ಬುಧವಾರ, ಏಪ್ರಿಲ್ 8, 2020
19 °C
₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣ: ನೀರಿನ ಕೊರತೆ ನೀಗಿಸುವ ವಿಶ್ವಾಸ

ಕೊಪ್ಪಳ: ಜಿಲ್ಲಾಡಳಿತ ಭವನದಲ್ಲಿ ಮಳೆ ನೀರು ಸಂಗ್ರಹ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲಾಡಳಿತ ಭವನಕ್ಕೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುತ್ತಿದ್ದು, ಈ ಬವಣೆಯನ್ನು ಶಾಶ್ವತವಾಗಿ ನೀಗಿಸಲು ಮಳೆನೀರು ಸಂಗ್ರಹಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಜಿಲ್ಲಾಡಳಿತ ಭವನದ ಕಟ್ಟಡಗಳ ಮೇಲೆ ಬೀಳುವ ಮಳೆ ನೀರು ವ್ಯರ್ಥ್ಯವಾಗದಂತೆ ಸಂಗ್ರಹಿಸಿ, ಮರು ಬಳಕೆ ಮಾಡಿಕೊಳ್ಳುವ ಅಂದಾಜು ₹ 2 ಕೋಟಿ ವೆಚ್ಚದ ಯೋಜನೆ ಇದಾಗಿದೆ.

ಬೇಸಿಗೆಯಲ್ಲಿ ಭವನದ ಸುತ್ತಲಿನ ಕೆಲವು ಕೊಳವೆಬಾವಿಗಳು ಬತ್ತಿ, ಕುಡಿಯಲು, ಬಳಸಲು ನೀರು ಇಲ್ಲದಂತೆ ಆಗುತ್ತದೆ. ಅಲ್ಲದೆ ಸುಂದರವಾದ ಉದ್ಯಾನಗಳು ಕೂಡ ನೀರಿಲ್ಲದೆ ಒಣಗುತ್ತಿದ್ದವು. 

ಒಟ್ಟು 43 ಎಕರೆ ವಿಸ್ತಾರದಲ್ಲಿ ಹರಡಿರುವ ಆವರಣದಲ್ಲಿ ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ಕಟ್ಟಡಗಳು ಇವೆ. 8 ಎಕರೆ ವ್ಯಾಪ್ತಿಯಲ್ಲಿರುವ ಜಿಲ್ಲಾ ಆಡಳಿತ ಭವನದ ಕೇಂದ್ರ ಕಚೇರಿಯ ಮೇಲೆ ವಾರ್ಷಿಕ ಸರಾಸರಿ ಮಳೆಯ ಆಧಾರದ ಮೇಲೆ ನಿತ್ಯ 40 ಸಾವಿರ ಲೀಟರ್ ನೀರು ಸಂಗ್ರಹಿಸಬಹುದಾಗಿದೆ. ಹೀಗೆ ಸಂಗ್ರಹವಾಗುವ ನೀರನ್ನು ಉದ್ಯಾನ ಮತ್ತು ವಸತಿಗೃಹಗಳ ಉಪಯೋಗಕ್ಕೆ ಬಳಸಿಕೊಂಡು, ಕೊಳವೆಬಾವಿಗಳಿಗೆ ಮರು ಪೂರಣ ಮಾಡುವ ಯೋಚನೆ ಇದೆ.

ಆಡಳಿತ ಭವನದ ಆರಂಭದಲ್ಲಿ ಹಾಕಲಾಗಿದ್ದ ಆಕೆಸಿಯಾ ಸೇರಿದಂತೆ ಮುಂತಾದ ನಿಷೇಧಿತ ಸಸ್ಯ, ಮರಗಳನ್ನು ತೆರವುಗೊಳಿಸಲಾಗಿತ್ತು. ಅಂದಾಜು ₹20 ಲಕ್ಷ ವೆಚ್ಚದಲ್ಲಿ ಹೊಸ ಉದ್ಯಾನ ನಿರ್ಮಾಣ ಮಾಡಲಾಗುತ್ತಿದೆ. ಮೂರು ತಿಂಗಳು ಕಳೆದರೆ ಉದ್ಯಾನದ ಚಹರೆ ಬದಲಾಗಲಿದೆ. ಬೇಸಿಗೆಯಲ್ಲಿ ಈ ಗಿಡಗಳಿಗೆ ನೀರು ಅವಶ್ಯಕ. ಮಳೆ ನೀರು ಸಂರಕ್ಷಣೆ ನೀರು ವಿಧಾನ ನೆರವಿಗೆ ಬರಲಾಗಲಿದೆ ಎನ್ನಲಾಗುತ್ತಿದೆ.

ಯಶಸ್ವಿ ಪ್ರಯೋಗ

ಈಗಾಗಲೇ ಜಿಲ್ಲಾಧಿಕಾರಿ ನಿವಾಸಕ್ಕೆ ಮಳೆ ನೀರು ಕೊಯ್ಲು ಅಳವಡಿಕೆ ಮಾಡಿಕೊಂಡಿದ್ದು, ಮಳೆಗಾಲದಲ್ಲಿ ಕಟ್ಟಡದ ಮೇಲೆ ಬಿದ್ದ ನೀರನ್ನು ಸಂಗ್ರಹಿಸಿ, ಕೊಳವೆಬಾವಿಗೆ ಮರುಪೂರಣ ಮಾಡಲಾಗಿದೆ. ಇದರಿಂದ ಅಂತರ್ಜಲ ವೃದ್ಧಿಯಾಗಿದ್ದು, ಯಾವುದೇ ನೀರಿನ ಕೊರತೆ ಇಲ್ಲಿಯವರೆಗೆ ಉಂಟಾಗಿಲ್ಲ. ಇದೇ ಮಾದರಿಯನ್ನು ಈಗ ದೊಡ್ಡ ಪ್ರಮಾಣದಲ್ಲಿ ಅಳವಡಿಕೆ ಮಾಡಲಾಗುತ್ತದೆ.

ಮಳೆ ನೀರು ಸಂಗ್ರಹಿಸುವುದರ ಜೊತೆಗೆ ಬಳಸಿ ಹೊರಗೆ ಹೋಗುವ ನೀರನ್ನು ಶುದ್ಧೀಕರಿಸಿ ಉದ್ಯಾನ, ಶೌಚಾಲಯಕ್ಕೆ ಬಳಕೆ ಮಾಡಿಕೊಳ್ಳುವುದಕ್ಕೂ ಟ್ಯಾಂಕ್‌ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ ಇದೆ.

ಮುಂಬರುವ ಮುಂಗಾರು ಮಳೆ ಆರಂಭಗೊಳ್ಳುವ ವೇಳೆಗೆ ಬಹುತೇಕ ಕಾಮಗಾರಿ ಪೂರ್ಣಗೊಳಿಸಿ ಮಳೆ ನೀರು ಸಂಗ್ರಹಿಸುವ ಪ್ರಾತ್ಯಕ್ಷಿಕೆ ನಡೆಯಲಿದೆ. ವೈಜ್ಞಾನಿಕವಾಗಿ ಯೋಜನೆ ರೂಪಿಸಿದ್ದು, ನಗರಸಭೆ ಪೌರಾಯುಕ್ತ ಮಂಜುನಾಥ ಭಜಂತ್ರಿ ನೇತೃತ್ವದಲ್ಲಿ ತಾಂತ್ರಿಕ ಕೆಲಸಗಳು
ನಡೆಯುತ್ತವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)