₹ 1.91 ಲಕ್ಷಕ್ಕೆ ಮಾರಾಟವಾಯಿತು ಈ ಟಗರು: ಅಂತಾ ವಿಶೇಷತೆ ಏನು?

ಮಳವಳ್ಳಿ (ಮಂಡ್ಯ): ಸಾಮಾನ್ಯವಾಗಿ ಒಂದು ಬಂಡೂರು ತಳಿಯ ಟಗರು ₹ 25 ರಿಂದ 30 ಸಾವಿರಕ್ಕೆ ಮಾರಾಟವಾಗುತ್ತದೆ. ಆದರೆ, ಮಳವಳ್ಳಿ ತಾಲ್ಲೂಕಿನ ದೇವಿಪುರ ಗ್ರಾಮದಲ್ಲಿ ರೈತರೊಬ್ಬರು ಸಾಕಿದ ಟಗರು ₹ 1.91 ಲಕ್ಷಕ್ಕೆ ಮಾರಾಟವಾಗಿದೆ.
ದೇವಿಪುರ ಗ್ರಾಮದ ರೈತ ಸಣ್ಣಪ್ಪ ಅವರು ಬಂಡೂರು ತಳಿಯ ಟಗರನ್ನು ಮಂಡ್ಯ ತಾಲ್ಲೂಕಿನ ಬಿದರಕೋಟೆಯ ರೈತ ಕೃಷ್ಣೇಗೌಡ ಅವರಿಗೆ ಮಾರಾಟ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿ ಗ್ರಾಮದ ಸೋಮಣ್ಣ ಅವರ ಬಳಿ ₹1.05ಲಕ್ಷ ನೀಡಿ ಈ ಟಗರನ್ನು ಸಣ್ಣಪ್ಪ ಖರೀದಿಸಿದ್ದರು. ವಿಶೇಷ ಕಾಳಜಿಯಿಂದ ಈ ಟಗರನ್ನು ಸಾಕಿದ್ದ ಅವರು, ಈ ಟಗರನ್ನು ತಳಿ ಅಭಿವೃದ್ಧಿಗೆ ಬಳಸಿದ್ದರು.
ಅತಿ ಹೆಚ್ಚು ಬೆಲೆಗೆ ಮಾರಾಟವಾದ ಕಾರಣ ಗ್ರಾಮದಲ್ಲಿ ಟಗರಿಗೆ ವಿಶೇಷ ಪೂಜೆ ಮಾಡಿ ಸಣ್ಣಪ್ಪ ಹಾಗೂ ಕೃಷ್ಣೇಗೌಡ ಅವರನ್ನು ಕಳಶದೊಂದಿಗೆ ದೇವಿಪುರ ಗ್ರಾಮ ಸೇರಿದಂತೆ ಸುತ್ತಮುತ್ತಲ ಐದಾರು ಗ್ರಾಮಗಳಲ್ಲಿ ತಮಟೆ, ನಗಾರಿಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಈ ಟಗರನ್ನು ನೋಡಲು ಮುಗಿಬಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.