ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಣ್ಣಿನ ರಕ್ಷಣೆ ಸಮಾಜದ ಹೊಣೆ ಆಗಲಿ’

ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮ; ಪ್ರಗತಿಪರ ರೈತರಿಗೆ ಸನ್ಮಾನ
Last Updated 6 ಡಿಸೆಂಬರ್ 2019, 11:17 IST
ಅಕ್ಷರ ಗಾತ್ರ

ಕೊಪ್ಪಳ: ಮಣ್ಣಿನ ರಕ್ಷಣೆ ಸಮಾಜ ಮತ್ತು ಸಮುದಾಯದ ಹೊಣೆ ಆಗಬೇಕು ಎಂದು ಸಮಷ್ಠಿ ಗ್ರಾಮೀಣ ಅಭ್ಯುದಯ ಸಂಸ್ಥೆಯ ಸಂಸ್ಥಾಪಕ ಡಾ.ಶೇಷಗಿರಿ‌ ಗುಬ್ಬಿ ಹೇಳಿದರು.

ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ, ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ನಡೆದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯನಿಗೆ ಎಲ್ಲ ಸೆಳೆತ ಮುಖ್ಯ. ಇದರಲ್ಲಿ ಮಣ್ಣಿನ ಸೆಳೆತ ಅತಿಮುಖ್ಯವಾಗಿದೆ. ಹಾಗಾಗಿ ಮಣ್ಣಿನ ಋಣ ತೀರಿಸಲು ಆಗುವುದಿಲ್ಲ. ಜೀವನದ ಬಹುಭಾಗ ರೈತರು ಮಣ್ಣಿನ ಜತೆ ಕೆಲಸ ಮಾಡಿದ ಅಪಾರ ಅನುಭವ ಹೊಂದಿರುತ್ತಾರೆ’ ಎಂದರು.

ತುಂಗಭದ್ರಾ ನದಿ ಮತ್ತು ಹಿರೇಹಳ್ಳ ಯೋಜನೆಗೆ ಒಳಪಡುವ ಎಲ್ಲ ಗ್ರಾಮಗಳಲ್ಲಿ ರಾಸಾಯನಿಕ, ಕೀಟನಾಶಕ ಬಳಕೆ ಮಾಡಿ, ಅತಿಹೆಚ್ಚು ರೈತರು ಭತ್ತ ಬೆಳೆಯುತ್ತಾರೆ. ಆದರೆ ಕೀಟನಾಶಕ ಕಂಪನಿಗಳು ಶ್ರೀಮಂತವಾಗಿವೆ. ಇವರೆಲ್ಲರೂ ಮಣ್ಣಿನ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ 100ರಷ್ಟು ಶೇ 30 ರಷ್ಟು ಭೂಮಿ ಸವಳಾಗಿದೆ. ಅಂದರೆ ಇದು ಕೃಷಿಗೆ ಯೋಗ್ಯವಾಗಿಲ್ಲ. ಹಾಗಾಗಿ ಮಣ್ಣಿನ ಮೇಲೆ ಬೀಳುವ ಒತ್ತಡವನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾವಯವ ಇಂಗಾಲವನ್ನು ಹೆಚ್ಚಿಸಿ ಕೊಳ್ಳಬೇಕು. ಪರೀಕ್ಷೆ ಮಾಡಿಸಿಕೊಂಡು ವರದಿಯನ್ನು ಕಾಯ್ದಿರಿಸಬೇಕು. ಎರೆಹುಳು ಮೇಲಿರಬೇಕು. ನೀರು ಹಿಡಿದುಕೊಳ್ಳವ ಸಾಮರ್ಥ್ಯ ಇರಬೇಕು. ಅಂತಹ ಭೂಮಿಯಲ್ಲಿ ಮಾತ್ರ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ಮಣ್ಣಿನಲ್ಲಿ ಜೀವಾಮೃತ ಹಾಕಿದರೆ ಇವು ಹೆಚ್ಚಾಗುತ್ತವೆ. ಇಳುವರಿ ಮತ್ತು ಅತಿಯಾದ ಲಾಭದ ದೃಷ್ಟಿಯಿಂದ ಇವೆಲ್ಲವನ್ನೂ ನಾವು ಮರೆತಿದ್ದೇವೆ ಎಂದು ವಿಷಾದಿಸಿದರು.

ದೇಸಿ ಆಕಳಿನ ಮಹತ್ವ ತಿಳಿದು, ಅದರ ಗಂಜಲು, ಸಗಣಿಯನ್ನು ಹೊಲಕ್ಕೆ ಬಳಕೆ ಮಾಡಿಕೊಳ್ಳಬೇಕು. ಸಜ್ಜಿ‌ ಹೂಬ್,‌ ಸಗಣಿ ರಾಶಿ ಸಂಗ್ರಹಿಸಿ, ‌ಗೊಬ್ಬರಕ್ಕೆ ಬೇಕಾದ ಸೂಕ್ಣ್ಮಾಣು ಜೀವಿಗಳನ್ನು ತಯಾರಿಸಬಹುದು.‌ ತಿಪ್ಪೆಗೊಬ್ಬರ ಎಂದರೆ ಲಕ್ಷ್ಮಿ ಇದ್ದಂತೆ. ಅದನ್ನು ಉತ್ತಮವಾಗಿಡಬೇಕು. ಇದರಿಂದ ಗುಣಮಟ್ಟದಿಂದ ಕೂಡಿದ ಬೆಳೆ ಬೆಳೆಯಬಹುದು. ಇದರಿಂದ ಬೇಡಿಕೆಯೂ ಹೆಚ್ಚು ಬರುತ್ತದೆ. ಉತ್ತಮ ಲಾಭವನ್ನೂ ಗಳಿಸಬಹುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ರಾಮಣ್ಣ ಚೌಡ್ಕಿ ಮಾತನಾಡಿ, ರೈತರು ಲಾಭ ಗಳಿಸುವುದು ತಪ್ಪಲ್ಲ, ಆದರೆ ಮಣ್ಣಿನ ಫಲವತ್ತತೆ ಕಳೆದು ಲಾಭಗಳಿಸುವುದು ತಪ್ಪು. ಹಾಗಾಗಿ ಮುಂದಿನ ಪೀಳಿಗೆಗೆ ಉತ್ತಮವಾದ ಭೂಮಿಯನ್ನು ನೀಡಬೇಕು. ರೈತರಿಗೆ ಮಾರುಕಟ್ಟೆ ಜ್ಞಾನವಿಲ್ಲ. ತಜ್ಞರ ಮಾರ್ಗದರ್ಶನದಿಂದ ಮಾರುಕಟ್ಟೆಗೆ ತಲುಪಿಸಬೇಕು‌ ಎಂದರು.

ಕಾಮನೂರಿನ ಪ್ರಗತಿಪರ ರೈತ ನಾರಾಯಣರಾವ್‌ ಪೊಲೀಸ್‌ಪಾಟೀಲ ಅವರನ್ನು ಸನ್ಮಾನಿಸಲಾಯಿತು.ಕೇಂದ್ರ ವಿಜ್ಞಾನಿ ಬದರಿಪ್ರಸಾದ್, ಉಪಕೃಷಿ ನಿರ್ದೇಶಕ ಸಿದ್ಧೇಶ್ವರ, ‌ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಪ್ಪ ಅತ್ತಾರ, ನಿವೃತ್ತ ಕೃಷಿ ಸಹಾಯಕ ಕೃಷಿ ನಿರ್ದೇಶಕರಾದ ಎಸ್‌.ಬಿ.ಕೋಣೆ, ಜಂಬಣ್ಣ ಐಲಿ, ವಿ.ಎಸ್‌.ಹಿರೇಮಠ, ವಿ.ಕೆ.ಕಮತರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT