ಭಾನುವಾರ, ಜುಲೈ 25, 2021
21 °C
ತುಂಗಭದ್ರಾ ನೀರಾವರಿ ಯೋಜನೆಯ 115ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ‌ ನಿರ್ಧಾರ

ಕೊಪ್ಪಳ: 18ರಿಂದ ನ.30ರವರೆಗೆ ಕಾಲುವೆಗೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: 'ತುಂಗಭದ್ರಾ ಜಲಾಶಯದಿಂದ ಜುಲೈ 18ರಿಂದ ನವೆಂಬರ್ 30ರವರೆಗೆ ಎಡ ಮತ್ತು ಬಲ ದಂಡೆ ಸೇರಿದಂತೆ ಎಲ್ಲ ಕಾಲುವೆಗಳಿಗೆ ನೀರು ಹರಿಸಲಾಗುವುದು' ಎಂದು ಸಚಿವ ಆನಂದ್‌ ಸಿಂಗ್‌ ಪ್ರಕಟಿಸಿದರು.

ತಾಲ್ಲೂಕಿನ ಮುನಿರಾಬಾದ್‌ ಕಾಡಾ ಕಚೇರಿಯಲ್ಲಿ ಸೋಮವಾರ ನಡೆದ ತುಂಗಭದ್ರಾ ನೀರಾವರಿ ಯೋಜನೆಯ 115ನೇ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ವರ್ಷ ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ನಿರೀಕ್ಷೆಯಂತೆ ಜಲಾಶಯದ ಒಳಹರಿವು ಹೆಚ್ಚಿದೆ. ಸದ್ಯ 35.942 ಟಿಎಂಸಿ ನೀರು ಸಂಗ್ರಹವಿದ್ದು, ಮುಂಗಾರು‌ ಹಂಗಾಮಿಗೆ ಕೃಷಿ ಚಟುವಟಿಕೆಗಳಿಗೆ ಜು.18ರಿಂದ ತುಂಗಭದ್ರಾ ‌ಜಲಾಶಯದ ಎಡದಂಡೆ, ಬಲದಂಡೆ ಹಾಗೂ ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು‌ ನಿರ್ಧರಿಸಲಾಗಿದೆ ಎಂದರು.

ಎಡದಂಡೆ ಕಾಲುವೆ: ಜುಲೈ 18ರಿಂದ ನವೆಂಬರ್ 30ರವರೆಗೆ 4,100 ಕ್ಯುಸೆಕ್‌ನಂತೆ ಅಥವಾ ನೀರಿನ ಲಭ್ಯತೆ ಮೇರೆಗೆ ಕಾಲುವೆಗಳಿಗೆ ನೀರು ಹರಿಸಲಾಗುವುದು. ಕುಡಿಯುವ‌ ನೀರಿನ ಸೌಲಭ್ಯಕ್ಕಾಗಿ ಗಣೇಕಲ್ ಜಲಾಶಯ ಭರ್ತಿಯಾಗುವವರೆಗೆ ಜು. 18ರಿಂದ 25ರ ವರೆಗೆ ಎಲ್ಲ ವಿತರಣಾ ಕಾಲುವೆ ಬಂದ್ ಮಾಡಲಾಗುವುದು ಎಂದರು.

ಬಲದಂಡೆ ಕಾಲುವೆ: ಜುಲೈ 18ರಿಂದ ನವೆಂಬರ್ 30ರವರೆಗೆ ನಿತ್ಯ 1130 ಕ್ಯುಸೆಕ್‌ ನೀರು ಹರಿಸಲಾಗುವುದು. ಬಲದಂಡೆ‌ ಕೆಳ ಮಟ್ಟದ ಕಾಲುವೆ ಗಳಿಗೆ 700 ಕ್ಯುಸೆಕ್‌ ನೀರು ಹರಿಸಲಾಗುವುದು.

ರಾಯಬಸವಣ್ಣ ಕಾಲುವೆ: ಜೂನ್ 1 ರಿಂದ ರಾಯಬಸವಣ್ಣ ಕಾಲೇಜುಗಳಿಗೆ ನಿತ್ಯ 235 ಕ್ಯುಸೆಕ್‌ ನೀರನ್ನು ಹರಿಸಲಾಗುತ್ತಿದ್ದು, ಡಿಸೆಂಬರ್ 12ರವರೆಗೆ ನೀರು ಬಿಡಲಾಗುವುದು.

ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗಳಿಗೆ ಜುಲೈ 18ರಿಂದ ನವೆಂಬರ್ 30ರ ವರೆಗೆ 25 ಕ್ಯುಸೆಕ್‌ ನೀರು ಹರಿಸಲಾಗುವುದು. ನೀರಿನ ಲಭ್ಯತೆ ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ‌ಮೊದಲೋ ಅದು ಅನ್ವಯವಾಗಲಿದೆ ಎಂದರು.

‘ಕೊನೆಯ ಭಾಗದ ರೈತರಿಗೆ ನೀರು ತಲುಪುವುದಿಲ್ಲ' ಎಂದು ಸಿಂಧನೂರು, ಕಂಪ್ಲಿ, ಶಿರಗುಪ್ಪ ಭಾಗದ ರೈತರು ಸಭೆಯಲ್ಲಿ ಧ್ವನಿ ಎತ್ತಿದರು. ಜುಲೈ 15ರಿಂದಲೇ ನೀರು ಬಿಡುವಂತೆ ಮನವಿ ಮಾಡಿದರು. ಜಲಾಶಯದ ಮುಂದಿನ ಭಾಗದ ಕೆಲವು ಮುಖಂಡರು ಜು.25 ರಿಂದ ನೀರು ಬಿಡುವಂತೆ ಆಗ್ರಹಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಆನಂದ್‌ ಸಿಂಗ್‌  ಎಲ್ಲ ರೈತರಿಗೆ ಸಮ್ಮತವಾಗುವಂತೆ ಜು.18ರಿಂದ ನೀರು ಬಿಡುವುದಾಗಿ ಪ್ರಕಟಿಸಿದರು. ಇದಕ್ಕೆ ಬಹುತೇಕ ಸದಸ್ಯರು ಒಪ್ಪಿಗೆ ಸೂಚಿಸಿದರು.

ಕೊಪ್ಪಳ ಸಂಸದ ಸಂಗಣ್ಣ ಕರಡಿ, ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಸೇರಿದಂತೆ ಅಚ್ಚಕಟ್ಟು ಭಾಗದ ಸಂಸದರು ಸಭೆಯಲ್ಲಿ ಹಾಜರಿದ್ದರು.

ಕೊನೆಯ ಭಾಗದವರೆಗೆ ನೀರು

ನೀರು ಬಿಡುವಲ್ಲಿ ತಾರತಮ್ಯ ಮತ್ತು ಅಸ್ತವ್ಯಸ್ತವಾದರೂ ಪ್ರತಿಭಟನೆಗೆ ಸಜ್ಜಾಗಿದ್ದ ರೈತರು ಸಮಿತಿಯ ನೀರು ಬಿಡುವ ನಿರ್ಧಾರದಿಂದ ಮುಖಂಡರು ಸಮಾಧಾನವಾಗಿದ್ದು ಸಭೆಯಲ್ಲಿ ಕಂಡು ಬಂತು. 

ಈಗಾಗಲೇ ಜಲಾಶಯ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಭರದಿಂದ ಸಾಗಿದ್ದು, ರೈತರು ಭತ್ತದ ಸಸಿ ಮಡಿ ಹಾಕಿ ಸಿದ್ದತೆ ಬಹುತೇಕ ಪೂರ್ಣಗೊಳಿಸಿದ್ದಾರೆ.

ಕಾಲುವೆಗಳ ದುರಸ್ತಿ ‌ಕಾರ್ಯ ಬಹುತೇಕ‌ ಪೂರ್ಣಗೊಂಡಿದ್ದು, ಕೊನೆ ಭಾಗದ ರೈತರಿಗೂ‌ ನೀರು ತಲುಪಿಸಲು ಅಗತ್ಯ‌ಕ್ರಮಗಳನ್ನು ಕೈಗೊಳ್ಳುವೆ ಭರವಸೆಯನ್ನು ಈ ಸಭೆಯಲ್ಲಿ ನೀಡಿದರು. ರೈತ ಮುಖಂಡರು ಇದ್ದರು.

***

ಕೊನೆಯ ಭಾಗಕ್ಕೆ ನೀರು ಮುಟ್ಟುವವರೆಗೆ ಉಪಕಾಲುವೆ ತೆರೆಯದಂತೆ ಮತ್ತು ಅಕ್ರಮವಾಗಿ ಪಂಪ್‌ಸೆಟ್‌ ಮೂಲಕ ನೀರು ಪಡೆಯುವುದು ಕಂಡುಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಲಾಗಿದೆ

- ಆನಂದ್‌ ಸಿಂಗ್‌, ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು