ಮಂಗಳವಾರ, ಸೆಪ್ಟೆಂಬರ್ 28, 2021
24 °C
ಅಧಿಕಾರಿಗಳ ವಿರುದ್ಧ ಶಾಸಕ ಬಯ್ಯಾಪುರ ಅಸಮಾಧಾನ

ಕೊಪ್ಪಳ | ಆಲಮಟ್ಟಿ ಮುಖ್ಯಕೊಳವೆಯಲ್ಲಿ ನೀರು ಸೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಆಲಮಟ್ಟಿ ಜಲಾಶಯದಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಮುಖ್ಯಕೊಳವೆಯಲ್ಲಿ ಪದೇ ಪದೇ ಸೋರಿಕೆ ಉಂಟಾಗುತ್ತಿದ್ದು ಅಪಾರ ಪ್ರಮಾಣದ ನೀರು ಹರಿದು ಹಳ್ಳ ಸೇರುತ್ತಿರುವುದು ಕಂಡುಬಂದಿದೆ.

ನಗರ ನೀರು ಸರಬರಾಜು ಮತ್ತು ಒಳಚರಂಡಿ (ಕೆಯುಡಬ್ಲೂಎಸ್) ಮಂಡಳಿ ಈ ಕೊಳವೆಮಾರ್ಗ ನಿರ್ಮಾಣಮಾಡಿದ್ದು ನೀರು ಪೂರೈಕೆ ಮತ್ತು ದುರಸ್ತಿ ಮತ್ತಿತರೆ ಕೆಲಸಗಳ ನಿರ್ವಹಣೆಯ ಹೊಣೆಯನ್ನು ಕೂಡ ಮಂಡಳಿಗೆ ವಹಿಸಲಾಗಿದೆ. ಆದರೆ ಕೊಳವೆ ಒಡೆಯುತ್ತಿರುವುದು ಮುಂದುವರೆದಿದ್ದು ನೀರು ಸರಬರಾಜಿನಲ್ಲಿ ಬಹಳಷ್ಟು ವ್ಯತ್ಯಾಸವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಶಾಸಕ ಅಸಮಾಧಾನ: ಕೊಳವೆಮಾರ್ಗ ಒಡೆದ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಅಮರೇಗೌಡ ಬಯ್ಯಾಪುರ ಅವರು, ಒಳಚರಂಡಿ ಮಂಡಳಿ ಮತ್ತು ಪುರಸಭೆ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನ ಹೊರಹಾಕಿದರು. ಕಳೆದ ವರ್ಷವಷ್ಟೇ ₹ 3 ಕೋಟಿ ವೆಚ್ಚದಲ್ಲಿ ಮೋಟರ್‌ಪಂಪ್‌ಗಳನ್ನು ಒದಗಿಸಲಾಗಿದೆ. ನಿರ್ವಹಣೆ ವ್ಯವಸ್ಥೆ ಸರಿ ಇಲ್ಲ. ಮಂಡಳಿಗೆ ಪುರಸಭೆಯವರು ಸಮರ್ಪಕ ರೀತಿಯಲ್ಲಿ ನಿರ್ವಹಣೆ ವೆಚ್ಚದ ಬಾಕಿ ಪಾವತಿಸುತ್ತಿಲ್ಲ. ಮಂಡಳಿಯ ಎಂಜಿನಿಯರ್‌ಗಳು ಕೂಡ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸುತ್ತಿಲ್ಲ. ಗಂಡ ಹೆಂಡತಿ ನಡುವೆ ಕೂಸು ಬಡವಾಯಿತು ಎನ್ನುವಂತೆ ಈ ಎರಡೂ ಸಂಸ್ಥೆಗಳ ಮಧ್ಯೆ ಪಟ್ಟಣದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದರು.

ಎರಡು ಉಪ ವಿಭಾಗ ಒಬ್ಬರೇ ಎಇಇ
ನೀರು ಸರಬರಾಜು ಒಳಚರಂಡಿ ಮಂಡಳಿಯ ಹುನಗುಂದ ಉಪವಿಭಾಗದಲ್ಲಿ ಕಳೆದ ಒಂದು ವರ್ಷದಿಂದಲೂ ಎಇಇ ಮತ್ತು ಸಹಾಯಕ ಎಂಜಿನಿಯರ್‌ ಇಲ್ಲ. ಇಲ್ಲಿಗೆ ವರ್ಗಾವಣೆಯಾಗಿರುವ ಎಇಇ ರವೀಂದ್ರ ಎಂಬುವವರು ಈವರೆಗೂ ಅಧಿಕಾರ ವಹಿಸಿಕೊಂಡಿಲ್ಲ. ಸದ್ಯ ಬಾಗಲಕೋಟೆ ಉಪ ವಿಭಾಗದ ಎಇಇ ಹೆಚ್ಚುವರಿಯಾಗಿ ಇಲ್ಲಿಯ ಹೆಚ್ಚುವರಿ ಅಧಿಕಾರ ವಹಿಸಿಕೊಂಡಿದ್ದಾರೆ. ಬಾಗಲಕೋಟೆ, ಹುನಗುಂದ ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಹತ್ತು ಪಟ್ಟಣಗಳು ಇದ್ದು ಬಾಗಲಕೋಟೆಯಲ್ಲಿ ಒಬ್ಬ ಸಹಾಯಕ ಎಂಜಿನಿಯರ್‌ ಮಾತ್ರ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿ ನಿರ್ವಹಣೆ ಹಣವನ್ನೂ ಸ್ಥಳೀಯ ಸಂಸ್ಥೆಗಳು ಬಾಕಿ ಉಳಿಸಿಕೊಳ್ಳುತ್ತಿವೆ. ಎರಡು ವರ್ಷದ ಅವಧಿಯಲ್ಲಿ ಕುಷ್ಟಗಿ ಪುರಸಭೆ ₹ 1.10 ಕೋಟಿ ಪೈಕಿ ₹ 55 ಲಕ್ಷ ಮಾತ್ರ ಪಾವತಿಸಿದೆ. ಹುನಗುಂದ ಪುರಸಭೆ ₹ 35 ಲಕ್ಷದ ಪೈಕಿ ಕೇವಲ ₹ 5 ಲಕ್ಷ ಪಾವತಿಸಿದೆ. ಇಳಕಲ್ಲ ಪುರಸಭೆ ₹ 1 ಕೋಟಿ ಬದಲಾಗಿ ₹ 50 ಲಕ್ಷ ಪಾವತಿಸಿದೆ. ಪೈಪ್‌ಲೈನ್‌, ಯಂತ್ರಗಳ ದುರಸ್ತಿಗೆ ಹಣ ಇಲ್ಲ ಎಂದು ಮಂಡಳಿ ಮೂಲಗಳು ವರಿಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು