ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಾಂತರಕ್ಕೆ ಇರುವ ಅವಕಾಶ ಮತಾಂತರಕ್ಕೆ ಏಕಿಲ್ಲ?: ಅಲ್ಲಮಪ್ರಭು ಬೆಟ್ಟದೂರು

Last Updated 23 ಜನವರಿ 2023, 5:03 IST
ಅಕ್ಷರ ಗಾತ್ರ

ಕೊಪ್ಪಳ: ‘ಯಾರು, ಯಾವ ಧರ್ಮವನ್ನು ಬೇಕಾದರೂ ಸೇರಲಿಕ್ಕೆ ಸ್ವಾತಂತ್ರ್ಯ ಇದೆ. ದುರಂತ ಎಂದರೆ ಇಂದಿನ ಸರ್ಕಾರ ಮತಾಂತರವನ್ನು ತಡೆಗಟ್ಟುತ್ತಿದೆ’ ಎಂದು ಪ್ರಗತಿಪರ ಚಿಂತಕ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿಯಿಂದ ನಡೆದ ‘ಹೋರಾಟದ ನೆನಪಿನಂಗಳದಲ್ಲಿ ಶರಣಪ್ಪ ಲೇಬಗೇರಿ’ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲಿದ್ದವರು ಅಲ್ಲಿಯೇ ಇರಬೇಕು ಎಂಬ ಧೋರಣೆ ತಪ್ಪು. ಪಕ್ಷಾಂತರ ಮಾಡಲಿಕ್ಕೆ ಅವಕಾಶ ಇದೇ ಎಂದಾಗ ಮತಾಂತರವನ್ನು ಯಾಕೆ ನೀವು ಪ್ರಶ್ನೆ ಮಾಡುತ್ತಿದ್ದೀರಿ?’ ಎಂದು ಅವರು ಆಳುವ ಸರ್ಕಾರವನ್ನು, ರಾಜಕಾರಣಿಗಳನ್ನು ಪ್ರಶ್ನಿಸಿದರು.

‘ದಲಿತರು, ಶೋಷಿತರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೇಲೆ ಬರಬಾರದು ಎಂಬ ಮೇಲ್ವರ್ಗದ ಜನರ ಭಾವನೆ ಸರಿಯಲ್ಲ. ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ ಅಗತ್ಯವಾಗಿದೆ. ಆ ಮೂಲಕ ಮೇಲ್ವರ್ಗದ ಮತ್ತು ಕೆಳವರ್ಗದ ಎರಡೂ ಬಗೆಯ ಜನರನ್ನು ನಾವು ತಿದ್ದಬೇಕಿದೆ. ಇಲ್ಲದೇ ಹೋದರೆ ದೇಶದಲ್ಲಿ ಅಸ್ಪೃಶ್ಯತೆಯ ರೋಗ ಕಡಿಮೆಯಾಗಲು ಸಾಧ್ಯವಿಲ್ಲ’ ಎಂದರು.

‘ದಲಿತ ವರ ಕುದುರೆಯ ಮೇಲೆ ಕುಳಿತುಕೊಂಡು ಮೆರವಣಿಗೆ ಹೋದರೆ ಅವನನ್ನು ಹೊಡೆಯುಂತಹ ಪರಿಸ್ಥಿತಿ ಇನ್ನೂ ಉತ್ತರ ಭಾರತದಲ್ಲಿ ಇದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಸ್ವಲ್ಪಮಟ್ಟಿಗೆ ಕಡಿಮೆ ಇದೆ. 12ನೇ ಶತಮಾನದ ಶರಣರ ಹಿನ್ನೆಲೆ ಹೊಂದಿದ್ದರೂ ಕೂಡ ಬಹುತೇಕ ಅಸ್ಪೃಶ್ಯತೆಯ ಪ್ರಕರಣಗಳಲ್ಲಿ ಲಿಂಗಾಯತರು ಹೊಂದಿರುವ ಮನಸ್ಥಿತಿ ಒಂದು ನೋವಿನ ಸಂಗತಿ. ಬಸವಣ್ಣನವರು ಕೆಳ ಸಮುದಾಯಗಳ ಬಗೆಗೆ ಹೊಂದಿದ್ದ ಪ್ರೀತಿಯನ್ನು ಅವರ ವಚನಗಳಲ್ಲಿಯೇ ನಾವೆಲ್ಲ ಕಾಣಬಹುದಾಗಿದೆ’ ಎಂದು ಹೇಳಿದರು.

‘ಅಂಬೇಡ್ಕರ್ ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ಹೇಳಿಕೊಂಡಂತೆ ಅವರಿಗೂ ಕೂಡ ಮೊದಮೊದಲು ಓದುವ ಹಂಬಲ ಇರಲಿಲ್ಲ. ಬಳಿಕ ‘ಶಿಕ್ಷಣ ಪಡೆಯುವ ಮೂಲಕ ನೀನು ಎಲ್ಲರಿಂದ ಪುರಸ್ಕೃತ ಆಗಬೇಕು’ ಎಂಬ ಅವರ ತಂದೆಯವರ ಮಾತಿನಂತೆ ಓದುವ ಹಂಬಲ ಅವರಲ್ಲಿ ಬೆಳೆಯಿತು. ‘ಮನುಷ್ಯನಿಗೆ ಶೀಲ ಬಹಳ ಮುಖ್ಯವಾದದ್ದು. ನಾನು ವಿದೇಶಕ್ಕೆ ಹೋಗಿಬಂದಿದ್ದೇನೆ. ಆದರೆ ಒಂದು ದಿನವೂ ಕುಡಿಯಲಿಲ್ಲ, ಸಿಗರೇಟ್ ಸೇದಲಿಲ್ಲ. ಆದರೆ ಉಡುಪಿನ ಬಗ್ಗೆ ಪ್ರೀತಿಯನ್ನು ಹೊಂದಿದ್ದೇನೆ’ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಶರಣಪ್ಪ ಅವರು ಅನಕ್ಷರಸ್ಥ ರಾಗಿದ್ದರೂ ಕೂಡ ಸಾಕಷ್ಟು ಹೃದಯ ಶ್ರೀಮಂತಿಕೆಯನ್ನು ಹೊಂದಿದ್ದರು. ಅತ್ಯಂತ ಸೂಕ್ಷ್ಮ ಮನಸ್ಸಿನ ವ್ಯಕ್ತಿ ಅವರಾಗಿದ್ದರು. ಅವರ ವಿಶ್ವಾಸ, ಸಮಾಜದ ಬಗೆಗಿನ ಅವರ ಮಾನವೀಯ ಕಳಕಳಿ ಮೆಚ್ಚುವಂತಹದ್ದು. ಲೇಬಗೇರಿಯ ಜನತೆ ಅವರ ಕುಟುಂಬಕ್ಕೆ ನೆರವಾಗಬೇಕು’ ಎಂದು ಆಶಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಚ್.ಎಸ್.ಪಾಟೀಲ ಮಾತನಾಡಿ, ‘ಒಬ್ಬ ಅವಿದ್ಯಾವಂತ, ರೈತ ಶರಣಪ್ಪ ಲೇಬಗೇರಿ ರಾಜ್ಯಮಟ್ಟದ ಸಂಘಟಕರಾಗಿದ್ದು ಹೆಮ್ಮೆಯ ಸಂಗತಿ. ಸಮಾಜದ ಜನರ ಅವಶ್ಯಕತೆಗಳ ಪೂರೈಕೆಗೆ ಅವರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಅವರು ಜನಮಾನಸದಲ್ಲಿ ನೆಲೆಸಿದ್ದಾರೆ’ ಎಂದರು.

‘ದೇಶ ಅಮೃತಮಹೋತ್ಸವ ಆಚ ರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿಯೂ ಅಸ್ಪೃಶ್ಯತೆ ಸಂಪೂರ್ಣವಾಗಿ ನಿವಾರಣೆ ಆಗದೇ ಇರುವುದು ವಿಪರ್ಯಾಸದ ಸಂಗತಿ. ದೇಶದ ದೊಡ್ಡ ನಗರಗಳಲ್ಲಿ ಅಸ್ಪೃಶ್ಯತೆ ಆಚರಣೆ ಇಲ್ಲ ಎನ್ನಬಹುದು. ಆದರೆ ಗ್ರಾಮೀಣ ಭಾಗದಲ್ಲಿ ಹೆಚ್ಚಿದೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ ಮಾತನಾಡಿದರು. ಹೋರಾಟಗಾರ್ತಿ ಸಾವಿತ್ರಿ ಮುಜುಂದಾರ್, ರಾಜ್ಯ ಸಮಿತಿ ಖಜಾಂಚಿ ಶಿವಗ್ಯಾನಿ ಕಪ್ಪಲ್, ವೆಂಕಟೇಶ್, ಚಂದ್ರು, ಮಂಜುನಾಥ, ಎಫ್.ಐ.ದೊಡ್ಡಮನಿ, ದೇವೇಂದ್ರ ಗಾದಿಮನಿ, ನಾಗರಾಜ್ ಕಲ್ಗುಡಿ, ವಿಜಯಪುರ ಸಂಚಾಲಕ ಅಯ್ಯೋಜಿ ತಳ್ಳೊಳ್ಳಿ, ಪ್ರಕಾಶ ಕಲ್ಲೂರು ಇದ್ದರು. ಮೈಸೂರು ವಿಭಾಗೀಯ ಸಂಚಾಲಕ ರಾಜಶೇಖರ ಕೋಟಿ ಸ್ವಾಗತಿಸಿದರು.

ಮೊದಲು ಮಾನವರಾಗಲು ಸಲಹೆ

‘ಮೊದಲು ಮಾನವನಾಗಬೇಕು ಎಂದು ಹಿರಿಯರು ಹೇಳಿದ್ದಾರೆ. ನಾವು ಪ್ರಸ್ತುತ ಮಾನವರಾಗಿರಬಹುದು. ಆದರೆ ನಮ್ಮಲ್ಲಿನ ಪಶುರೂಪದ ಗುಣಗಳನ್ನು ತಿದ್ದಿಕೊಂಡು ಮಾನವರಾಗಬೇಕಿದೆ. ಮಾನವರಾಗುವುದೇ ಅತ್ಯಂತ ಕಷ್ಟದ ಕೆಲಸ; ಇನ್ನು ಮಹಾತ್ಮರಾಗುವುದು ಸಾಧ್ಯವೇ? ಎಂಬ ಡಾ.ಅಂಬೇಡ್ಕರ್ ಅವರ ಪ್ರಶ್ನೆ ಈಗಲೂ ಪ್ರಸ್ತುತ ಎನ್ನಿಸುತ್ತದೆ’ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT