ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬೆಟ್ಟದ ಹೊಸೂರು ಗ್ರಾಮದ ಪ್ರಸಿದ್ಧ ಬೋಳಾರೆ ಉದ್ಭವ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಪೂಜಾ ಕಾರ್ಯಕ್ರಮಗಳು ತಿಂಗಳುಪೂರ್ತಿ ನಡೆಯಲಿವೆ ಎಂದು ಬೋಳಾರೆ ರಂಗನಾಥಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬೂಕನಕೆರೆ ಬಿ.ಟಿ. ವೆಂಕಟೇಶ್ ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ನಡೆದ ಆಡಳಿತ ಮಂಡಳಿಯ ಪೂರ್ವಭಾವಿ ಸಭೆಯ ಬಳಿಕ ಮಾತನಾಡಿದ ಅವರು, ಶ್ರಾವಣ ಮಾಸದಲ್ಲಿ ದೇವಾಲಯದಲ್ಲಿ ನಾಲ್ಕು ಶನಿವಾರಗಳು ವಿಶೇಷ ಪೂಜೆ, ಅನ್ನದಾನ, ಪ್ರಕಾರ ಪೂಜೆಗಳು ನಡೆಯಲಿವೆ. ಆ.10ರಂದು ಮೊದಲ ಶನಿವಾರ ಅಟ್ಟುಪ್ಪೆ ಗ್ರಾಮಸ್ಥರು, ಆ.17ರಂದು ಮಡುವಿನ ಕೋಡಿ ಮತ್ತು ಮತ್ತಿಕೆರೆ ಗ್ರಾಮಸ್ಥರು, ಆ.24ರಂದು ಲಕ್ಷ್ಮಿಸಾಗರ ಮತ್ತು ನೀಲನಹಳ್ಳಿ ಗ್ರಾಮಸ್ಥರು ಅನ್ನದಾಸೋಹದ ವ್ಯವಸ್ಥೆ ಮಾಡಿದ್ದಾರೆ ಎಂದರು.
‘ಆ.31ರ ಕಡೆಯ ಶನಿವಾರ ಬೆ.10.30ರಿಂದ 11.30ರೊಳಗೆ ಟ್ರಸ್ಟ್ ನೇತೃತ್ವದಲ್ಲಿ ಬ್ರಹ್ಮರಥೋತ್ಸವ ನಡೆಯಲಿದ್ದು, ಅಂದು ಕನಿಷ್ಠ 20-30 ಸಾವಿರ ಭಕ್ತರು ಆಗಮಿಸಲಿದ್ದು, ಆ ದಿನ ಬರುವ ಭಕ್ತರಿಗೆ ಬೆಟ್ಟದ ಹೊಸೂರು, ಭೂಕನಕೆರೆ, ವಡಕೆ, ಸೆಟ್ಟಳ್ಳಿ, ಐಚನಹಳ್ಳಿ, ದೊಡ್ಡ ಗಾಡಿಗನಹಳ್ಳಿ ಗ್ರಾಮಗಳ ಭಕ್ತರು ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡಿದ್ದಾರೆ’ ಎಂದು ತಿಳಿಸಿದರು.
ಬ್ರಹ್ಮರಥೋತ್ಸವದ ದಿವಸ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಶಾಸಕರಾದ ಎಚ್.ಟಿ.ಮಂಜು, ದರ್ಶನ್ ಪುಟ್ಟಣ್ಣಯ್ಯ, ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ. ಪ್ರಕಾಶ್, ಮಾಜಿ ಸಚಿವರಾದ ನಾರಾಯಣಗೌಡ, ಸಿ.ಎಸ್. ಪುಟ್ಟರಾಜು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮಡುವಿನಕೋಡಿ ಸುದರ್ಶನ್ ಮಾತನಾಡಿ, ‘ದೇವಾಲಯವು ಪುರಾತನವಾಗಿದ್ದು, ಬುಕ್ಕರಾಯನ ಕಾಲದಲ್ಲಿ ನಿರ್ಮಾಣವಾಗಿದೆ. ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಕ್ಷೇತ್ರವಾಗಿದೆ. ಕ್ಷೇತ್ರದಲ್ಲಿ ಭಕ್ತರು ಮತ್ತು ಸಾರ್ವಜನಿಕರ ಅನುಕೂಲ ಮತ್ತು ಸದುದ್ದೇಶಗಳಿಗೆ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಶೇ 70ರಷ್ಟು ಕೆಲಸ ಮುಗಿದಿದೆ, ಉಳಿದ ಕಾರ್ಯಕ್ಕೆ ಜನಪ್ರತಿನಿಧಿಗಳು, ದೇವರ ಒಕ್ಕಲಿನವರು ಮತ್ತು ದಾನಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ದೇವಸ್ಥಾನದ ಅರ್ಚಕರಾದ ಸುಂದರ್ ಮತ್ತು ಮನೋಹರ್, ಟ್ರಸ್ಟ್ ಗೌರವಾಧ್ಯಕ್ಷ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಡುವಿನ ಕೊಡಿ ಸುದರ್ಶನ್, ಸಂಘಟನಾ ಕಾರ್ಯದರ್ಶಿ ಮಹೇಶ್, ಉಪಾಧ್ಯಕ್ಷ ರಂಗಸ್ವಾಮಿ, ಬೆಟ್ಟೇಗೌಡ ವೆಂಕಟರಮಣಿ ಗೌಡ, ಸಂಘಟನಾ ಕಾರ್ಯದರ್ಶಿ ಜವರೇಗೌಡ, ನಿವೃತ್ತ ಅರಣ್ಯ ಅಧಿಕಾರಿ ನಾಗಣ್ಣ, ನಾಗೇಗೌಡ, ಬರಾಳು ರಂಗಪ್ಪ, ಐಚನಹಳ್ಳಿ ರೇವಣ್ಣ, ನಾಗರಾಜೇಗೌಡ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.