ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಕರ ಬರ - ರೈತ ತತ್ತರ

Last Updated 9 ಜುಲೈ 2012, 5:30 IST
ಅಕ್ಷರ ಗಾತ್ರ

ಕುಷ್ಟಗಿ:  ಬರ ಆವರಿಸಿದಾಗ ದುಡಿಯುವ ಕೈಗಳಿಗೆ ಉದ್ಯೋಗ, ಕುಡಿಯಲು ನೀರು ಕೊಡಿ ಎಂದು ರೈತರು ಜನರು ಪ್ರತಿಭಟನೆಗಿಳಿಯುತ್ತಿದ್ದುದು ಮಾತು ಆಗಿನದು. ಆದರೆ ಅಧಿಕಾರಿಗಳು, ಪ್ರತಿನಿಧಿಗಳು ಎಲ್ಲೇ ಹೋಗಲಿ ಮೇವು ಕೊಡಿ, ಗೋಶಾಲೆ ಚಾಲು ಮಾಡಿ ಎಂದು ರೈತರು ಅಂಗಲಾಚುತ್ತಿರುವುದು ಈಗಿನ ಸ್ಥಿತಿ.

ಭೀಕರ ಬರಪರಿಸ್ಥಿತಿಯಲ್ಲಿ ಮೇವಿನ ಅಭಾವದಿಂದ ದಯನೀಯ ಸ್ಥಿತಿ ತಲುಪಿರುವ ರೈತರು ತಮ್ಮ ಗ್ರಾಮಗಳಲ್ಲೂ ಗೋಶಾಲೆ ಆರಂಭಿಸುವಂತೆ ಒತ್ತಡ ಹೇರುತ್ತಿದ್ದರೆ ಅವರ ಬೇಡಿಕೆ ಈಡೇರಿಸುವಲ್ಲಿ ಜಿಲ್ಲಾಡಳಿತ ಅಸಹಾಯಕ ಸ್ಥಿತಿ ತಲುಪಿರುವುದು ವಾಸ್ತವ.

ಹಿಂದಿನ ಬರ ಪರಿಸ್ಥಿತಿಯ ಅನೇಕ ಸಂದರ್ಭಗಳಲ್ಲಿ ತಾಲ್ಲೂಕಿನಲ್ಲಿ ಒಂದೆ ಗೊಶಾಲೆ ತೆರೆಯಲಾಗುತ್ತಿತ್ತು. ಆದರೆ ಈ ಬಾರಿ 8 ಗೋಶಾಲೆಗಳನ್ನು ತೆರೆಯುವ ಮೂಲಕ ದಾಖಲೆ ನಿರ್ಮಿಸಿದೆ. ಅಚ್ಚರಿಯಂದರೆ ಇಷ್ಟಾದರೂ ಅನೇಕ ಗ್ರಾಮಗಳ ರೈತರು ಜಾನುವಾರುಗಳನ್ನು ರಕ್ಷಿಸಲು ತಕ್ಷಣ ಗೋಶಾಲೆ ಆರಂಭಿಸುವಂತೆ ಮನವಿ ಸಲ್ಲಿಸುತ್ತಿರುವುದು ನಿತ್ಯದ ಸಂಗತಿಯಾಗಿದೆ.

ಅಲ್ಲದೇ ಅನೇಕ ಗ್ರಾಮಗಳ ರೈತರು ಗೋಶಾಲೆಗಾಗಿ ವಿನೂತನ ಚಳುವಳಿಯ ಮಾರ್ಗ ಹಿಡಿದಿದ್ದಾರೆ. ಪಾದಾಯಾತ್ರೆ ಮೂಲಕ ನೂರಾರು ಸಂಖ್ಯೆಯಲ್ಲಿ ಎತ್ತು, ಎಮ್ಮೆ ಇತರೆ ಎಲ್ಲ ಜಾನುವಾರುಗಳು ಅಷ್ಟೇ ಅಲ್ಲ ಚಕ್ಕಡಿಗಳನ್ನೂ ಸಹ ಕಚೇರಿ ಆವರಣದೊಳಕ್ಕೆ ನುಗ್ಗಿಸಿ ಪ್ರತಿಭಟಿಸುವುದು ಸಾಮಾನ್ಯ ಸಂಗತಿಯಾಗಿದೆ.

ಚಳುವಳಿಯ ಈ ಮಾರ್ಗ ಅನುಸರಿಸಿದ ತಳುವಗೇರಾ ರೈತರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಗೋಶಾಲೆ ಆರಂಭಿಸಿತ್ತು. ಉಳಿದ ರೈತರೂ ಅದೇ ಮಾರ್ಗ ಹಿಡಿದು ತಹಶೀಲ್ದಾರರ ಕಚೇರಿಗೆ ಮುತ್ತಿಗೆ ಹಾಕುವುದಕ್ಕೆ ಮುಂದಾಗಿರುವುದು ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದೆ.

ಸದ್ಯ ಇರುವ ಎಂಟು ಗೋಶಾಲೆಗಳಿಗೆ ಸಹಸ್ರ ಸಂಖ್ಯೆಯಲ್ಲಿ ಜಾನುವಾರುಗಳು ಬರುತ್ತಿದ್ದು ಅವುಗಳಿಗೆ ಮೇವು ನೀರು ಪೂರೈಸುವುದೇ ಅಧಿಕಾರಿಗಳಿಗೆ ದುಸ್ತರವಾಗಿದೆ. ಅಂತರ್ಜಲ ಕುಸಿದಿರುವುದರಿಂದ ಕೊಳವೆಬಾವಿಗಳು ನಿಷ್ಕ್ರೀಯಗೊಂಡಿರುವುದರಿಂದ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.

ಸದ್ಯ ತೆರೆದಿರುವ ಗೊಶಾಲೆಗಳನ್ನೇ ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ, ಹೊಸದಾಗಿ ಬೇಡಿಕೆ ಬರುತ್ತಿದೆ, ಎಲ್ಲಿ ಹೋದರೂ ಮೇವು ಸಿಗುತ್ತಿಲ್ಲ ಎಂಬ ಅಸಹಾಯಕತೆ ಅಧಿಕಾರಿಗಳದ್ದು. ಮಳೆಯ ಅನಿಶ್ಚಿತತೆ ಹೀಗೇ ಮುಂದುವರೆದರೆ ಹೇಗೆ ಎಂಬ ಚಿಂತೆ ಅಧಿಕಾರಿಗಳಲ್ಲಿ ಮನೆ ಮಾಡಿದೆ.

ಇನ್ನೊಂದೆಡೆ ಮಳೆ ಮತ್ತು ಅಂತರ್ಜಲ ಕೊರತೆಯಿಂದ ಕಬ್ಬಿನ ಬೆಳೆ ಒಣಗುತ್ತಿರುವುದು ಕಂಡುಬಂದಿದ್ದು, ರೈತರು ಎಳೆಯ ಕಬ್ಬನ್ನೇ ಕಟಾವು ಮಾಡಿ ಸರ್ಕಾರಿ ಗೋಶಾಲೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ಎಷ್ಟೇ ಪ್ರಮಾಣದಲ್ಲಿದ್ದರೂ ನಿಗದಿತ ದರದಲ್ಲಿ  ಖರೀದಿಸುತ್ತೇವೆ, ಆದರೆ ಇಡಿ ತಾಲ್ಲೂಕಿನ ಕಬ್ಬಿನ ಮೇವು ತಂದರೂ ಒಂದು ದಿನಕ್ಕೆ ಸಾಕಾಗುವುದಿಲ್ಲ ಎಂಬ ಅಳಲು ಗೋಶಾಲೆ ನಿರ್ವಹಿಸುತ್ತಿರುವ ಸಿಬ್ಬಂದಿಯದು. ಆದರೆ ಗೋಶಾಲೆಯಲ್ಲಿಯೂ ದನಗಳಿಗೆ ಹೊಟ್ಟೆ ತುಂಬುವಷ್ಟು ಮೇವು ದೊರೆಯುತ್ತಿಲ್ಲ ಎಂದು ಅನೇಕ ರೈತರು ದೂರುತ್ತಿದ್ದಾರೆ.

ಬಾರದ ಡಿ.ಸಿ: ಈ ಮಧ್ಯೆ ಶನಿವಾರ ಗೋಶಾಲೆಗೆ ಆಗ್ರಹಿಸಿ ತಹಶೀಲ್ದಾರರ ಕಚೇರಿಗೆ ಮತ್ತಿಗೆ ಹಾಕಿದ್ದ ತಾಲ್ಲೂಕಿನ ಚಳಗೇರಿ ರೈತರಿಗೆ ಭಾನುವಾರ ಜಿಲ್ಲಾಧಿಕಾರಿ ಸ್ವತಃ ಇಲ್ಲಿಗೆ ಬಂದು ಚರ್ಚಿಸಲು ಪರಿಸ್ಥಿತಿ ಅವಲೋಕನ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದ ಶಾಸಕ ಅಮರೇಗೌಡ ಬಯ್ಯಾಪುರ ಮತ್ತು ತಹಶೀಲ್ದಾರ ವೀರೇಶ ಬಿರಾದಾರ ರೈತರ ಮೂಗಿಗೆ ತುಪ್ಪ ಸವರಿ ಕಳಿಸಿದ್ದರು. ಆದರೆ ಭಾನುವಾರ ಸಂಜೆವರೆಗೂ ಜಿಲ್ಲಾಧಿಕಾರಿ ತಾಲ್ಲೂಕಿಗೆ ಭೇಟಿ ನೀಡದಿರುವುದು ತಿಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT