ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ಶಾಲಾ ಪಠ್ಯಪುಸ್ತಕ ಶೇ 90ರಷ್ಟು ಪೂರೈಕೆ

Published 26 ಜೂನ್ 2024, 3:19 IST
Last Updated 26 ಜೂನ್ 2024, 3:19 IST
ಅಕ್ಷರ ಗಾತ್ರ

ಮಂಡ್ಯ: ಒಂದರಿಂದ ಹತ್ತನೇ ತರಗತಿ ವರೆಗಿನ ಸರ್ಕಾರಿ ಶಾಲಾ ಪಠ್ಯಪುಸ್ತಕಗಳು ಶೇ 90ರಷ್ಟು ಪೂರೈಕೆಯಾಗಿದ್ದು, ವಿವಿಧ ತಾಲ್ಲೂಕುಗಳಲ್ಲಿರುವ ಗೋದಾಮುಗಳಿಂದ ಶಾಲೆಗಳಿಗೆ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. 

ಪ್ರತಿ ವಿದ್ಯಾರ್ಥಿಗೆ ಒಂದರಂತೆ ‘ಶಾಲಾ ದಿನಚರಿ’ (ಸ್ಕೂಲ್‌ ಡೈರಿ) ಪೂರೈಕೆಯಾಗಿದ್ದು, ಶಾಲಾವಾರು ಹಂಚಿಕೆ ಮಾಡಲಾಗಿದೆ. 4ನೇ ತರಗತಿಯಿಂದ 9ನೇ ತರಗತಿವರೆಗೆ ‘ಚಟುವಟಿಕೆ ಸಹಿತ ಅಭ್ಯಾಸ ಪುಸ್ತಕ’ (ವರ್ಕ್‌ ಬುಕ್‌)ಗಳನ್ನು ನೀಡುತ್ತಿದ್ದು, ಪರಿಣಾಮಕಾರಿ ಕಲಿಕೆಗೆ ಸಹಕಾರಿಯಾಗಿವೆ ಎನ್ನುತ್ತಾರೆ ಶಿಕ್ಷಕರು. 

‘ಪಠ್ಯಪುಸ್ತಕಗಳ ಪೂರೈಕೆಯಲ್ಲಿ ವಿಳಂಬವಾಗಿಲ್ಲ. ನಿಗದಿತ ವೇಳೆಯಲ್ಲಿ ಪೂರೈಕೆಯಾಗುತ್ತಿರುವುದರಿಂದ ಶಿಕ್ಷಕರ ಬೋಧನೆ ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಿದೆ’ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು. 

ಪಠ್ಯಪುಸ್ತಕ ಸರಬರಾಜು: ಮಂಡ್ಯ ಜಿಲ್ಲೆಗೆ 14,07,665 ಉಚಿತ ಪುಸ್ತಕಗಳು ಮತ್ತು 8,64,018 ಮಾರಾಟದ ಪುಸ್ತಕಗಳು ಸೇರಿದಂತೆ ಶೇ 90ರಷ್ಟು ಪೂರೈಕೆಯಾಗಿವೆ. ಮೈಸೂರು ಜಿಲ್ಲೆಗೆ 26,47,314 ಉಚಿತ ಪುಸ್ತಕಗಳು ಮತ್ತು 17,78,076 ಮಾರಾಟದ ಪುಸ್ತಕಗಳು ಸೇರಿದಂತೆ ಶೇ 90.5ರಷ್ಟು ಪಠ್ಯಪುಸ್ತಕಗಳು ಸರಬರಾಜಾಗಿವೆ. ಚಾಮರಾಜನಗರ ಜಿಲ್ಲೆಗೆ 10,00,800 ಉಚಿತ ಪುಸ್ತಕಗಳು ಮತ್ತು 4,00,783 ಮಾರಾಟದ ಪುಸ್ತಕಗಳು ಸೇರಿದಂತೆ ಶೇ 90.5ರಷ್ಟು ಪಠ್ಯಪುಸ್ತಕಗಳು ಜಿಲ್ಲೆಗೆ ರವಾನೆಯಾಗಿವೆ. 

ಹಾಸನ ಜಿಲ್ಲೆಗೆ 14,19,455 ಉಚಿತ ಪುಸ್ತಕಗಳು ಮತ್ತು 8,53,706 ಮಾರಾಟದ ಪುಸ್ತಕಗಳು ಸೇರಿದಂತೆ ಶೇ 88.5ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಕೊಡಗು ಜಿಲ್ಲೆಗೆ 3,85,719 ಉಚಿತ ಪುಸ್ತಕಗಳು ಮತ್ತು 3,76,414 ಉಚಿತ ಪುಸ್ತಕಗಳು ಸೇರಿದಂತೆ ಶೇ 89.5ರಷ್ಟು ಪಠ್ಯಪುಸ್ತಕಗಳು ಜಿಲ್ಲೆಯ ಗೋದಾಮಿಗೆ ಸರಬರಾಜಾಗಿವೆ. 

‘ಉಚಿತ ಪಠ್ಯಪುಸ್ತಕಗಳನ್ನು ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು (ಆರ್‌.ಟಿ.ಇ.) ಕೋಟಾದಡಿ ಪ್ರವೇಶ ಪಡೆದಿರುವವರಿಗೆ ನೀಡುತ್ತೇವೆ. ಮಾರಾಟದ ಪಠ್ಯಪುಸ್ತಕಗಳನ್ನು ಖಾಸಗಿ ಶಾಲೆ, ಮೊರಾರ್ಜಿ ಶಾಲೆ, ಅಂಬೇಡ್ಕರ್ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ಶಾಲೆ, ಕೇಂದ್ರೀಯ ವಿದ್ಯಾಲಯ ಹಾಗೂ ನವೋದಯ ಶಾಲೆಗಳಿಗೆ ಪೂರೈಸುತ್ತೇವೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. 

ಅಭ್ಯಾಸ ಪುಸ್ತಕಗಳು ಬಾಕಿ: 4 ಮತ್ತು 5ನೇ ತರಗತಿಯ ಅಭ್ಯಾಸ ಪುಸ್ತಕಗಳು (ವರ್ಕ್‌ ಬುಕ್‌) ಗೋದಾಮುಗಳಿಗೆ ಪೂರೈಕೆಯಾಗುತ್ತಿವೆ. ಶಾಲಾವಾರು ಶಿಕ್ಷಕರಿಗೆ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. 6 ಮತ್ತು 7ನೇ ತರಗತಿಯ ಅಭ್ಯಾಸ ಪುಸ್ತಕಗಳು ಇನ್ನೂ ಜಿಲ್ಲೆಗಳ ಗೋದಾಮಿಗೆ ಸರಬರಾಜಾಗಿಲ್ಲ. 

‘5ರಿಂದ 9ನೇ ತರಗತಿವರೆಗಿನ ಸುಮೇರು (ಕನ್ನಡ), ರೇನ್‌ಬೋ (ಇಂಗ್ಲಿಷ್‌) ಮತ್ತು ಸುವೇಗ (ಗಣಿತ) ಅಭ್ಯಾಸ ಪುಸ್ತಕಗಳು ವಿದ್ಯಾರ್ಥಿಗಳ ಕೈ ಸೇರಿಲ್ಲ. 4ನೇ ತರಗತಿಗೆ ಸಂಬಂಧಿಸಿದ ಕನ್ನಡ ಮತ್ತು ಗಣಿತ ವಿಷಯಗಳ ವರ್ಕ್‌ಬುಕ್‌ಗಳು ಪೂರೈಕೆಯಾಗುವುದು ಬಾಕಿ ಇದೆ’ ಎಂದು ಪಠ್ಯಪುಸ್ತಕ ನೋಡಲ್‌ ಅಧಿಕಾರಿಗಳು ತಿಳಿಸಿದರು. 

‘2ನೇ ತರಗತಿಯ ‘ಕನ್ನಡ’ ಮತ್ತು ಉರ್ದು ಶಾಲೆಯ 5 ಶೀರ್ಷಿಕೆಗಳ ಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಿಲ್ಲ. ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿಯ ಗಣಿತ, 3ನೇ ತರಗತಿಯ ಇ.ವಿ.ಎಸ್‌ ಹಾಗೂ 4ನೇ ತರಗತಿಯ ಗಣಿತ–1 ಪುಸ್ತಕ, ಶಾಲೆಗಳು ಆರಂಭವಾಗಿ 26 ದಿನ ಕಳೆದರೂ ವಿತರಣೆಯಾಗಿಲ್ಲ. ಕೂಡಲೇ ಪಠ್ಯಪುಸ್ತಕಗಳನ್ನು ಪೂರೈಸಬೇಕು’ ಎಂದು ಪೋಷಕರು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT