ಗುರುವಾರ , ಜನವರಿ 23, 2020
28 °C

ಕಾಲ ಬದಲಾದಂತೆ ಕಲಾವಿದನೂ ಬದಲಾಗಲಿ: ಪ್ರೊ.ಎಂ.ಎ.ಹೆಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಕಾಲ ಬದಲಾದಂತೆ ಕಲಾವಿದರು ಹೊಸತನಕ್ಕೆ ತೆರೆದುಕೊಂಡು ಬದಲಾಗಬೇಕು. ಚಿಂತನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಹೇಳಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ, ಕರ್ನಾಟಕ ಸಂಘ, ಕ್ಷೀರಸಾಗರ ಮಿತ್ರಕೂಟ, ಜಾನಪದ ಜನ್ನೆಯರು ವತಿಯಿಂದ ಬುಧವಾರ ನಗರದ ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ನಡೆದ ಯಕ್ಷಗಾನ ಸಂಭ್ರಮ–2019, ಉಪನ್ಯಾಸ–ಸಂವಾದ–ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜೀವಂತ ಕಲೆ ಎಂಬುದು ಎಲ್ಲಾ ಕಾಲದಲ್ಲೂ ಬದಲಾವಣೆಗೆ ಸ್ಪಂದಿಸಬೇಕು. ಇಲ್ಲವಾದರೆ ವಸ್ತು ಸಂಗ್ರಹಾಲಯದಲ್ಲಿನ ಒಂದು ವಸ್ತುವಾಗಿಬಿಡುತ್ತದೆ. ಇಂತಹ ಸ್ಥಿತಿ ಮೂಡಲಪಾಯಕ್ಕೆ ಈಗಾಗಲೇ ಬಂದೊದಗಿದೆ. ಮೂಡಲಪಾಯ ಏಳಿಗೆ, ಅಭಿವೃದ್ಧಿ ಮಾಡಬೇಕು. ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಳ್ಳಡಬೇಕಾದ ಗುರುತರ ಜವಾಬ್ದಾರಿ ನಮ್ಮಲ್ಲರ ಮೇಲಿದೆ. ಯಕ್ಷಗಾನ ಕುರಿತ ಪಠ್ಯಗಳನ್ನು ಶಾಲೆಗಳಲ್ಲಿ ಅಳವಡಿಸಿ, ಹೆಚ್ಚಿನ ಅರಿವು ಮೂಡಿಸಬೇಕು. ಶಾಲಾ ಆಡಳಿತ ಮಂಡಳಿಗಳು ಇದಕ್ಕೆ ಪ್ರೋತ್ಸಾಹ ನೀಡಬೇಕು’ ಎಂದು ಸಲಹೆ ನೀಡಿದರು.

‌‘ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಯಕ್ಷಗಾನಕ್ಕೆ ಆಶ್ರಯ ಸಿಕ್ಕಿತ್ತು. ಸಾಮ್ರಾಜ್ಯ ಅವನತಿ ಹೊಂದಿದ ನಂತರ ಕಲಾವಿದರು ಕರ್ನಾಟಕದ ಕರಾವಳಿ, ದಕ್ಷಿಣ, ಉತ್ತರ ಭಾಗಕ್ಕೆ ಹಂಚಿ ಹೋದರು. ನಂತರದ ದಿನಗಳಲ್ಲಿ ಅದು ಅಳಿವಿನಂಚಿನತ್ತ ಸಾಗಿದ್ದು, ಕರಾವಳಿ ಭಾಗದಲ್ಲಿ ನೆಲೆಯನ್ನು ಕಂಡಿದೆ. ಪಡುವಲಪಾಯ ಹಾಗೂ ಮೂಡಲಪಾಯ ಎರಡೂ ಪ್ರಾಕಾರಗಳನ್ನು ಸಮಾನವಾಗಿ ಕಾಣಬೇಕು. ಅದರ ಗತವೈಭೈವವನ್ನು ಪುನರ್ ಸ್ಥಾಪಿಸಬೇಕು’ ಎಂದು ಹೇಳಿದರು.

‘ಅವಿದ್ಯಾವಂತ ಎಂಬ ಕಾರಣಕ್ಕೆ ತಮಗೇ ಒಂದು ರೇಖೆ ಹಾಕಿಕೊಳ್ಳುವುದರಲ್ಲಿ ಅರ್ಥ ಇಲ್ಲ. ಸಾಧನೆ ಮಾಡಿರುವವರಲ್ಲಿ ಬಹಳಷ್ಟು ಮಂದಿ ಅವರೇ ಇದ್ದಾರೆ. ಮೊದಲು ತಮ್ಮಲ್ಲಿನ ಕೀಳರಿಮೆಯನ್ನು ಬಿಡಬೇಕು. ಅಕಾಡೆಮಿಗಳ ಸ್ಥಾಪನೆ ಎಂಬುದು ರಾಜಕೀಯದ ಲಾಭವಾಗಬಾರದು. ಪ್ರಮಾಣಿಕವಾಗಿ ಅದರ ಏಳಿಗೆಗೆ ಶ್ರಮಿಸಿ ಪೂರಕ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತಂದರೆ ಮಾತ್ರ ನಿಜ ಅರ್ಥದಲ್ಲಿ ಕಲೆಗಳ ಬೆಳವಣಿಗೆ ಆಗುತ್ತದೆ’ ಎಂದರು.

ಲೇಖಕ ನಾರಾಯಣ ತಿರುಮಲಾಪುರ ಮಾತನಾಡಿ ‘ಮಂಡ್ಯ ಸಾಹಿತ್ಯ, ಸಂಸ್ಕೃತಿ, ಹೋರಾಟಕ್ಕೆ ಸದಾ ಮುಂದು. ಗತ ವೈಭವ ಮೆರೆದ ಮೂಡಲಪಾಯವನ್ನು ಉಳಿಸಿ ಬೆಳೆಸಲು ಶ್ರಮಿಸಬೇಕು’ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶ್‍ಗೌಡ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಪಿ. ಸ್ವಾಮಿ, ಕ್ಷೀರಸಾಗರ ಮಿತ್ರಕೂಟದ ಪೋಷಕ ಕೆ.ಎಸ್. ಚಂದ್ರಶೇಖರ್, ಜಾನಪದ ಜನ್ನೆಯರು ಸಂಘಟನೆಯ ಅಧ್ಯಕ್ಷೆ ಡಾ.ಸುಜಾತಾ ಅಕ್ಕಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು