕ ಅನುಮೋದನ ನೀಡಿದ್ದರು. ಈ ಕಾಮಗಾರಿಯ ನಿರ್ವಹಣೆಯನ್ನು ಇಲ್ಲಿಯ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್ ಉಪ ವಿಭಾಗಕ್ಕೆ ವಹಿಸಲಾಗಿತ್ತು.

ಗ್ರಾಮಾಂತರ ಪ್ರದೇಶದಲ್ಲಿರುವ ಪಶು ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಿ ಪಶುಸಂಗೋಪನಾ ಇಲಾಖೆಯ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಅನುಕೂಲ ಕಲ್ಪಿಸುವುದು ಜಿಲ್ಲಾ ಪಂಚಾಯಿತಿ ಉದ್ದೇಶವಾಗಿತ್ತು. ಆದರೆ, ಕೆಲಸ ನಡೆಯದಿದ್ದರೂ ಗುತ್ತಿಗೆದಾರರಿಗೆ ಲಕ್ಷಾಂತರ ಹಣ ಪಾವತಿಸುವಲ್ಲಿ ಮಾತ್ರ ಪಂಚಾಯತ್‌ರಾಜ್‌ ಇಲಾಖೆ ಎಂಜಿನಿಯರ್‌ಗಳು ಮುತುವರ್ಜಿ ವಹಿಸಿರುವುದು ಸ್ಪಷ್ಟವಾಗಿದೆ.

ಹಿರೇಮನ್ನಾಪುರದ ಪಶು ಆಸ್ಪತ್ರೆಗೆ ಕೇವಲ ಬಣ್ಣ ಬಳಿಯುವುದು ಮತ್ತು ಅಲ್ಪ ಪ್ರಮಾಣದ ವಿದ್ಯುತ್‌ ಸಂಪರ್ಕ ದುರಸ್ತಿಗೊಳಿಸಿದ್ದು ಬಿಟ್ಟರೆ ಬೇರೆ ಯಾವ ಕೆಲಸವೂ ನಡೆದಿಲ್ಲ. ಆದರೆ, ದುರಸ್ತಿ ಹೆಸರಿನಲ್ಲಿ ಮಾತ್ರ ₹1.50 ಲಕ್ಷ ಹಣ ಎಂ.ಎಸ್.ಬಂಡೇರ ಎಂಬ ಗುತ್ತಿಗೆದಾರರ ಹೆಸರಿನಲ್ಲಿ ಖರ್ಚು ಮಾಡಲಾಗಿದೆ.

ಉಳಿದಂತೆ ಹನುಮಸಾಗರ, ಕೊರಡಕೇರಾ, ಹೂಲಗೇರಾ ಮತ್ತು ಮುದೇನೂರು ಗ್ರಾಮಗಳ ಪಶು ಆಸ್ಪತ್ರೆಯಲ್ಲಿ ಯಾವುದೇ ಕೆಲಸ ನಿರ್ವಹಿಸಿರುವುದು ಕಂಡುಬಂದಿಲ್ಲ. ಆದರೂ ಕಿರಿಯ ಎಂಜಿನಿಯರ್‌ಗಳು ಈ ಗ್ರಾಮಗಳ ಆಸ್ಪತ್ರೆ ದುರಸ್ತಿಗೊಂಡಿರುವ ಬಗ್ಗೆ ಅಳತೆ ಪುಸ್ತಕದಲ್ಲಿ (ಎಂ.ಬಿ) ಮಾಹಿತಿ ನಮೂದಿಸಿರುವುದು ಸ್ಪಷ್ಟವಾಗಿದೆ. ಅದೇ ರೀತಿ ಗುತ್ತಿಗೆದಾರರಾದ ಎಂ.ಎಸ್.ಬಂಡೇರ, ದುರುಗೇಶ ದಾಸರ ಎಂಬುವವರ ಹೆಸರಿಗೆ ಹಣ ಪಾವತಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಆಗಿರುವ ‘ಗಾಂಧಿ ಸಾಕ್ಷಿ ಕಾಯಕ’ದಲ್ಲಿ ಬಿಲ್‌ ಪಾವತಿಯಾಗಿರುವ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಅಧಿಕಾರಿ ಹೇಳಿಕೆ: ಈ ಕಾಮಗಾರಿಗೆ ಸಂಬಂಧಿಸಿದಂತೆ ಇಲ್ಲಿಯ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅರುಣ ಅವರನ್ನು ಮಾಹಿತಿಗಾಗಿ ಸಂಪರ್ಕಿಸಿದಾಗ ‘ಆಸ್ಪತ್ರೆ ದುರಸ್ತಿ ಕುರಿತು ಉಪ ನಿರ್ದೇಶಕರಿಂದ ಪತ್ರ ಬಂದಿದೆ. ಅದರಂತೆ ಹಿರೇಮನ್ನಾಪುದಲ್ಲಿ ಬಣ್ಣ ಬಳಿಯಲಾಗಿದೆ. ಆದರೆ, ಉಳಿದ ನಾಲ್ಕು ಆಸ್ಪತ್ರೆಗಳಲ್ಲಿ ಯಾವುದೇ ಕೆಲಸ ನಡೆದೇ ಇಲ್ಲ. ಕೆಲಸ ಮಾಡುವುದಾಗಿ ಹೇಳಿ ಹೋದವರು ಮರಳಿ ಬಂದಿಲ್ಲ. ಈ ಬಿಲ್‌ ಪಾವತಿಯಾಗಿರುವ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ’ ಎಂದು ಸ್ಪಷ್ಟಪಡಿಸಿದರು. ಯಾವುದೇ ಕೆಲಸ ನಡೆದಿಲ್ಲ ಎಂಬುದನ್ನು ಕೆಲ ಪಶು ಆಸ್ಪತ್ರೆಗಳ ಸಿಬ್ಬಂದಿಯೂ ಹೇಳಿದರು.

ಎಇಇ ಹೇಳಿಕೆ: ಈ ಪಶು ಆಸ್ಪತ್ರೆಗಳು ದುರಸ್ತಿಯಾಗದಿರುವುದು, ಹಣ ಪಾವತಿಯಾಗಿರುವ ಬಗ್ಗೆ ಬಗ್ಗೆ ಪಂಚಾಯಿತ್‌ ರಾಜ್‌ ಎಂಜಿನಿಯರಿಂಗ್‌ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶಂಕರ ಮಳಗಿ ಅವರನ್ನು ಸಂಪರ್ಕಿಸಿದಾಗ, 'ಈ ಬಗ್ಗೆ ಗೊತ್ತಿಲ್ಲ, ಪರಿಶೀಲನೆ ನಡೆಸಿ ಮಾಹಿತಿ ನೀಡುತ್ತೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT