ಭಾನುವಾರ, ಸೆಪ್ಟೆಂಬರ್ 26, 2021
21 °C
ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ನೀರಿನ ತೀವ್ರ ಅಭಾವ

ರೋಗಿಗಳ ಸ್ಟ್ರೆಚರ್ ಮೇಲೆ ನೀರು ಸಾಗಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ತಾಲ್ಲೂಕು ಕೇಂದ್ರದಲ್ಲಿರುವ ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆಯಾಗುತ್ತಿದ್ದು ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ತೀವ್ರ ತೊಂದರೆ ಅನುಭವಿಸತ್ತಿದ್ದಾರೆ.

ಹೊರ ಮತ್ತು ಒಳ ನೂರಾರು ರೋಗಿಗಳ ನಿತ್ಯ ಒತ್ತಡ ಇರುವ ಈ ಆಸ್ಪತ್ರೆ ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳ ಬಹಳಷ್ಟು ಹಳ್ಳಿಗಳಿಗೆ ಕೇಂದ್ರ ಸ್ಥಳ ಆಗಿರುವುದರಿಂದ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದೇ ರೀತಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ, ಡಿ ದರ್ಜೆ ನೌಕರರಿಗೆ ಸೇರಿದ 11 ಕುಟುಂಬಗಳು ಇಲ್ಲಿನ ವಸತಿಗೃಹಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ನೀರು ಪೂರೈಕೆ ಇಲ್ಲದೆ ಅಲ್ಲಿನ ಸಿಬ್ಬಂದಿಗೆ ತಲೆನೋವಿನ ಸಂಗತಿಯಾಗಿದೆ.

ಆಸ್ಪತ್ರೆಯಲ್ಲಿನ ಶೌಚಾಲಯಗಳು, ಶಸ್ತ್ರಚಿಕಿತ್ಸೆ, ಡಯಾಲಿಸಿಸ್‌, ಪ್ರಯೋಗಾಲಯ ಕೊಠಡಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಅಗತ್ಯವಾಗಿರುತ್ತದೆ. ಆಸ್ಪತ್ರೆ ಆವರಣದಲ್ಲಿರುವ ಕೊಳವೆಬಾವಿಯಲ್ಲಿ ಅಂತರ್ಜಲ ಕಡಿಮೆಯಾಗಿ ನೀರಿನ ಲಭ್ಯತೆ ಕಡಿಮೆಯಾಗಿದೆ.  ಅಲ್ಲದೆ ಮೋಟರ್‌ ದುರಸ್ತಿಗೆ ಬರುವುದು, ಆಸ್ಪತ್ರೆ ಮತ್ತು ಸಿಬ್ಬಂದಿ ವಸತಿಗೃಹಗಳಿಗೆ ಸಂಪರ್ಕ ಕಲ್ಪಿಸುವ ಕೊಳವೆಗಳು ಹಳೆಯದಾಗಿದ್ದು ಅವುಗಳಲ್ಲಿ ಗಿಡಗಳ ಬೇರುಗಳು, ಫ್ಲೋರೈಡ್‌ ಅಂಶ ಇರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಪುರಸಭೆ ನಿರ್ಲಕ್ಷ್ಯ: ಆಸ್ಪತ್ರೆಗೆ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ವೈದ್ಯರು ಪತ್ರ ಬರೆದರೂ ಅದನ್ನು ಪುರಸಭೆ ನಿರ್ಲಕ್ಷಿಸುತ್ತ ಬಂದಿದೆ ಹಾಗಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕೆ ಪುರಸಭೆ ಮುಖ್ಯಾಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಬ್ಬಂದಿ ತಿಳಿಸಿದರು.

ಕೆಲ ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡು ಪರದಾಡಿದ ವಸತಿಗೃಹ ಸಿಬ್ಬಂದಿ ನೀರು ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಮುಖ್ಯವೈದ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಟ್ಯಾಂಕರ್‌ ಮೂಲಕ ಕಡಿಮೆ ಪ್ರಮಾಣದಲ್ಲಿ ನೀರು ಪೂರೈಸಲಾಗುತ್ತಿತ್ತು. ರೋಗಿಗಳನ್ನು ಸಾಗಿಸುವ ಸ್ಟ್ರೆಚರ್‌ಗಳ ಮೇಲೆ ಕೊಡಗಳನ್ನು ಇಟ್ಟುಕೊಂಡು ಡಿ ದರ್ಜೆ ನೌಕರರು ವಸತಿಗೃಹ ಮತ್ತು ಆಸ್ಪತ್ತೆಗೆ ನೀರು ಸಾಗಿಸುತ್ತಿದ್ದುದು ಸಾರ್ವಜನಿಕರ ಗಮನಸೆಳೆಯಿತು.

ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆಯಲು ಯತ್ನಿಸಿದರೆ ಮುಖ್ಯವೈದ್ಯಾಧಿಕಾರಿ ಡಾ.ಚಂದ್ರಕಾಂತ ಮಂತ್ರಿ ಅವರ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು. ಈ ಕುರಿತು ವಿವರಿಸಿದ ಕೆಲ ಸಿಬ್ಬಂದಿ, ಪುರಸಭೆಯಿಂದ ಸದ್ಯಕ್ಕಂತೂ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಬೇಸಿಗೆಯಲ್ಲಿ ಯಾವಾಗ ಮತ್ತೆ ಸಮಸ್ಯೆ ಎದುರಾಗುತ್ತದೆ ಎಂಬ ಆತಂಕವಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು