ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದಲ್ಲಿ ವಾಹನ ದುಪ್ಪಟ್ಟು: ಹೆಚ್ಚಿದ ದಟ್ಟಣೆ

ಅಕ್ಷರ ಗಾತ್ರ

ಗಂಗಾವತಿ: ಪುರಸಭೆಯಿಂದ ನಗರಸಭೆ, ಈಗ ನಗರಸಭೆಯಿಂದ ನಗರಪಾಲಿಕೆಯತ್ತ ಹೆಜ್ಜೆ ಇಡುತ್ತಿರುವ ಗಂಗಾವತಿ ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ದಟ್ಟಣೆಯಾಗುತ್ತಿದೆ. ಕೇವಲ ಹತ್ತು ವರ್ಷದಲ್ಲಿ ನಗರದಲ್ಲಿನ ವಾಹನಗಳ ಸಂಖ್ಯೆ ದುಪ್ಪಟ್ಟಾಗಿದೆ.

ಸಾರಿಗೆ ಇಲಾಖೆಯ ಅಂಕಿ ಅಂಶದ ಪ್ರಕಾರ 2001–-02ರಲ್ಲಿ ಗಂಗಾವತಿ ನಗರದಲ್ಲಿ 300 ಕಾರು, 1,800  ದ್ವಿಚಕ್ರ ವಾಹನಗಳಿದ್ದವು. ಆದರೆ 2010–-11ರ ಸಾಲಿನಲ್ಲಿ ಈ ಸಂಖ್ಯೆ ಸರಿಸುಮಾರು 700ಕ್ಕೂ ಹೆಚ್ಚು  ಕಾರು ಹಾಗೂ 10 ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳಿವೆ.

ಆದರೆ ದಿನದಿಂದ ದಿನಕ್ಕೆ ನಗರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಾಗುತ್ತಿರುವ ವಾಹನಗಳ ಪಾರ್ಕಿಂಗ್ ನಗರ­ದಲ್ಲಿ ದೊಡ್ಡ ತಲೆನೋವಾಗುತ್ತಿದೆ. ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
‘ಸಂಚಾರ ನಿಯಮಗಳ ಉಲ್ಲಂಘನೆಯಿಂದ ನಿತ್ಯ ನಗರದಲ್ಲಿ ಅಪಘಾತಗಳು ಸಂಭವಿಸಿದರೂ ಸಂಚಾರ ಪೊಲೀಸರು ಮಾತ್ರ ಸಕಾಲಕ್ಕೆ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಸಂಚಾರ ಸಮಸ್ಯೆ ಅಧಿಕವಾಗುತ್ತಿವೆ’ ಎಂದು ಬೈಕ್‌ ಸವಾರ ಜಾವೇದ್ ಹುಸೇನ್ ದೂರುತ್ತಾರೆ.

‘ಸುಧಾರಣೆಗೆ ಯತ್ನ’
‘ತ್ರಿಬಲ್ ರೈಡಿಂಗ್, ಮೊಬೈಲ್ ಯೂಜಿಂಗ್‌­ನಂತ ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣ ಪತ್ತೆಮಾಡಿ ಪ್ರಕರಣ ದಾಖಲಿಸ­ಲಾಗುತ್ತಿದೆ. ನಗರದ ಸಂಚಾರ ವ್ಯವಸ್ಥೆ ಸುಧಾರಣೆಗೆ ಯತ್ನಿಸಲಾಗುತ್ತಿದೆ.  ರಸ್ತೆ ದುರಸ್ತಿ ಕಾರ್ಯ ನಡೆದಿದೆ. ಆ ಬಳಿಕ ಪಾರ್ಕಿಂಗ್ ನಿಯಮ ಜಾರಿ ಮಾಡಲಾಗು­ವುದು’.
–ರಂಗಪ್ಪ ಎಸ್. ದೊಡ್ಮನಿ, ಸಬ್ ಇನ್‌ಸ್ಪೆಕ್ಟರ್‌

‘ಸವಾಲಿನ ಸವಾರಿ’

‘ನಗರದಲ್ಲಿ ವಾಹನ ಸವಾರರು ಅದರಲ್ಲೂ ಮಹಿಳೆಯರು ವಾಹನ ಚಲಾಯಿಸುವುದು ಒಂದು ಸವಾಲಿನ ಕೆಲಸ. ನಗರದಲ್ಲಿನ ವಾಹನ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ತ್ವರಿತ ಕ್ರಮ ಕೈಗೊಳ್ಳದಿದ್ದರೆ ಪಾದಚಾರಿಗಳಿಗೆ ಸಂಕಷ್ಟ ಎದುರಾಗಲಿದೆ’.
–ತ್ರಿವೇಣಿ ಚಂಗಪ್ಪ, ಸ್ವಾತಿ ಕರ್ಮೂಡಿಮಠ , ಗಂಗಾವತಿ

ಅಭಿವೃದ್ಧಿಯಲ್ಲಿ ಜಿಲ್ಲಾ ಕೇಂದ್ರ ಕೊಪ್ಪಳವನ್ನು ಹಿಂದಿಕ್ಕಿರುವ ತಾಲ್ಲೂಕು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ನಗರ. ಆದರೆ ಸಂಚಾರ ವ್ಯವಸ್ಥೆ ಮಾತ್ರ ಅವ್ಯವಸ್ಥೆಯ ಆಗರ. ನಗರದಲ್ಲಿನ ನಿಷೇಧಿತ ಸ್ಥಳ, ನ್ಯಾಯಾಲಯ, ಕಚೇರಿ ಮುಂದೆ ಮತ್ತು ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ಪಾರ್ಕಿಂಗ್‌ ಮಾಡುವುದು, ಸರಕು ಸಾಗಣೆ ವಾಹನಗಳನ್ನು ಗಂಟೆಗಟ್ಟಲೆ ರಸ್ತೆಯಲ್ಲಿ ನಿಲ್ಲಿಸುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಪರವಾನಗಿ ಇಲ್ಲದವರು ಮತ್ತು ಅಪ್ರಾಪ್ತರು ವಾಹನ ಚಲಾಯಿಸುವುದು ಅಪಘಾತ ಹೆಚ್ಚಳಕ್ಕೆ ಒಂದು ಕಾರಣವಾದರೆ, ಪಾದಚಾರಿಗಳಿಗೆಂದು ಮೀಸಲಿಟ್ಟ ಫುಟ್‌ಪಾತನ್ನು ತಳ್ಳುಬಂಡಿಗಳು ಅತಿಕ್ರಮಿಸುತ್ತಿರುವುದು ರಸ್ತೆ ಕಿರಿದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ನಗರದ ಬಹುತೇಕ ರಸ್ತೆಗಳು ಮಧ್ಯಭಾಗದಿಂದ 30-–40 ಅಡಿ ಅಗಲ ಇವೆ. ಆದರೆ ಅತಿಕ್ರಮಣದಿಂದಾಗಿ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. 

ನಗರೇಶ್ವರ ದೇವಸ್ಥಾನದಿಂದ ಬಸವಣ್ಣ ವೃತ್ತ, ಗಣೇಶ ವೃತ್ತದಿಂದ ಮಹಾವೀರ ವೃತ್ತದ ರಸ್ತೆಯಲ್ಲಿ ಸದಾ ಜನಜಂಗುಳಿಯಿರುತ್ತದೆ. ಇನ್ನೂ ಗಣೇಶ ವೃತ್ತದಿಂದ ಸ್ವಸ್ತಿಕ್ ಹೊಟೇಲ್ ಮುಂಭಾಗದ ರಸ್ತೆ ದ್ವಿಚಕ್ರ ವಾಹನ ಹೋಗಲಾರದಂತ ಕಿಷ್ಕಿಂಧೆಯಂತಾಗಿದೆ.

ನಗರದ ಸಂಚಾರ ಠಾಣೆಯಲ್ಲಿ ಇಬ್ಬರು ಸಬ್ ಇನ್‌ಸ್ಪೆಕ್ಟರ್‌ ಸೇರಿದಂತೆ ಒಟ್ಟು 45ಕ್ಕೂ ಹೆಚ್ಚು ಸಿಬ್ಬಂದಿಯಿದ್ದಾರೆ. ಆದರೆ ಸಂಚಾರ ನಿಯಮ ಪಾಲನೆ, ಪಾರ್ಕಿಂಗ್‌ ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯಿಂದ ನಗರದ ಸಂಚಾರ ದುಸ್ತರವಾಗುತ್ತಿದೆ ಎಂದು ಸಾರ್ವಜನಿಕರು ಆಕ್ಷೇಪಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT