ಮದ್ದೂರು: ಬೆಂಗಳೂರು– ಮೈಸೂರು ದಶಪಥ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ಟೆಂಪೊ ಹಠಾತ್ ಬ್ರೇಕ್ ಹಾಕಿದ ಕಾರಣ ಹಿಂದೆ ಬರುತ್ತಿದ್ದ ಕಾರು ಡಿಕ್ಕಿಯಾಗಿ ಶುಕ್ರವಾರ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರ್‌ನಲ್ಲಿದ್ದ ತಾಯಿ– ಮಗ ಮೃತಪಟ್ಟು ತಂದೆ ತೀವ್ರವಾಗಿ ಗಾಯಗೊಂಡಿದ್ದಾರೆ.
ಕೊಡಗು ಜಿಲ್ಲೆ, ನಾಪೋಕ್ಲು ಬಲಮುರಿ ನಿವಾಸಿಗಳಾದ ಕವಿತಾ (47), ಅವರ ಪುತ್ರ ಆರ್ಯ ಅಯ್ಯಪ್ಪನ್ (14) ಮೃತಪಟ್ಟಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಆರ್ಯ ತಂದೆ ಮುತ್ತಪ್ಪ (54) ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಕುಟುಂಬ ಯುಗಾದಿ ಹಬ್ಬಕ್ಕಾಗಿ ಸ್ವಗ್ರಾಮಕ್ಕೆ ಬಂದಿತ್ತು. ಹಬ್ಬ ಮುಗಿಸಿ ಮಾರುತಿ ಸ್ವಿಫ್ಟ್ ಕಾರ್‌ನಲ್ಲಿ ವಾಪಸ್ ಬೆಂಗಳೂರಿಗೆ ತೆರಳುವಾಗ ಘಟನೆ ನಡೆದಿದೆ. ಪಟ್ಟಣದ ಹೊರವಲಯ ಐಶ್ವರ್ಯ ಕಾನ್ವೆಂಟ್ ಬಳಿ ಮಧ್ಯಾಹ್ನ 2.20ರ ಸುಮಾರಿಗೆ ಅಪಘಾತ ಸಂಭವಿಸಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ಟೆಂಪೊ ಬ್ರೇಕ್ ಹಾಕಿದ್ದೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಆರ್ಯ ಸ್ಥಳದಲ್ಲೇ ಮೃತಪಟ್ಟರು, ಕವಿತಾ ಮಂಡ್ಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದ ಸಂದರ್ಭದಲ್ಲಿ ಕೊನೆಯುಸಿರೆಳೆದರು. ಮುತ್ತಪ್ಪ ಸ್ಥಿತಿ ಚಿಂತಾಜನಕವಾಗಿದ್ದು ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಚಾರ ಠಾಣಾ ಸಬ್ ಇನ್‌ಸ್ಪೆಕ್ಟರ್ ಅಯ್ಯನಗೌಡ ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಮದ್ದೂರು ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.