ಗುರುವಾರ , ಆಗಸ್ಟ್ 5, 2021
28 °C

ಸಹಾಯಕ ಪ್ರಾಧ್ಯಾಪಕ ನೇಮಕಾತಿ: ವಯೋಮಿತಿ ಸಡಿಲಿಕೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಕೋವಿಡ್‌ ಕಾರಣಕ್ಕೆ ಕಳೆದೆರಡು ವರ್ಷಗಳಿಂದ ಮುಂದೂಡಲ್ಪಟ್ಟಿದ್ದ ಸರ್ಕಾರಿ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿ ಸಡಿಲಗೊಳಿಸಬೇಕು ಎಂದು ಒತ್ತಾಯಿಸಿ ‘ರಾಜ್ಯ ನೆಟ್‌, ಸ್ಲೆಟ್‌, ಪಿಎಚ್‌.ಡಿ ಅರ್ಹತೆಯುಳ್ಳವರ ವೇದಿಕೆ’ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌ ಅಶ್ವತ್ಥನಾರಾಯಣ ಅವರನ್ನು ಒತ್ತಾಯಿಸಿದೆ.

ಈ ಕುರಿತು ವೇದಿಕೆ ಸದಸ್ಯರು ಸಚಿವರಿಗೆ ಪತ್ರ ಬರೆದಿದ್ದು, ರಾಜ್ಯದ ಪದವಿ ಕಾಲೇಜುಗಳಲ್ಲಿ ಖಾಲಿ ಉಳಿದಿರುವ 1,242 ಸಹಾಯಕ ಪ್ರಾಧ್ಯಾಪಕರು ಹಾಗೂ 310 ಪ್ರಾಂಶುಪಾಲರ ನೇರ ನೇಮಕಾತಿಗಾಗಿ 2019ರಲ್ಲೇ ಚಾಲನೆ ನೀಡಲಾಗಿತ್ತು. ನೆಟ್‌ (ರಾಷ್ಟ್ರೀಯ ಅರ್ಹತಾ ಪರೀಕ್ಷೆ), ಸ್ಲೆಟ್‌ (ರಾಜ್ಯ ಅರ್ಹತಾ ಪರೀಕ್ಷೆ) ಹಾಗೂ ಪಿಎಚ್‌ಡಿ ಅರ್ಹತೆಯುಳ್ಳವರು ಆಗಿನಿಂದಲೂ ಅಧ್ಯಯನದಲ್ಲಿ ತೊಡಗಿದ್ದರು. ಕೋವಿಡ್‌–19ನಿಂದಾಗಿ ನೇಮಕಾತಿ ಪ್ರಕ್ರಿಯೆ ಮುಂದೂಡಲ್ಪಟ್ಟ ಕಾರಣ ನೂರಾರು ಪದವೀಧರರು ವಯೋಮಾನ ಅರ್ಹತೆ ಮೀರುವ ಅಪಾಯ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸ್ಥಗಿತಗೊಂಡಿದ್ದ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚನೆ ಕೊಟ್ಟಿದ್ದಾರೆ. ಇದರಿಂದ ವಯೋಮಾನ ಮೀರಿದ ಅಭ್ಯರ್ಥಿಗಳು ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಾಗಿ ಒಂದು ಬಾರಿಗೆ ಗರಿಷ್ಠ ವಯೋಮಾನ ಅರ್ಹತಾ ದಿನಾಂಕವನ್ನು ಜೂನ್‌ 26, 2020ಕ್ಕೆ ನಿಗದಿಗೊಳಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿಗೂ ಇದೇ ರೀತಿ ಕೋವಿಡ್‌ ಅಡ್ಡಿಯಾಗಿತ್ತು. ಅಲ್ಲಿಯೂ ಹಲವು ಅಭ್ಯರ್ಥಿಗಳಿಗೆ ಅರ್ಹತೆ ಮೀರುವ ಅಪಾಯ ಎದುರಾಗಿತ್ತು. ಅಲ್ಲಿ ಗರಿಷ್ಠ ವಯೋಮಿತಿಯನ್ನು ಸಡಿಲಗೊಳಿಸಿ ಆದೇಶ ಹೊರಡಿಸಲಾಗಿದೆ. ಅದೇ ರೀತಿ ಪದವಿ ಕಾಲೇಜುಗಳ ಸಹಾಯಕ ಉಪನ್ಯಾಸಕರ ನೇಮಕಾತಿಯಲ್ಲೂ ವಯೋಮಾನ ಸಡಿಲಗೊಳಿಸಬೇಕು ಎಂದು ಸಮಿತಿಯ ಸದಸ್ಯರು ಒತ್ತಾಯಿಸಿದ್ದಾರೆ.

‘ಸಂವಿಧಾನದ 14ನೇ ವಿಧಿ ಅನ್ವಯ ಸರ್ಕಾರಿ ಸೇವೆ ಪಡೆಯಲು ತಾರತಮ್ಯ ಮಾಡುವಂತಿಲ್ಲ, ಕಾನೂನಿನ ಮುಂದೆ ಎಲ್ಲರೂ ಸಮಾನರು. ಪೊಲೀಸ್‌ ಇಲಾಖೆ ಕೈಗೊಂಡಿರುವ ಕ್ರಮವನ್ನು ಉನ್ನತ ಶಿಕ್ಷಣ ಇಲಾಖೆಯೂ ಕೈಗೊಳ್ಳಬೇಕು. ಆ ಮೂಲಕ ಸರ್ಕಾರಿ ಪದವಿ ಕಾಲೇಜು ಸೇರಲು ಪ್ರಯತ್ನಿಸುತ್ತಿರುವ ಅಭ್ಯರ್ಥಿಗಳ ನೆರವಿಗೆ ಬರಬೇಕು’ ಎಂದು ಸಮಿತಿಯ ಅಧ್ಯಕ್ಷ ಎಂ.ಎಲ್‌.ಕೃಷ್ಣೇಗೌಡ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು