ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಮಾಯವಾದ ಕಣ: ರಸ್ತೆಯಲ್ಲೇ ಒಕ್ಕಣೆ

ಬೆಂಕಿಗೆ ಆಹ್ವಾನ, ವಾಹನಗಳ ಸಂಚಾರಕ್ಕೆ ಸಂಚಕಾರ: ಪೊಲೀಸರ ಎಚ್ಚರಿಕೆಗೆ ಕಿಮ್ಮತ್ತಿಲ್ಲ
Last Updated 30 ಜನವರಿ 2022, 19:31 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ವಿವಿಧ ಭಾಗದಲ್ಲಿ ರೈತರು ಒಕ್ಕಣೆಗೆ ಸಾರ್ವಜನಿಕ ರಸ್ತೆಗಳನ್ನೇ ಅವಲಂಬಿಸಿದ್ದು, ವಾಹನ ಸವಾರರ ಪ್ರಾಣಕ್ಕೆ ಕಂಟಕ ಎದುರಾಗಿದೆ. ಹಳ್ಳಿಗಳಲ್ಲಿ ‘ಕಣ ಸಂಸ್ಕೃತಿ’ ಮಾಯವಾಗುತ್ತಿದ್ದು ರಸ್ತೆ ಒಕ್ಕಣೆಯಿಂದ ಬೆಂಕಿ ಅನಾಹುತಕ್ಕೆ ಅಪಾಯ ನೀಡಿದಂತಾಗಿದೆ.

ಸದ್ಯ ಜಿಲ್ಲೆಯಾದ್ಯಂತ ರಾಗಿ, ಭತ್ತ ಒಕ್ಕಣೆ ನಡೆಯುತ್ತಿದ್ದು, ಬಹುತೇಕ ರೈತರು ಒಕ್ಕಣೆ ಮಾಡಲು ಮುಖ್ಯರಸ್ತೆಗಳನ್ನೇ ಅವಲಂಬಿಸಿದ್ದು, ವಾಹನ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ರಸ್ತೆ ಮೇಲಿನ ಒಕ್ಕಣೆಯಿಂದ ವಿವಿಧೆಡೆ ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುವ ಅಪಾಯ ಎದುರಾಗಿದೆ.

ರಾಗಿ ಹುಲ್ಲು ಹೆಚ್ಚಾಗಿ ಜಾರುವ ಕಾರಣ ಬೈಕ್‌ಗಳಲ್ಲಿ ಓಡಾಡುವವರು ಜಾರಿ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಕೆಲವೆಡೆ ರಸ್ತೆಬದಿ ಜಾಗ ಬಿಡದೆ ಪೂರ್ತಿ ರಸ್ತೆಗೆ ಹುಲ್ಲು ಹರಡುವ ಕಾರಣ ವಾಹನ ಸವಾರರು ಅನಿವಾರ್ಯವಾಗಿ ಹುಲ್ಲಿನ ಮೇಲೆಯೇ ಗಾಡಿ ಓಡಿಸಬೇಕಾಗಿದೆ. ಈ ಸಂದರ್ಭದಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಗಾಡಿ ಓಡಿಸುವಂತಾಗಿದೆ.

ರಸ್ತೆ ಮಾರ್ಗದಲ್ಲಿ ಹಳ್ಳಿಗಳು ಬರುತ್ತಿದ್ದಂತೆ ಕಿಲೋಮೀಟರ್‌ಗಟ್ಟಲೆ ಅಲ್ಲಲ್ಲಿ ಹುಲ್ಲು ಹಾಕಿರುತ್ತಾರೆ. ಇದರಿಂದ ವಾಹನ ಸವಾರರು ಅವಸರದಿಂದ ಓಡಾಡಲು ಸಾಧ್ಯವೇ ಇಲ್ಲವಾಗಿದೆ. ಬಹಳ ಎಚ್ಚರಿಕೆಯಿಂದ ಗಾಡಿ ಓಡಿಸಬೇಕು, ಎಚ್ಚರ ತಪ್ಪಿದರೆ ಅಪಾಯ ತಪ್ಪಿದ್ದಲ್ಲ. ಹುಲ್ಲಿನ ಮೇಲೆ ಪೆಟ್ರೋಲ್‌ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಳ್ಳಬಹುದು ಎಂಬ ಭಯದಿಂದಲೇ ವಾಹನ ಚಾಲನೆ ಮಾಡಬೇಕಾಗಿದೆ.

ಮಳೆಯಾಶ್ರಿತ ಪ್ರದೇಶವಾಗಿರುವ ನಾಗಮಂಗಲ, ಕೆ.ಆರ್‌.ಪೇಟೆ ಭಾಗದಲ್ಲಿ ರಾಗಿ, ಹುರುಳಿಯ ಒಕ್ಕಣೆ ಹೆಚ್ಚಾಗಿ ನಡೆಯುತ್ತಿದೆ. ಭತ್ತ ಒಕ್ಕಣೆ ಮಾಡುವವರು ಸಾಮಾನ್ಯವಾಗಿ ಯಂತ್ರಕ್ಕೆ ಹಾಕುತ್ತಾರೆ. ಆದರೆ ರಾಗಿ, ಹುರುಳಿ ಬೆಳೆದವರು ಒಕ್ಕಣೆಗಾಗಿ ರಸ್ತೆಯನ್ನೇ ಅವಲಂಬಿಸಿದ್ದಾರೆ. ಕೆಲವರು ಹುಲ್ಲಿನ ಮೇಲೆ ಟ್ರಾಕ್ಟರ್‌ ಓಡಿಸಿಕೊಂಡು ಒಕ್ಕಣೆ ಮಾಡುತ್ತಾರೆ. ಹಲವರು ರಸ್ತೆಗಳಲ್ಲಿ ಓಡಾಡುವ ವಾಹನಗಳ ಮೇಲೆಯೇ ಅವಲಂಬಿಸಿದ್ದಾರೆ.

ಗಾಡಿಗಳು ಓಡಾಡಿದ ನಂತರ ಹುಲ್ಲನ್ನು ಎತ್ತಿ ಕಾಳುಗಳನ್ನು ರಸ್ತೆಯ ಮೇಲೆಯೇ ತೂರುತ್ತಾರೆ. ಇದರಿಂದ ಅಪಾರ ಪ್ರಮಾಣದ ಕಾಳು ರಸ್ತೆಯಲ್ಲಿ ವ್ಯರ್ಥವಾಗುತ್ತದೆ. ಕಣದಲ್ಲಿ ಒಕ್ಕಣೆ ಮಾಡಿದರೆ ಕಾಳು ಹಾಳಾಗುವುದಿಲ್ಲ. ಕಾಳು ವ್ಯರ್ಥವಾಗುವುದನ್ನು ಲೆಕ್ಕಿಸದ ರೈತರು ಒಕ್ಕಣೆಗೆ ರಸ್ತೆಯನ್ನೇ ಅವಲಂಬಿಸಿದ್ದಾರೆ.

ಕೆಲ ರೈತರು ರಸ್ತೆ ಬದಿಯಲ್ಲಿಯೇ ಮೆದೆಗಳನ್ನು ಹಾಕಿರುತ್ತಾರೆ. ತಮ್ಮ ವೈಯಕ್ತಿಕ ಭೂಮಿಯಂತೆ ರಸ್ತೆ ಬದಿಯಲ್ಲೇ ಮೆದೆ ಹಾಕಿ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಾರೆ. ಇದರಿಂದಾಗಿ ರಸ್ತೆ ಬದಿಯಲ್ಲಿ ವಾಹನಗಳು ಹೋಗಲು ಕೂಡ ಜಾಗವಿಲ್ಲದಂತಹ ಸ್ಥಿತಿ ನಿರ್ಮಿಸುತ್ತಾರೆ.

‘ಹಿಂದೆ ರೈತರು ತಿಂಗಳುಗಟ್ಟಲೆ ರೋಣುಗಲ್ಲುಗಳಿಂದ ಒಕ್ಕಣೆ ಮಾಡುತ್ತಿದ್ದರು. ಪ್ರತಿ ಕುಟುಂಬದಲ್ಲಿ ರೈತರು ತಪ್ಪದೇ ಕಣ ಮಾಡಿ, ಸಗಣಿಯಿಂದ ಸಾರಿಸುತ್ತಿದ್ದರು. ಹುಲ್ಲು ಮುಗಿದ ನಂತರ ಕಣದಲ್ಲಿ ಸಿಹಿ ಹಂಚಿ ಕಣದ ಹಬ್ಬ ಮಾಡುತ್ತಿದ್ದರು, ಕೆಲವರು ಗ್ರಾಮಸ್ಥರಿಗೆ ಊಟ ಹಾಕಿಸುತ್ತಿದ್ದರು. ಕಣದಲ್ಲಿ ಹಾಡು, ಹಸೆ ಇರುತ್ತಿತ್ತು. ಆದರೆ ಈಗ ಅವೆಲ್ಲವೂ ಮಾಯವಾಗಿವೆ. ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ಕಾಳು ವ್ಯರ್ಥವಾಗುತ್ತದೆ. ಅದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ರೈತ ರಾಜೇಗೌಡ ಬೇಸರ ವ್ಯಕ್ತಪಡಿಸಿದರು.

‘ಹುರುಳಿ ಗಿಡ ಹೆಚ್ಚು ಒಣಗಿರುತ್ತದೆ. ಒಂದು ಸ್ವಲ್ಪ ಪೆಟ್ರೋಲ್‌, ಡೀಸೆಲ್‌ ಸೋರಿದರೂ ಬೆಂಕಿ ಹೊತ್ತಿಕೊಳ್ಳುವ ಅಪಾಯ ಇರುತ್ತದೆ. ಹಲವೆಡೆ ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ್ದೇವೆ. ರೈತರು ಕಣದಲ್ಲೇ ಒಕ್ಕಣೆ ಮಾಡಬೇಕು. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಮಂಡ್ಯದ ಚಾಲಕ ನಾಗರಾಜು ಹೇಳಿದರು.

ನಾಗಮಂಗಲ ತಾಲ್ಲೂಕು ಬಿಂಡಿಗನವಿಲೆ ಹೋಬಳಿ ವ್ಯಾಪ್ತಿಯ ಹಲವು ಮುಖ್ಯರಸ್ತೆಗಳಲ್ಲಿ ರೈತರು ರಸ್ತೆಯಲ್ಲೇ ಒಕ್ಕಣೆ ಮಾಡುತ್ತಿದ್ದು, ಅದರಿಂದ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ನಾರಗೋನಹಳ್ಳಿ ಗ್ರಾಮಕ್ಕೆ ತೆರಳುವ ಇಡೀ ರಸ್ತೆ ಕಣವಾಗಿ ಮಾರ್ಪಾಡಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

ಕೆ.ಆರ್‌.ಪೇಟೆ ತಾಲ್ಲೂಕು ಕಿಕ್ಕೇರಿ ಹೋಬಳಿ ವ್ಯಾಪ್ತಿಯ ಬಹುತೇಕ ರೈತರು ರಸ್ತೆಯಲ್ಲೇ ಒಕ್ಕಣೆ ಮಾಡುತ್ತಿದ್ದಾರೆ. ಶ್ರವಣಬೆಳಗೊಳ– ಕಿಕ್ಕೇರಿ ಮುಖ್ಯರಸ್ತೆ ಕಣವಾಗಿ ಮಾರ್ಪಟ್ಟಿದೆ. ಈ ಮಾರ್ಗದಲ್ಲಿ ಶ್ರವಣಬೆಳಗೊಳಕ್ಕೆ ತೆರಳುವ ಪ್ರವಾಸಿಗರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಮದ್ದೂರು ತಾಲ್ಲೂಕಿನ ಭಾರತೀನಗರ–ಹಲಗೂರು ಮುಖ್ಯ ರಸ್ತೆ, ಮಂಡ್ಯ ರಸ್ತೆ, ದೊಡ್ಡರಸಿನಕೆರೆ, ಗುರುದೇವರಹಳ್ಳಿ, ಚಿಕ್ಕರಸಿನಕೆರೆ, ಕಾಡುಕೊತ್ತನಹಳ್ಳಿ, ಯಡಗನಹಳ್ಳಿ, ಸಬ್ಬನಹಳ್ಳಿ, ಕೆ.ಶೆಟ್ಟಿಹಳ್ಳಿ, ಯಲಾದಹಳ್ಳಿ, ತೊರೆಬೊಮ್ಮನಹಳ್ಳಿ, ಎಸ್‌ಐ ಹೊನ್ನಲಗೆರೆ, ಎಸ್‌ಐ ಹಾಗಲಹಳ್ಳಿ, ಚಂದೂಪುರ ಸೇರಿದಂತೆ ಹಲವು ಹಳ್ಳಿಗಳಲ್ಲಿ ನಿರಂತರವಾಗಿ ರಸ್ತೆ ಮೇಲೆಯೇ ಒಕ್ಕಣೆ ನಡೆಯುತ್ತಿದೆ.

ಮಳವಳ್ಳಿ ತಾಲ್ಲೂಕಿನ ಕಿರುಗಾವಲು, ಪೂರಿಗಾಲಿ, ರಾವಣಿ, ರಾಮಂದೂರು, ಮಿಕ್ಕೆರೆ, ತಳಗವಾದಿ, ಬೆಳಕವಾಡಿ, ಕಿರಂಗೂಸೂರು, ಕಲ್ಕಣಿ, ಚಿಕ್ಕಮುಲಗೂಡು, ಬಿ.ಜಿ.ಪುರ ಭಾಗದಲ್ಲಿ ರಸ್ತೆ ಒಕ್ಕಣೆ ನಡೆಯುತ್ತಿದೆ.

‘ಕೃಷಿ ಕಣ’ ಯೋಜನೆ ರದ್ದು:ರೈತರಿಗೆ ಸಾಮೂಹಿಕವಾಗಿ ಕಣ ನಿರ್ಮಿಸಿಕೊಳ್ಳಲು ರಾಜ್ಯ ಸರ್ಕಾರ ‘ಕೃಷಿ ಕಣ’ ಯೋಜನೆಯನ್ನು ಜಾರಿಗೊಳಿಸಿತ್ತು. ಆದರೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಣಕ್ಕೆ ಜಾಗ ಸಿಗದ ಪರಿಣಾಮ ಆ ಯೋಜನೆಯ ಹಣ ಬಳಕೆಯಾಗುತ್ತಿರಲಿಲ್ಲ. ಇದನ್ನು ಮನಗಂಡ ಸರ್ಕಾರ 2010ರಲ್ಲೇ ಯೋಜನೆಯನ್ನು ರದ್ದುಗೊಳಿಸಿದೆ.

ಇದರ ಜೊತೆಗೆ ನರೇಗಾ ಅಡಿ ಸಾಮೂಹಿಕ ಕಣ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ರೈತರು ಅದನ್ನು ಸದುಪಯೋಗ ಮಾಡಿಕೊಳ್ಳದ ಕಾರಣ ಅದನ್ನೂ ನರೇಗಾ ಯೋಜನೆಯಿಂದ ಹೊರಗಿಡಲಾಗಿದೆ. ಸದ್ಯ ಎಪಿಎಂಸಿಗಳಲ್ಲಿ ಕಣ ನಿರ್ಮಿಸಿಕೊಳ್ಳಲು ಅವಕಾಶವಿದೆ. ಅದರೆ, ಎಪಿಎಂಸಿ ಪಟ್ಟಣಕ್ಕೆ ಸೀಮಿತವಾಗಿದ್ದು, ಅಲ್ಲಿಗೆ ರೈತರು ತೆರಳುವುದಿಲ್ಲ.

‘ಕೃಷಿ ಕಣ ಇದ್ದಾಗ ರೈತರು ಕಣ ನಿರ್ಮಾಣಕ್ಕೆ ಜಾಗ ಕೊಡಲು ಮುಂದೆ ಬರುತ್ತಿರಲಿಲ್ಲ. ನರೇಗಾ ಅಡಿಯಲ್ಲೂ ಕಣಕ್ಕೆ ರೈತರಿಂದ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಹೀಗಾಗಿ ಸದ್ಯ ಸಾಮೂಹಿಕ ಕಣ ನಿರ್ಮಿಸಿಕೊಡುವ ಯೋಜನೆ ಕೃಷಿ ಇಲಾಖೆಯಲ್ಲಿ ಇಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್‌.ಚಂದ್ರಶೇಖರ್‌ ಹೇಳಿದರು.

ಪೊಲೀಸ್‌ ಪ್ರಕರಣ ಇಲ್ಲ:ರಸ್ತೆಯಲ್ಲಿ ಒಕ್ಕಣೆ ಮಾಡುವವರ ವಿರುದ್ಧ ಜಿಲ್ಲೆಯ ಯಾವ ಪೊಲೀಸ್‌ ಠಾಣೆಯಲ್ಲೂ ಪ್ರಕರಣ ದಾಖಲಾಗಿಲ್ಲ. ಆದರೆ, ಪ್ರಕರಣ ದಾಖಲಿಸುವ ಕುರಿತು ಎಚ್ಚರಿಕೆಯನ್ನಷ್ಟೇ ನೀಡಲಾಗಿದೆ. ಎಚ್ಚರಿಕೆಯನ್ನು ಪಾಲಿಸದ ರೈತರು ರಸ್ತೆಯಲ್ಲೇ ಒಕ್ಕಣೆ ಮಾಡುವುದನ್ನು ಮುಂದುವರಿಸಿದ್ದಾರೆ.

‘ರೈತರಾದ ಕಾರಣ ಅವರಿಗೆ ಎಚ್ಚರಿಕೆ ನೀಡಿದ್ದೇವೆ. ಅಪಘಾತವಾಗಿ ಯಾವುದೇ ಹಾನಿ ಉಂಟಾದರೆ ಅಂತಹ ರೈತರ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ತಿಳಿಸಿದರು.

*

ಪ್ರಜಾವಾಣಿ ತಂಡ:ಎಂ.ಎನ್‌.ಯೋಗೇಶ್‌, ಲಿಂಗರಾಜು, ಉಲ್ಲಾಸ್‌, ಅಶೋಕ್‌, ಗೋವಿಂದರಾಜು, ಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT