ಭಾನುವಾರ, ಜನವರಿ 23, 2022
27 °C
ಕೃಷಿ ಕಾಯ್ದೆಗಳ ಸ್ವರೂಪ, ಖಾಸಗೀಕರಣ ಮತ್ತು ಪರಿಣಾಮಗಳು ಕುರಿತ ಉಪನ್ಯಾಸದಲ್ಲಿ ನ್ಯಾ.ಎಚ್‌.ಎನ್‌.ನಾಗಮೋಹನ್‌ದಾಸ್‌

ತಾಲ್ಲೂಕಿಗೆ ಒಂದು ಕೃಷಿ ಯೋಜನೆ ಅಗತ್ಯ: ನಾಗಮೋಹನ್‌ದಾಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ದೇಶದಲ್ಲಿ ಕೃಷಿ ಬಿಕ್ಕಟ್ಟು ತಲೆದೋರಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ಕೊಡಬೇಕೆಂಬ ಚಳವಳಿಗಳು ಹುಟ್ಟಿಕೊಂಡಿವೆ. ಇಷ್ಟಿದ್ದರೂ ಸರ್ಕಾರಗಳು ಕೃಷಿ ಕಾಯ್ದೆ ತಂದು ತೊಂದರೆ ಕೊಡುತ್ತಿವೆ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಬೇಸರ ವ್ಯಕ್ತಪಡಿಸಿದರು.

ನಗರದ ಕೆ.ವಿ.ಶಂಕರಗೌಡ ಪ್ಲೇಸ್‌ಮೆಂಟ್‌ ಸಭಾಂಗಣದಲ್ಲಿ ಕರ್ನಾಟಕ ಸಂಘ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕೃಷಿ ಕಾಯ್ದೆಗಳ ಸ್ವರೂಪ, ಖಾಸಗೀಕರಣ ಮತ್ತು ಪರಿಣಾಮಗಳು ಕುರಿತ ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿತು. ಬಳಿಕ ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಹಿಂಪಡೆದಿದೆ. ರೈತರ ಇನ್ನಷ್ಟು ಸಮಸ್ಯೆಗಳು ಬಗೆಹರಿಯಬೇಕಿದೆ ಎಂದು ಹೇಳಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಹಾಗೂ ಜನಪರವಾಗಿ ಕೆಲಸ ಮಾಡಬೇಕು. ರೈತರ ಕೈಯಲ್ಲಿ ಭೂಮಿ ಉಳಿಯಬೇಕು. ಕೃಷಿ ಉತ್ಪಾದನಾ ವೆಚ್ಚ ಕಡಿಮೆ ಆಗಬೇಕು. ರೈತರು ಬೆಳೆದ ಫಸಲಿಗೆ ಬೆಂಬಲ ಬೆಲೆ ಸಿಗಬೇಕು. ಕೃಷಿ ಉತ್ಪಾದನಾ ಮಾರುಕಟ್ಟೆ ವಿಸ್ತಾರಗೊಳ್ಳಬೇಕು. ಕೃಷಿ ಸಂಬಂಧಿತ ಕೈಗಾರಿಕೆಗಳು ಬೇಕು. ತಾಲ್ಲೂಕಿಗೆ ಒಂದು ಕೃಷಿ ಯೋಜನೆ ಅಗತ್ಯವಿದೆ ಎಂದು ಸಲಹೆ ನೀಡಿದರು.

ಗ್ರಾಮಾಂತರ ಪ್ರದೇಶದಲ್ಲಿರುವ ಯುವಜನರಿಗೆ ಕೌಶಲ ಅಭಿವೃದ್ಧಿ ಸಂಸ್ಥೆಗಳನ್ನು ಸ್ಥಾಪಿಸಿ ಅವರಿಗೆ ಉದ್ಯೋಗ ಸಿಗುವಂತಾಗಬೇಕು. ಕೇವಲ ಮತದಾರರ ಓಲೈಕೆ ಮಾಡುವ ಉದ್ದೇಶದಿಂದ ಜನರಿಗೆ ದ್ರೋಹ ಮಾಡುವ ಕೆಲಸ ಮಾಡಬಾರದು ಎಂದು ತಿಳಿಸಿದರು.

ಕೃಷಿ ಕಾಯ್ದೆಗಳ ಸ್ವರೂಪ, ಖಾಸಗೀಕರಣ ಮತ್ತು ಪರಿಣಾಮಗಳು ಕುರಿತ ಉಪನ್ಯಾಸ, ಸಂವಾದದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ವಹಿಸಿದ್ದರು.

ಶಾಸಕ ಕೆ.ಟಿ.ಶ್ರೀಕಂಠೇಗೌಡ, ಸಾಹಿತಿ ಹುಲ್‌ಕೆರೆ ಮಹದೇವು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾ ಘಟಕ ಅಧ್ಯಕ್ಷ ಕೆಂಪೂಗೌಡ, ರೈತ ಮುಖಂಡರಾದ ಸುನಂದಾ ಜಯರಾಂ, ನಂದಿನಿ ಜಯರಾಂ, ಇಂಡುವಾಳು ಚಂದ್ರಶೇಖರ್, ಮುಖಂಡರಾದ ಗುರುಪ್ರಸಾದ್ ಕೆರಗೋಡು, ಶಿವಲಿಂಗಯ್ಯ, ಸಿದ್ದರಾಜು, ಭರತ್‌ರಾಜ್, ಮಧುಚಂದನ್‌, ಟಿ.ಯಶವಂತ, ಎಸ್‌.ವಿಶ್ವನಾಥ್‌ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.