ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಗೇರಿ: ನೀರಿಗಾಗಿ ಗ್ರಾಮಸ್ಥರ ಪರದಾಟ

ಹದಿನೈದು ದಿನಗಳಿಂದ ತಪ್ಪದ ಗೋಳು: ಅರ್ಧ ಪ್ರದೇಶಕ್ಕೆ ನೀರೇ ಇಲ್ಲ
Last Updated 2 ಮೇ 2021, 6:40 IST
ಅಕ್ಷರ ಗಾತ್ರ

ಅಳವಂಡಿ: ಸಮೀಪದ ಕವಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗುಡಗೇರಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಗ್ರಾಮಸ್ಥರು ಪರದಾಡುವಂತೆ ಆಗಿದೆ.

ಬೇಸಿಗೆ ಆರಂಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ಗ್ರಾಮಕ್ಕೆ ನೀರು ಎಂಬ ಜೀವ ಜಲ ಯಾವಾಗ ಬರುತ್ತಿದೆ ಎಂದು ಬಾಯ್ದೆರೆದು ಕಾಯ್ದು ಕುಳಿತುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.

ಸಮಸ್ಯೆ ಏನು?: ಗ್ರಾಮಕ್ಕೆ ಸಮೀಪದ ತುಂಗಭದ್ರಾ ನದಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮಕ್ಕೆ ಬರುವ ನೀರನ್ನು ಯಂತ್ರಗಳ ಮೂಲಕ ಆರಂಭದಲ್ಲಿಯೇ ಎತ್ತಿ ಹಾಕಿಕೊಳ್ಳುತ್ತಿರುವುದರಿಂದ ಅರ್ಧ ಭಾಗಕ್ಕೆನೀರೇ ಬರುತ್ತಿಲ್ಲ.ಗುಡಗೇರಿ ಗ್ರಾಮದ ಜನತಾ ಕಾಲೊನಿಯ ಜನರು ಹದಿನೈದು ದಿನಗಳಿಂದ ನೀರಿಲ್ಲದೇ ಪರಿತಪಿಸುತ್ತಿದ್ದಾರೆ.

ಕಾಲೊನಿಯಲ್ಲಿ40 ರಿಂದ 50 ಕುಟಂಬಗಳು ವಾಸ ಮಾಡುತ್ತಿದ್ದು, ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿ ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಈ ಸಮಸ್ಯೆ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಗಮನಕ್ಕೆ ತರಲಾಗಿದೆ. ನೀರು ಪೂರೈಕೆ ಮಾಡುವ ವಾಟರ್‌ ಮೆನ್‌ಗಳನ್ನು ಕೇಳಿದರೆ ಬೆಳಿಗ್ಗೆ ಬಿಡ್ತೀವಿ, ಸಂಜೆ ಬಿಡ್ತೀವಿ, ಕರೆಂಟ್ ಬಂದ್ ಮೇಲೆ ಬಿಡ್ತೀವಿ ಎಂಬ ಉಡಾಫೆ ಉತ್ತರ ನೀಡುತ್ತಾರೆ. ಈ ಗ್ರಾಮದ ಕಾಲೊನಿಯ ಜನರು ನೀರಿಗಾಗಿ ಕಾಯುವುದೇ ಒಂದು ಕೆಲಸವಾಗಿದೆ. ಗ್ರಾಮದ ಮುಖ್ಯ ಬೀದಿಗಳಲ್ಲಿ ನೀರು ಸರಬರಾಜಾದರೆಜನತಾ ಕಾಲೊನಿಗೆ ನೀರು ಬರುವುದಿಲ್ಲ.

ಮನೆಯ ದಿನನಿತ್ಯದ ಚಟುವಟಿಕೆಗಳಿಗೆ ನೀರು ಅತ್ಯಮೂಲ್ಯವಾಗಿದೆ. ಆದರೆ ನಮ್ಮ ಮಕ್ಕಳಿಗೆ ಜಳಕ, ಮುಸುರೆ, ಬಟ್ಟೆ ಒಗೆಯಲು ನೀರಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿ ಸ್ಪಂದನೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದ್ದರಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸದ ವಾಟರ್‌ಮೆನ್‌ ಅವರನ್ನು ಕೆಲಸದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸುತ್ತಾರೆ.ಸಮಸ್ಯೆಗೆ ಸ್ಪಂದಿಸದಿದ್ದರೆ ಮೇಲಧಿಕಾರಿಗಳಿಗೆ ದೂರು ನೀಡುವುದಾಗಿ ಗ್ರಾಮದ ಚನ್ನಮ್ಮ, ದೇವಮ್ಮ, ಚನ್ನವ್ವ, ಹುಸೇನಬಿ, ಸಯ್ಯದಬೀ, ಹೊನ್ನುರಬಿ ವಾಲೀಕಾರ, ಲಕ್ಷವ್ವ ಗಾಣಿ, ಕಾಳಮ್ಮ, ಚಾಂದಬೀ ಅಗ್ರಹಿಸಿದ್ದಾರೆ.

ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ಕಾಲೊನಿಯ ನಿವಾಸಿಗಳು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಜನರಿಗೆ ಅತ್ಯಂತ ಅವಶ್ಯವಾದ ಜೀವ ಜಲವನ್ನು ಪೂರೈಕೆ ಮಾಡಬೇಕಾದ ಪಂಚಾಯಿತಿ ಕುಂಟು ನೆಪ ಹೇಳುತ್ತಾ ಕಾಲಹರಣ ಮಾಡುತ್ತಿದೆ ಎಂಬ ಆರೋಪ
ಕೇಳಿ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT