ಶುಕ್ರವಾರ, ಫೆಬ್ರವರಿ 21, 2020
24 °C
12 ಎಕರೆ ಬರಡು ಭೂಮಿಯಲ್ಲಿ ವೈಜ್ಞಾನಿಕ ಕೃಷಿ; ಇತರ ಕೃಷಿಕರಿಗೆ ಮಾದರಿ

ಅಧಿಕ ಸಂಬಳಕ್ಕೆ ಬೈ; ಕೃಷಿಗೆ ಜೈ...

ಬಸವರಾಜ ಎಸ್.ಉಳ್ಳಾಗಡ್ಡಿ Updated:

ಅಕ್ಷರ ಗಾತ್ರ : | |

Prajavani

ಕೊಲ್ಹಾರ: ಕೃಷಿಯತ್ತ ಆಕರ್ಷಿತರಾಗಿ ತಿಂಗಳಿಗೆ ₹85 ಸಾವಿರ ಸಂಬಳದ ಮಾರುಕಟ್ಟೆ ವ್ಯವಸ್ಥಾಪಕ ವೃತ್ತಿ ತೊರೆದು, ಸದ್ಯ ವೈಜ್ಞಾನಿಕ ಕೃಷಿ ಪದ್ಧತಿ ಮೂಲಕ ತೋಟಗಾರಿಕೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ ಮುಳವಾಡದ ಬಸವರಾಜ ಪರಗೊಂಡಪ್ಪ ಸಿದ್ದಾಪುರ.

ತೋಟಗಾರಿಕೆಯಲ್ಲಿ ಬಿ.ಎಸ್ಸಿ ಪದವಿಪಡೆದಿರುವ ಬಸವರಾಜ, ಜಿಲ್ಲೆಯ ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಅವರ ಪುತ್ರ. ಅಂಗಾಂಶ ಬಾಳೆ ಕುರಿತು ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕರಾಗಿ 5 ವರ್ಷ ಸೇವೆ ಸಲ್ಲಿಸಿದ್ದರು. ಸ್ವಯಂ ಕೃಷಿಗಾಗಿ ತಮ್ಮ ಕುಟುಂಬದ ಸಹಕಾರ, ನೆರವಿನಿಂದ ಮುಳವಾಡ ಗುಡ್ಡದಲ್ಲಿ 12 ಎಕರೆ ಬರಡು ಭೂಮಿಯನ್ನು ಖರೀದಿಸಿ ಅದನ್ನು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದರು. 12 ಎಕರೆಯಲ್ಲಿ ಎರಡು ಎಕರೆ ಬಾಳೆ, ಒಂದು ಎಕರೆ ನಿಂಬೆ ಹಾಗೂ ಎಂಟು ಎಕರೆ ದ್ರಾಕ್ಷಿ ಬೆಳೆದಿದ್ದಾರೆ. ಜೊತೆಗೆ 85X85X15 ಅಗಲದ ಕೃಷಿ ಹೊಂಡ, ಅಲ್ಲದೇ ಸುಮಾರು ₹75 ಲಕ್ಷ ವೆಚ್ಚದ ಒಣದ್ರಾಕ್ಷಿ ಸಂಸ್ಕರಣಾ ಕೇಂದ್ರವನ್ನು ಸಹ ಸ್ಥಾಪಿಸಿದ್ದಾರೆ.

ಎರಡು ಎಕರೆಯಲ್ಲಿ ಬೆಲ್ಟ್‌ ಪದ್ಧತಿಯಲ್ಲಿ ಸುಮಾರು 3,700 ‘ಜಿ9’ ತಳಿ ಬಾಳೆ ಸಸಿಗಳನ್ನು ಬೆಳೆದಿದ್ದಾರೆ. ಇದರಿಂದ 17 ಟನ್ ಇಳುವರಿ ಪಡೆದು, ಖರ್ಚು ಕಳೆದು ವರ್ಷಕ್ಕೆ ₹8 ಲಕ್ಷ ಆದಾಯ ಗಳಿಸಿದ್ದಾರೆ. ಎಂಟು ಎಕರೆಯಲ್ಲಿ ವೈಜ್ಞಾನಿಕ ಪೆಂಡಾಲ್ ಪದ್ಧತಿಯಲ್ಲಿ ‘ಥಾಮ್ಸನ್’ ಸೀಡ್ಲೆಸ್‌ ತಳಿ ದ್ರಾಕ್ಷಿ ಬೆಳೆ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಸಾಂಗ್ಲಿ ಹಾಗೂ ನಾಸಿಕ್ ಭಾಗಗಳಲ್ಲಿ ಅಧ್ಯಯನ ಮಾಡಿ ಪೆಂಡಾಲ್ ಪದ್ಧತಿ ಅನುಸರಿಸಿದ್ದಾರೆ.

4 ಎಕರೆಯಲ್ಲಿ ಸಾಲಿನಿಂದ ಸಾಲಿಗೆ 10 ಅಡಿ, ಸಸಿಯಿಂದ ಸಸಿಗೆ 4 ಅಡಿ ಇನ್ನುಳಿದ 4 ಎಕರೆಯಲ್ಲಿ ಸಾಲಿನಿಂದ ಸಾಲು 9 ಅಡಿ, ಸಸಿಯಿಂದ ಸಸಿಗೆ 4 ಅಡಿ ಅಂತರದಲ್ಲಿ ಪೆಂಡಾಲ್ ಪದ್ಧತಿಯಲ್ಲಿ ದ್ರಾಕ್ಷಿ ನಾಟಿದ್ದಾರೆ. ಕಂಬಗಳನ್ನು ಒಂದಕ್ಕೊಂದು ಸಂಪರ್ಕಿಸುವ ಈ ಪದ್ಧತಿಯಿಂದ ಗಿಡಗಳಿಗೆ ರೋಗ ತಗಲುವುದು ಕಡಿಮೆ ಹಾಗೂ ಔಷಧ ಸಿಂಪಡಣೆಯೂ ಸರಳವಾಗಿದೆ. ಗುಣಮಟ್ಟದ ಹಣ್ಣು ಜತೆ ಉತ್ತಮ ಇಳುವರಿ ಸಿಗುತ್ತದೆ. ಔಷಧ ಸಿಂಪಡಣೆಗಾಗಿ ಇಟಲಿ ದೇಶದ ತಂತ್ರಜ್ಞಾನವುಳ್ಳ ₹4 ಲಕ್ಷ ಬೆಲೆಯ ಯಂತ್ರ ತಂದಿದ್ದಾರೆ. ದ್ರಾಕ್ಷಿ ಬೆಳೆದು ಎರಡು ವರ್ಷವಾಗಿದ್ದು, ಮುಂದಿನ ವರ್ಷ ಅತ್ಯುತ್ತಮ ದ್ರಾಕ್ಷಿ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

ಸುಮಾರು ₹75 ಲಕ್ಷ ವೆಚ್ಚದಲ್ಲಿ ತೋಟಗಾರಿಕೆ ಇಲಾಖೆಯಿಂದ ಧನಸಹಾಯ ಪಡೆದು ಒಣದ್ರಾಕ್ಷಿ ಸಂಸ್ಕರಣಾಕೆಂದ್ರ ಸ್ಥಾಪಿಸಿದ್ದಾರೆ. 15 ಕೆ.ಜಿ.ಯ ಒಂದು ಬಾಕ್ಸ್ ಒಣದ್ರಾಕ್ಷಿ ಸಂಸ್ಕರಣೆ ಮಾಡಿ ಪ್ಯಾಕ್ ಮಾಡಿಕೊಡಲು ಒಂದು ಬಾಕ್ಸ್‌ಗೆ ₹65 ಪಡೆಯುತ್ತಾರೆ. ಇದರಿಂದ ಸುತ್ತಮುತ್ತಲಿನ ದ್ರಾಕ್ಷಿ ಬೆಳೆಗಾರ
ರಿಗೆ ಕೂಡ ಅನುಕೂಲವಾಗಿದೆ.

ಮಾಹಿತಿಗೆ ಮೊಬೈಲ್‌: 97391 72848 ಸಂಪರ್ಕಿಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು