ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಅನುದಾನ ವಾಪಾಸ್‌: ಆತಂಕ

Last Updated 6 ಮಾರ್ಚ್ 2014, 10:00 IST
ಅಕ್ಷರ ಗಾತ್ರ

ಗಂಗಾವತಿ: ನಗರಕ್ಕೆ ಮಂಜೂರಾಗಿದ್ದ ₨10.46 ಕೋಟಿ ಮೊತ್ತದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಬಾಲಗ್ರಹ ಹಿಡಿದಿದ್ದು, ಇದೀಗ ಅನುದಾನ ವಾಪಾಸಾಗುವ ಆತಂಕ ಎದುರಾಗಿದೆ.

ನಬಾರ್ಡಿನ ಆರ್‌ಐಡಿಎಫ್‌ ಯೋಜನೆ­ಯಲ್ಲಿ ಕರ್ನಾಟಕ ಮಾದರಿ ಆರೋಗ್ಯ ಸುಧಾರಣಾ ಅಭಿವೃದ್ಧಿ ಕಾರ್ಯಕ್ರಮದಡಿ (ಕೆಎಚ್‌ಎಸ್‌­ಆರ್‌ಡಿಪಿ) 2013ರ ಜೂನ್‌ ತಿಂಗಳಲ್ಲಿ ರಾಜ್ಯದ 31 ಕೇಂದ್ರಗಳ ಪೈಕಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ಗಂಗಾವತಿಗೆ ಯೋಜನೆ ಮಂಜೂರಾಗಿತ್ತು.

ಯೋಜನೆ ಮಂಜೂರಾಗಿ ಒಂಭತ್ತು ತಿಂಗಳು ಕಳೆದಿದೆ. ಆದರೆ ಆಸ್ಪತ್ರೆಗೆ ಬೇಕಾಗುವ ಐದು ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಇದುವರೆಗೂ ಸಾಧ್ಯವಾಗಿಲ್ಲ.

ಯೋಜನೆಯ ವಿವರ:ನಗರದ ಉಪವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ ಮಾಸಿಕ 200ರಿಂದ 250, ಗ್ರಾಮೀಣ ಭಾಗದ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 600ರಿಂದ 660, ತಾಲ್ಲೂಕಿನಲ್ಲಿ ಒಟ್ಟು ಮಾಸಿಕ ಸರಾಸರಿ 800–880 ಹೆರಿಗೆಯಾಗುತ್ತಿವೆ. 

ಆಯಾ ತಾಲ್ಲೂಕಿನಲ್ಲಾಗುವ ಹೆರಿಗೆ ಪ್ರಮಾಣ, ತಾಯಿ ಮಕ್ಕಳ ಆರೋಗ್ಯ ರಕ್ಷಣೆ ಉದ್ದೇಶದಿಂದ ತಾಲ್ಲೂಕಿನಲ್ಲಿ ವಾರ್ಷಿಕ ಸರಾಸರಿ 1,25 ಲಕ್ಷ ಮಹಿಳೆ ಮತ್ತು ಮಕ್ಕಳನ್ನು ದೃಷ್ಟಿಯಲ್ಲಿ­ಟ್ಟು­ಕೊಂಡು ಆಸ್ಪತ್ರೆ ಮಂಜೂರು ಮಾಡಲಾಗಿತ್ತು.
ಸ್ಥಳದ ಕೊರತೆ: ಗಂಗಾವತಿಯಲ್ಲಿ ಒಂದು ಎಕರೆ ಜಮೀನಿಗೆ ಕೋಟ್ಯಂತರ ರೂಪಾಯಿ ಬೆಲೆ ಇದೆ. ಈ ಹಿನ್ನೆಲೆ ಖಾಸಗಿ ಜಮೀನು ಖರೀದಿ ಅಸಾಧ್ಯ. ಹೀಗಾಗಿ ಶಾಸಕರು 2013ರ ಸೆಪ್ಟಂಬರ್‌ನಲ್ಲಿ ಸರ್ಕಾರಿ  ಜಮೀನು ನೀಡುವಂತೆ ತಹಶೀಲ್ದಾರಿಗೆ ಸೂಚನೆ ನೀಡಿದ್ದರು. 

ವಿವಿಧ ಸರ್ವೇ ನಂಬರ್‌ನಲ್ಲಿ ನಿವೇಶನ ಹುಡುಕಾಡಿದ ತಹಶೀಲ್ದಾ­ರರು ಸರ್ವೇ ನಂಬರ್‌ 53ರಲ್ಲಿ ಜಮೀನು ತೋರಿಸಿ ಮುಂದಿನ ಆದೇಶಕ್ಕೆ ಉಪವಿಭಾಗಾಧಿಕಾರಿ ಕಚೇರಿಗೆ ಕಡತ ರವಾನಿಸಿದ್ದಾರೆ. ಆದರೆ ಕಡತ ವಿಲೇವಾರಿಯಾಗದೇ ಐದು ತಿಂಗಳು ಕಳೆದಿವೆ.

’ನಾವು ಶಾಸಕರನ್ನು ಭೇಟಿಯಾದ ಬಳಿಕ ಈಗಾಗಲೆ ಎರಡು ಬಾರಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ನಿವೇಶನ ಮಂಜೂರಾತಿಗೆ ಬೇಡಿಕೆ ಇಟ್ಟಿದ್ದೆವು. ಮುಂದಿನದ್ದು ಹಿರಿಯ ಅಧಿಕಾರಿಗಳಿಗೆ ಬಿಟ್ಟದ್ದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಗೌರಿಶಂಕರ ಹೇಳಿದ್ದಾರೆ.

60 ಹಾಸಿಗೆ ಆಸ್ಪತ್ರೆಯ ಕಟ್ಟಡಕ್ಕೆ 24 ತಿಂಗಳ ಸಮಯದ ಗಡುವು ವಿಧಿಸಲಾಗಿದೆ. ಯೋಜನೆ ಜಾರಿಯಾಗಿ ಈಗಾಗಲೆ ಹತ್ತು ತಿಂಗಳು ಕಳೆದಿವೆ. ವಿಳಂಬದ ಕಾರಣ ಅನುದಾನ ವಾಪಾಸಾಗುವ ಸಾಧ್ಯತೆಯೂ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT