ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಾಭದ್ರ ಕಾಲುವೆಗೆ ನೀರು: ಕುಡಿಯಲು ಮಾತ್ರ ಬಳಕೆ

ಮುನಿರಾಬಾದ್ ಕಾಡಾ ಕಚೇರಿ: 111ನೇ ನೀರಾವರಿ ಸಲಹಾ ಸಮಿತಿ ಸಭೆ
Last Updated 16 ಜುಲೈ 2018, 13:30 IST
ಅಕ್ಷರ ಗಾತ್ರ

ಕೊಪ್ಪಳ: ’ತುಂಗಭದ್ರ ಜಲಾಶಯದಿಂದ ಕುಡಿಯುವ ನೀರಿಗಾಗಿ ಜುಲೈ 16ರಿಂದಲೇ ನೀರು ಬಿಡಲು ಆದೇಶ ಮಾಡಲಾಗಿದೆ’ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.

ಅವರು ಸೋಮವಾರ ಮುನಿರಾಬಾದ್‌ ಕಾಡಾ ಕಚೇರಿಯಲ್ಲಿ ನಡೆದ 111ನೇ ನೀರಾವರಿ ಸಲಹಾ ಸಮಿತಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಈ ಭಾಗದ ರೈತರ ಬೇಡಿಕೆಗೆ ಅನುಗುಣವಾಗಿ ಎರಡು ಬೆಳೆಗಳಿಗೆ ನೀರು ನೀಡಲು ಉದ್ದೇಶಿಸಲಾಗಿದೆ. ಕುಡಿಯಲು ನೀರು ಬಿಡಲು ಯಾವುದೇ ತಕರಾರು ಇಲ್ಲ. ಆಂಧ್ರ ಭಾಗದ ರೈತರು ಕುಡಿಯಲು ನೀರು ಬಿಡಲು ಯಾವುದೇ ಅಡ್ಡಿ ಮಾಡಿಲ್ಲ. ಜುಲೈ 20ರಿಂದ ನವೆಂಬರ್ 30ರವರೆಗೆ 4,100 ಕ್ಯುಸೆಕ್‌ನಂತೆ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗುತ್ತದೆ. ಇದನ್ನು ರೈತರು ತಮ್ಮ ಬೆಳೆಗಳಿಗೆ ಬಳಸಿಕೊಳ್ಳಬಹುದು’ ಎಂದು ಸಚಿವರು ಹೇಳಿದರು.

ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜುಲೈ 20ರಿಂದ ನವೆಂಬರ್‌ವರೆಗೆ 1,200 ಕ್ಯುಸೆಕ್‌ನಂತೆ ಹಾಗೂ ಬಲದಂಡೆ ಕೆಳಮಟ್ಟದ ಕಾಲುವೆಗೆ 750 ಕ್ಯುಸೆಕ್‌, ರಾಯಬಸವಣ್ಣ ಕಾಲುವೆಗೆ ಪ್ರತಿದಿನ 200 ಕ್ಯುಸೆಕ್‌ನಂತೆ ನೀರು ಬಿಡಲಾಗುವುದು. ಹಿಂಗಾರು ಹಂಗಾಮಿನ ನೀರು ಬಿಡಲು ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದರು.

ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜುಲೈ 20ರಿಂದ ಪ್ರತಿದಿನ 25 ಕ್ಯುಸೆಕ್‌ನಂತೆ ನೀರು ಬಿಡಲಾಗುವುದು. ಅಲ್ಲದೆ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಗಣೇಕಲ್ ಜಲಾಶಯಕ್ಕೆ 1 ಟಿಎಂಸಿ ನೀರು ಹರಿಸಲು ನಿರ್ಧರಿಸಲಾಗಿದೆ. ಅಲ್ಲದೆ ಜಿಂದಾಲ್ ಕಾರ್ಖಾನೆಗೆ 2.50 ಟಿಎಂಸಿ ನೀರು ಬಿಡಲು ಸಭೆ ಒಪ್ಪಿಗೆ ನೀಡಿದೆ ಎಂದು ಸಚಿವರು ತಿಳಿಸಿದರು.

ಮಾಧ್ಯಮದವರಿಗೆ ಪ್ರವೇಶ ನಿರಾಕರಣೆ:

ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯದ ನೀರು ಹಂಚಿಕೆ ಸಭೆಗೆ ಮೂರು ಜಿಲ್ಲೆಯ ಜನಪ್ರತಿನಿಧಿಗಳು, ರೈತ ಮುಖಂಡರು, ಅಚ್ಚುಕಟ್ಟು ಪ್ರದೇಶದ ಸದಸ್ಯರು, ಇಲಾಖೆಯ ಅಧಿಕಾರಿಗಳು ಕಿಕ್ಕಿರಿದು ತುಂಬಿದ್ದರು. ಆರಂಭದಲ್ಲಿ ಮಾಧ್ಯಮದರಿಗೆ ಪ್ರವೇಶ ನಿರಾಕರಿಸಲಾಯಿತು.

ನಂತರ ಸಭೆಗೆ ಯಾರು ಬೇಕು ಅವರು ನುಗ್ಗಿದ್ದರಿಂದ ಸಭೆ ಜನಸಂಪರ್ಕ ಸಭೆಯಂತೆ ಬದಲಾಯಿತು. ನಂತರ ಅಲ್ಲಿಗೆ ತೆರಳಿದ ಮಾಧ್ಯಮ ಪ್ರತಿನಿಧಿಗಳು ತೆರಳಿದರು. ಕಾಲುವೆ ವ್ಯಾಪ್ತಿಗೆ ಒಳಪಡುವ ಶಾಸಕರು ತಮ್ಮ, ತಮ್ಮ ಭಾಗದ ನೀರಾವರಿ ಸಮಸ್ಯೆಯ ಅಹವಾಲುಗಳನ್ನೇ ಹೊತ್ತು ತಂದಿದ್ದರು. ಚುನಾವಣೆಯಲ್ಲಿ ರೈತರಿಗೆ ಕಾಲುವೆಗೆ ನೀರು ಹರಿಸುವುದೇ ತಮ್ಮ ಧ್ಯೇಯ ಎಂದು ಹೇಳಿಕೊಂಡಿದ್ದರಿಂದ ಶಾಸಕರು ಒತ್ತಡದಲ್ಲಿ ಬಳಲಿ ಹೋಗಿದ್ದು, ಹೇಗಾದರೂ ಮಾಡಿ ಸಾಧ್ಯವಾದಷ್ಟು ಬೇಡಿಕೆ ಈಡೇರಿಸಿಕೊಳ್ಳಲು ನಾ ಮುಂದು, ತಾ ಮುಂದು ಎಂದು ವಾದ ಮಂಡಿಸಿದ್ದು ಕಂಡು ಬಂತು.

ಹೂಳೆತ್ತುವ ಕಾರ್ಯ ಸದ್ಯಕ್ಕಿಲ್ಲ:

ಜಲಾಶಯದಲ್ಲಿ ಸಂಗ್ರಹಗೊಂಡಿರುವ ಹೂಳು ತೆಗೆಯಬೇಕು ಎಂಬುವುದು ಈ ಭಾಗದ ರೈತರ ಆಗ್ರಹವಾಗಿದೆ. ಆದರೆ ವೈಜ್ಞಾನಿಕವಾಗಿ ಅಷ್ಟು ಕಾರ್ಯಸಾಧುವಲ್ಲ ಎಂದು ತಜ್ಞರು ವರದಿ ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸಭೆಗೆ ತಿಳಿಸಿದರು.

ಇದಕ್ಕೆ ಪರ್ಯಾಯ ಮಾರ್ಗವೇನು? ಎಂದು ಪ್ರಶ್ನಿಸಿದ ಮಾಧ್ಯಮದವರಿಗೆ ಹೂಳೆತ್ತುವ ಕಾರ್ಯದ ಬದಲು ಗಂಗಾವತಿ ತಾಲ್ಲೂಕಿನ ನವಲಿ ಬ್ಯಾರೇಜ್ ಮೂಲಕ ಸಂಗ್ರಹಿಸುವುದು ಮತ್ತು ಹಿರೇಹಳ್ಳ ಜಲಾಶಯ ಎತ್ತರವನ್ನು ಹೆಚ್ಚಿಸಿ ಹೆಚ್ಚಿನ ನೀರನ್ನು ತಡೆ ಹಿಡಿದು ನೀರಾವರಿ ಉದ್ದೇಶಕ್ಕೆ ಬಳಸಿಕೊಳ್ಳುವುದು ಸೇರಿದಂತೆ ವಿವಿಧ ಆಯಾಯಮಗಳ ಕುರಿತು ಚರ್ಚಿಸಿ ಸಮಗ್ರ ನೀತಿ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ರಾಯಚೂರು ಸಂಸದ ಬಿ.ವಿ.ನಾಯಕ,ಶಾಸಕರಾದ ಪರಣ್ಣ ಮುನವಳ್ಳಿ, ಕೆ.ರಾಘವೇಂದ್ರ ಹಿಟ್ನಾಳ, ಬಸವರಾಜ ದಡೇಸೂಗೂರ, ಜಿ.ಸೋಮಶೇಖರ ರೆಡ್ಡಿ, ಟಿ.ನಾಗೇಂದ್ರ, ಸೋಮಲಿಂಗಪ್ಪ,ಕಾಂಗ್ರೆಸ್ ಹಿರಿಯ ಮುಖಂಡರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ರೈತ ಮುಖಂಡ ಜಿ.ಪುರುಷೋತ್ತಮ, ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ರಾಯಚೂರು ಜಿಲ್ಲಾಧಿಕಾರಿ ಸೆಂಥಿಲ್‌ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಡಿ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT