ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನಲ್ಲಿ ಮುಳುಗಿದ 50 ಎಕರೆಯ ಬೆಳೆ

ಮಳೆಯ ಆರ್ಭಟ: ಕೃಷಿಗೆ ನುಗ್ಗಿದ ನೀರು; ಉಕ್ಕಿ ಹರಿದ ಚಂದಗಿರಿಕೊಪ್ಪಲು ಗ್ರಾಮದ ಸರಹದ್ದಿನ ಅಡ್ಡಹಳ್ಳ
Last Updated 26 ಅಕ್ಟೋಬರ್ 2021, 4:21 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಚಂದಗಿರಿಕೊಪ್ಪಲು, ನೆಲಮನೆ, ಬಲ್ಲೇನಹಳ್ಳಿ ಮತ್ತು ಇತರ ಗ್ರಾಮಗಳಲ್ಲಿ ಬೆಳೆಗಳು ಜಲಾವೃತವಾಗಿವೆ.

ತಾಲ್ಲೂಕಿನ ನೆಲಮನೆ ಮತ್ತು ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಗ್ರಾಮಗಳ ನಡುವಿನ ಸಂಪರ್ಕ ಸೇತುವೆ ಮುಳುಗಿದೆ. ನೆಲಮನೆ ಗ್ರಾಮದ ಹತ್ತಾರು ರೈತರ ಬೆಳೆಗಳ ಮೇಲೆ ನೀರು ಹರಿದಿದೆ. ಬಲ್ಲೇನಹಳ್ಳಿ ಗ್ರಾಮದಲ್ಲಿ ಕೂಡ ಅಡ್ಡಹಳ್ಳದ ನೀರು ಬೆಳೆಗಳಿಗೆ ಹಾನಿ ಉಂಟು ಮಾಡಿದೆ. ಶ್ರೀನಿವಾಸ ಅಗ್ರಹಾರದ ಬಳಿ ಲೋಕಪಾವನಿ ನದಿಗೆ ಹೊಂದಿಕೊಂಡ ಜಮೀನುಗಳಿಗೂ ನೀರು ನುಗ್ಗಿದ್ದು ಭತ್ತ, ಕಬ್ಬಿನ ಬೆಳೆಗಳು ಹಾನಿಗೀಡಾಗಿವೆ.

‘50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಅಡ್ಡಹಳ್ಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಯಾರ ಜಮೀನುಗಳು ಎಲ್ಲಿವೆ ಎಂಬುದೇ ತಿಳಿಯದಂತೆ ನೀರು ಆವರಿಸಿದೆ. 50ರಿಂದ 60 ಎಕರೆಯಷ್ಟು ಬೆಳೆಗಳು ನೀರಿನಲ್ಲಿ ಮುಳುಗಿವೆ’ ಎಂದು ಚಂದಗಿರಿಕೊಪ್ಪಲು ಗ್ರಾಮದ ಜ್ಞಾನೇಶ್‌, ಯದುಕುಮಾರ್‌ ಹೇಳಿದ್ದಾರೆ.

ಚಂದಗಿರಿಕೊಪ್ಪಲು ಗ್ರಾಮದ ಸರಹದ್ದಿನಲ್ಲಿ ಹರಿಯುವ ಅಡ್ಡಹಳ್ಳಉಕ್ಕಿ ಹರಿದು 50 ಎಕರೆಗೂ ಹೆಚ್ಚು ಬೆಳೆ ನೀರಿನಲ್ಲಿ ಮುಳುಗಿದೆ. ಭತ್ತ, ಕಬ್ಬು, ಬಾಳೆ, ತರಕಾರಿ ಬೆಳೆಗಳ ಮೇಲೆ ನೀರು ಕಾಲುವೆಯಂತೆ ಹರಿದಿದೆ. ಫಸಲಿನ ಮೇಲೆ ರಾಶಿ ರಾಶಿ ಮರಳು, ಕೆಸರು ತುಂಬಿಕೊಂಡಿದೆ.

ಕೆಲವೆಡೆ ನೀರಿನ ರಭಸಕ್ಕೆ ಬೆಳೆಗಳು ಬುಡ ಸಹಿತ ಕೊಚ್ಚಿ ಹೋಗಿವೆ. ಸೋಮ ವಾರ ಮಧ್ಯಾಹ್ನದವರೆಗೂ ಅಡ್ಡಹಳ್ಳ ನದಿಯಂತೆ ತುಂಬಿ ಹರಿಯುತ್ತಿದ್ದ ದೃಶ್ಯ ಕಂಡುಬಂತು. ಕೃಷಿ ಭೂಮಿಗೆ ಇದ್ದ ಸಂಪರ್ಕ ರಸ್ತೆಗಳು ಕೊರಕಲು ಬಿದ್ದಿವೆ. ಕೈಗಾಲುವೆ ಮೇಲೆ ಅಡ್ಡಹಳ್ಳದ ನೀರು ಹರಿದು ಕಾಲುವೆಯೇ ಕಾಣ ದಂತಾಗಿದೆ. ಗ್ರಾಮದ ಪಕ್ಕದ ಕಿರು ಜಲ ವಿದ್ಯುತ್‌ ಉತ್ಪಾದನಾ ಘಟಕಕ್ಕೂ ನೀರು ನುಗ್ಗಿದೆ.

3 ದಿನಗಳ ಹಿಂದಷ್ಟೇ ಅಡ್ಡಹಳ್ಳ ಉಕ್ಕಿ ಹರಿದು ಚಂದಗಿರಿಕೊಪ್ಪಲು ಮತ್ತು ಆಸಿಪಾಸಿನ ಗ್ರಾಮಗಳ ಹತ್ತಾರು ಎಕರೆ ಬೆಳೆ ಹಾನಿಗೀಡಾಗಿತ್ತು. ಹಳ್ಳದಲ್ಲಿ ನೀರಿನ ಮಟ್ಟ ಇಳಿಯುವ ಮುನ್ನವೇ ಮತ್ತೆ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು ರೈತರನ್ನು ಕಂಗಾಲು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT