ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ | ಐತಿಹಾಸಿಕ ನೆಲಮಾಳಿಗೆಗಳ ಸಂರಕ್ಷಣೆಗೆ ಕ್ರಮ: ಎನ್‌.ಎನ್‌. ಗೌಡ

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖಂಡರು
Published 28 ಮೇ 2024, 14:42 IST
Last Updated 28 ಮೇ 2024, 14:42 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದ ದಕ್ಷಿಣ ಭಾಗದ ಕೋಟೆ ಮತ್ತು ಕಂದಕಗಳ ನಡುವೆ ಈಚೆಗೆ ಪತ್ತೆಯಾಗಿರುವ ಐತಿಹಾಸಿಕ ಜೋಡಿ ನೆಲ ಮಾಳಿಗೆಗಳ ಸ್ಥಳಕ್ಕೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕ್ಯುರೇಟರ್‌ ಎನ್‌.ಎನ್‌. ಗೌಡ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿಯೇ ಇದ್ದ ಕ್ಯಾತನಹಳ್ಳಿಯ ವೆಂಕಟೇಗೌಡ ಸೇವಾ ಸಮಿತಿಯ ಅಧ್ಯಕ್ಷ ಡಾ.ಕೆ.ವೈ. ಶ್ರೀನಿವಾಸ್‌ ಮತ್ತು ಸಮರ್ಪಣಾ ಟ್ರಸ್ಟ್‌ ಅಧ್ಯಕ್ಷ ಕೆ.ಎಸ್‌ ಜಯಶಂಕರ್‌ ಅವರು, ಎನ್‌.ಎನ್‌. ಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು. ‍‘ಪಟ್ಟಣ ಹಾಗೂ ಆಸುಪಾಸಿನಲ್ಲಿ ಸಾಕಷ್ಟು ಸ್ಮಾರಕಗಳು ಕುಸಿದು ಬೀಳುತ್ತಿವೆ. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅವುಗಳ ಸಂರಕ್ಷಣೆಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಇಲಾಖೆ ಇದ್ದೂ ಇಲ್ಲದಂತಿದೆ. ಅಧಿಕಾರಿಗಳು ತಿಂಗಳಿಗೆ ಒಮ್ಮೆಯೂ ಇತ್ತ ತಲೆ ಹಾಕುವುದಿಲ್ಲ. ಇದೇ ಧೋರಣೆ ಮುಂದುವರಿದರೆ ಆಯುಕ್ತರ ಕಚೇರಿ ಎದುರು ಧರಣಿ ಕೂರುತ್ತೇವೆ’ ಎಂದು ಎಚ್ಚರಿಸಿದರು.

ಇದರಿಂದ ಅವಕ್ಕಾಗ ಎನ್‌.ಎನ್‌. ಗೌಡ, ‘ಗಿಡ, ಗಂಟಿಗಳಿಂದ ಮುಚ್ಚಿ ಹೋಗಿರುವ ಈ ಐತಿಹಾಸಿಕ ನೆಲಮಾಳಿಗೆಗಳ ಪರಿಸರವನ್ನು ಸ್ವಚ್ಛಗೊಳಿಸಲಾಗುವುದು. ಈ ಸ್ಮಾರಕಗಳ ಬಗ್ಗೆ ಮಾಹಿತಿಯನ್ನು ಒಳಗೊಂಡ ಫಲಕವನ್ನೂ ಹಾಕಲಾಗುವುದು’ ಎಂದು ತಿಳಿಸಿದರು.

‘ತಾಲ್ಲೂಕಿನ ವಿದ್ಯಾನಗರ ಬಳಿ ಇರುವ, ದಿವಾನ್‌ ಪೂರ್ಣಯ್ಯ ಕಾಲದ 40 ಅಡಿ ಎತ್ತರದ ಐತಿಹಾಸಿಕ ಜೋಸಯ್ಯ ವೆಬ್‌ ಸ್ಮಾರಕ ಸ್ತಂಭ ಮಳೆ, ಬಿಸಿಲು, ಗಾಳಿಗೆ ಶಿಥಿಲವಾಗುತ್ತಿದೆ. ಅದನ್ನು ಸಂರಕ್ಷಿಸಬೇಕು’ ಎಂದು ಕಡತನಾಳು ಜಯಶಂಕರ್‌ ಒತ್ತಾಯಿಸಿದರು. ‘ಸ್ಥಳ ಪರಿಶೀಲನೆ ನಡೆಸಿ ಜೋಸಯ್ಯ ವೆಬ್‌ ಸ್ಮಾರಕ ಸ್ತಂಭವನ್ನು ಸಂರಕ್ಷಿಸಲು ಅಗತ್ಯ ಕ್ರಮ ವಹಿಸಲಾಗುವುದು’ ಎಂದು ಎನ್‌.ಎನ್‌. ಗೌಡ ಭರವಸೆ ನೀಡಿದರು.

‘ಪಟ್ಟಣದಲ್ಲಿ ಐತಿಹಾಸಿಕ ಮಹತ್ವವುಳ್ಳ ಸಾಕಷ್ಟು ಸ್ಮಾರಕಗಳು ನಶಿಸುತ್ತಿವೆ. ಅವುಗಳನ್ನು ಸಂರಕ್ಷಣೆ ಮಾಡದೇ ಹೋದರೆ ಐತಿಹಾಸಿಕ ಮಹತ್ವದ ಕುರುಹುಗಳು ನಾಶವಾಗಲಿವೆ. ಹಾಗಾಗದಂತೆ ಎಚ್ಚರ ವಹಿಸಬೇಕು’ ಎಂದು ಗಾಂಧಿವಾದಿ ಡಾ.ಬಿ. ಸುಜಯಕುಮಾರ್‌ ಎನ್‌.ಎನ್‌. ಗೌಡ ಅವರಿಗೆ ಸಲಹೆ ನೀಡಿದರು. ಗ್ರಾ.ಪಂ. ಸದಸ್ಯ ಕೆ.ಶೆಟ್ಟಹಳ್ಳಿ ಅಪ್ಪಾಜಿ, ಗಂಜಾಂ ಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT