ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಆಟೊ ಚಾಲಕರ ಗೋಳು ಕೇಳುವವರಿಲ್ಲ

8 ಕಿ.ಮೀ ದೂರ ದಾಟಿದರೆ ಪೊಲೀಸರಿಂದ ದಂಡ, ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ಗೂ ಬರುವಂತಿಲ್ಲ
Last Updated 29 ನವೆಂಬರ್ 2021, 3:06 IST
ಅಕ್ಷರ ಗಾತ್ರ

ಮಂಡ್ಯ: ಆರ್‌ಟಿಒ, ಪೊಲೀಸ್‌ ಇಲಾಖೆಯ ಅವೈಜ್ಞಾನಿಕ ನೀತಿಗಳಿಂದಾಗಿ ಬಡ ಆಟೊ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಅವರ ಗೋಳನ್ನು ಕೇಳುವವರು ಇಲ್ಲವಾಗಿದ್ದಾರೆ. ಕೋವಿಡ್‌ ಸಂಕಷ್ಟದ ನಂತರ ಡೀಸೆಲ್‌, ಗ್ಯಾಸ್‌ ಬೆಲೆ ಹೆಚ್ಚಾದರೂ ಆಟೊ ಪ್ರಯಾಣ ದರ ಹೆಚ್ಚಿಸದೇ ಹಳೆಯ ದರದಲ್ಲೇ ಆಟೊ ಓಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಆಟೊಗಳು ಮೀಟರ್‌ ರಹಿತವಾಗಿ ಓಡುತ್ತವೆ. ಆಟೊಗಳಿಗೆ ಮೀಟರ್‌ ಅಳವಡಿಸುವ ಪ್ರಸ್ತಾವ ಇದ್ದರೂ ಪೊಲೀಸರು ನಿಯಮ ವನ್ನು ಜಾರಿಗೊಳಿಸಿಲ್ಲ. ದೊಡ್ಡ ಹಳ್ಳಿ ಯಂತಿ ರುವ ಮಂಡ್ಯದಲ್ಲಿ ಬೆಂಗಳೂರು– ಮೈಸೂರು ಮಾದರಿಯಲ್ಲಿ ಆಟೊ ಪ್ರಯಾಣ ದರ ನಿಗದಿ ಮಾಡುವುದು ಅಸಾಧ್ಯ ಎಂದು ಆಟೊ ಚಾಲಕರೇ ಹೇಳುತ್ತಾರೆ.

ಬೆಂಗಳೂರು ಮೈಸೂರಿನಲ್ಲಿ ಕನಿಷ್ಠ ದರವನ್ನು ₹ 30ಕ್ಕೆ ಏರಿಕೆ ಮಾಡಲಾಗಿದೆ. ನಂತರದ ಪ್ರತಿ ಕಿಲೊ ಮೀಟರ್‌ಗೆ ₹ 15 ಹೆಚ್ಚಳ ಮಾಡಲಾಗಿದೆ. ಆದರೆ, ಮಂಡ್ಯದಲ್ಲಿ ಆಟೊ ದರ ಮೊದಲಿನಷ್ಟೇ ಇದೆ. ಕೋವಿಡ್‌ ನಂತರದ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೀಡಾಗಿದ್ದು, ಆಟೊ ಓಡಿಸಿಕೊಂಡು ಜೀವನ ನಡೆಸುವುದೇ ದುಸ್ತರ ಎಂಬಂತಾಗಿದೆ.

‘ಕೋವಿಡ್‌ ನಂತರ ಜನರು ಹೆಚ್ಚಾಗಿ ವೈಯಕ್ತಿಕ ವಾಹನಗಳನ್ನೇ ಬಳಸುತ್ತಿ ದ್ದಾರೆ. ಪ್ರತಿನಿತ್ಯ ನಾಲ್ಕೈದು ಬಾಡಿಗೆ ಸಿಗುವುದೇ ಕಷ್ಟ. ಹೀಗಿರುವಾಗ ಹೆಚ್ಚಿಗೆ ಬಾಡಿಗೆ ಕೇಳಿದರೆ ಜನರು ಬರುವುದೇ ಕಷ್ಟ. ಹೀಗಾಗಿ ದರ ಹೆಚ್ಚಳ ಮಾಡಿಲ್ಲ’ ಎಂದು ಆಟೊ ಚಾಲಕರು ಹೇಳುತ್ತಾರೆ.

ಅವೈಜ್ಞಾನಿಕ ನೀತಿ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರೂಪಿಸಿರುವ ನೀತಿ ಯಿಂದಾಗಿ ಆಟೊ ಚಾಲಕರು ನಗರಗಳ ವ್ಯಾಪ್ತಿಯಿಂದ ಹೊರಗೆ ತೆರೆಳುವುದು ಅಸಾಧ್ಯವಾಗಿವೆ. ಮೊದಲು ಆರ್‌ಟಿಒ ಅಧಿಕಾರಿಗಳು ತಾಲ್ಲೂಕು ವ್ಯಾಪ್ತಿಯಲ್ಲಿ ಅನುಮತಿ ನೀಡುತ್ತಿದ್ದರು. ಆದರೆ, ಈಗ ನಿಯಮಗಳಿಗೆ ತಿದ್ದುಪಡಿ ತಂದು ಆಟೊ ಚಾಲನಾ ವ್ಯಾಪ್ತಿಯನ್ನು ಹೋಬಳಿ ಹಂತಕ್ಕೆ ಸೀಮಿತಗೊಳಿಸಲಾಗಿದೆ. ಯಾವುದೇ ಆಟೊ ಚಾಲಕ ತಾನು ಅನುಮತಿ ಪಡೆದ ವ್ಯಾಪ್ತಿಯಲ್ಲೇ ಚಟುವಟಿಕೆ ನಡೆಸಬೇಕು. ವ್ಯಾಪ್ತಿಯನ್ನು ಮೀರಿದರೆ ಅವರಿಗೆ ಪೊಲೀಸರಿಂದ ದಂಡ ಬೀಳುತ್ತದೆ.

‘ಮಂಡ್ಯ ನಗರ ವ್ಯಾಪ್ತಿಯಲ್ಲಿ 8 ಕಿ.ಮೀ ನಿಗದಿ ಮಾಡಲಾಗಿದೆ. ನಾವು 8 ಕಿ.ಮೀ ವ್ಯಾಪ್ತಿಯಲ್ಲೇ ಗಾಡಿ ಓಡಿಸಬೇಕು. ಅದನ್ನು ಮೀರಿದರೆ ಪೊಲೀಸರು ಹೆಚ್ಚಿನ ದಂಡ ವಿಧಿಸುತ್ತಾರೆ. ಪೊಲೀಸರ ಕಣ್ತಪ್ಪಿಸಿ ಆಟೊ ಓಡಿಸುವುದು ಬಹಳ ಕಷ್ಟವಾಗಿದೆ. ಮಂಡ್ಯ ಹೊರವಲಯ ದಲ್ಲಿರುವ ಹಳ್ಳಿಗೂ ಆಟೊ ಓಡಿಸಲು ಸಾಧ್ಯವಾಗುತ್ತಿಲ್ಲ. ಹಳ್ಳಿ ಗ್ರಾಹಕರ ಬಾಡಿಗೆ ಹೋಗದಿದ್ದರೆ ನಾವು ಆಟೊ ಓಡಿಸಿಕೊಂಡು ಜೀವನ ಮಾಡುವು ದಕ್ಕೂ ಸಾಧ್ಯವಾಗುವುದಿಲ್ಲ’ ಎಂದು ಚಾಲಕ ರಮೇಶ್‌ ನೋವು ತೋಡಿಕೊಂಡರು.

ಗ್ಯಾಸ್‌ಗೂ ಬರುವಂತಿಲ್ಲ: ಈಚೆಗೆ ಆಟೊ ಚಾಲಕರು ಗ್ಯಾಸ್‌ ಆಟೊಗಳನ್ನೇ ಖರೀದಿ ಮಾಡುತ್ತಿದ್ದಾರೆ. ದುದ್ದ, ಬಸರಾಳು, ಕೊತ್ತತ್ತಿ ವ್ಯಾಪ್ತಿಯಲ್ಲಿ ಆಟೊ ಓಡಿಸುವವರು ಮಂಡ್ಯಕ್ಕೆ ಗ್ಯಾಸ್‌ ಹಾಕಿಸುವುದಕ್ಕೂ ಬರಲಾಗದಂತಹ ಪರಿಸ್ಥಿತಿ ಇದೆ. ಅವರು ನಗರ ವ್ಯಾಪ್ತಿಯಲ್ಲಿ ಆಟೊ ಓಡಿಸಲು ಅನುಮತಿ ಇಲ್ಲ. ಅವರು ಆಟೊ ಓಡಿಸುವ ವ್ಯಾಪ್ತಿಯಲ್ಲಿ ಯಾವುದೇ ಗ್ಯಾಸ್‌ ಬಂಕ್‌ಗಳಿಲ್ಲ. ಗ್ಯಾಸ್‌ ಹಾಕಿಸಲು ಬಂದ ಆಟೊ ಚಾಲಕರನ್ನು ಪೊಲೀಸರು ಹಿಡಿದು ದಂಡ ವಿಧಿಸುತ್ತಿರುವುದು ಅವರಿಗೆ ನುಂಗಲಾಗದ ತುತ್ತಾಗಿದೆ.

‘ನಗರದಲ್ಲಿ ಬಸ್ ಇಳಿದು ಮಂಡ್ಯದಿಂದ ಹೊರಭಾಗದಲ್ಲಿರುವ ಹಳ್ಳಿಗಳಿಗೆ ಆಟೊದಲ್ಲಿ ತೆರಳುವುದು ಕಷ್ಟವಾಗಿದೆ. ಆಟೊ ಚಾಲಕರು ಹಳ್ಳಿಗಳಿಗೆ ಬರಲು ಹಿಂಜರಿಯುತ್ತಾರೆ. ಬಂದರೂ ಪೊಲೀಸರ ದಂಡ ಭಯ ಅವರನ್ನು ಕಾಡುತ್ತದೆ. ಪೊಲೀಸ್‌ ಸಿಬ್ಬಂದಿಯ ಕಣ್ತಪ್ಪಿಸಿ ಆಟೊ ಓಡಿಸ ಬೇಕಾದ ಪರಿಸ್ಥಿತಿ ಇದೆ’ ಎಂದು ಗ್ರಾಹಕರೊಬ್ಬರು ತಿಳಿಸಿದರು.

ವಿಮೆ ಪರಿಹಾರ ಸಿಗದು: ಅನುಮತಿ ವ್ಯಾಪ್ತಿಯನ್ನು ಮೀರಿ 8 ಕಿ.ಮೀ ವ್ಯಾಪ್ತಿಯಿಂದ ಹೊರಗೆ ಹೋದ ಆಟೊಗಳು ಅಪಘಾತಕ್ಕೀಡಾದರೆ ವಿಮೆ ಪರಿಹಾರ ದೊರೆಯುತ್ತಿಲ್ಲ. ಆಟೊ ಚಾಲಕರು ಗ್ಯಾಸ್‌ ಹಾಕಿಸಲು ನಗರಕ್ಕೆ ಬಂದಾಗ ಸಣ್ಣ, ಪುಟ್ಟ ಅಪಘಾತಗಳು ನಡೆದು ಪ್ರಯಾಣಿಕರಿಗೆ, ಚಾಲಕರಿಗೆ ಗಾಯಗಳಾಗಿವೆ. ಆಟೊಗಳಿಗೆ ಹಾನಿ ಯುಂಟಾಗಿದೆ. ಪೊಲೀಸ್‌ ಠಾಣೆಗಳಲ್ಲಿ ದಾಖಲಾಗುವ ಪ್ರಕರಣದಲ್ಲಿ ಅನುಮತಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ಮಾಹಿತಿ ದಾಖಲಾಗುತ್ತಿರುವ ಕಾರಣ ಪರಿಹಾರ ದೊರೆಯುತ್ತಿಲ್ಲ.

‘ಆಟೊ ಚಾಲಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕೇವಲ 8 ಕಿ.ಮೀ ವ್ಯಾಪ್ತಿ ನಿಗದಿ ಮಾಡಿ ಬಡ ಆಟೊ ಚಾಲಕರು ಜೀವನ ನಡೆಸದಂತೆ ಮಾಡಿದ್ದಾರೆ. ಸಣ್ಣ ಹಳ್ಳಿಯಂತಿರುವ ಮಂಡ್ಯದಲ್ಲಿ 8 ಕಿ.ಮೀ ವ್ಯಾಪ್ತಿಯಲ್ಲೇ ಆಟೊ ಓಡಿಸುವುದು ಹೇಗೆ? ಪೊಲೀಸರು ಕೂಡ ನಮ್ಮ ಮೇಲೆ ಕರುಣೆ ತೋರಿಸುತ್ತಿಲ್ಲ. ಇದನ್ನೇ ನೆಪವಾಗಿರಿಸಿಕೊಂಡು ದಂಡ ಹಾಕುತ್ತಾರೆ’ ಎಂದು ಆಟೊ ಚಾಲಕರು ನೋವು ವ್ಯಕ್ತಪಡಿಸಿದರು.

ಈಗಿರುವ ವ್ಯಾಪ್ತಿ ಅನುಮತಿಯನ್ನು ರದ್ದುಗೊಳಿಸಿ ಜಿಲ್ಲೆಯಾದ್ಯಂತ ಆಟೊ ಓಡಿಸಲು ಅನುಮತಿ ನೀಡಬೇಕು ಎಂದು ಆಟೊ ಚಾಲಕರು, ಮಾಲೀಕರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ, ಅವರ ಒತ್ತಾಯ ಅರಣ್ಯ ರೋದನವಾಗಿದೆ.

‘ಆರ್‌ಟಿಒ, ಜಿಲ್ಲಾಧಿಕಾರಿಗಳಿಗೆ ಎಷ್ಟು ಸಲ ಮನವಿ ಕೊಟ್ಟರೂ ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ. ಕೋವಿಡ್‌ ಪರಿಸ್ಥಿತಿ ನಂತರ ನಮ್ಮ ಬದುಕು ದುಸ್ತರವಾಗಿದೆ. ಈಗಲಾದರೂ ಜಿಲ್ಲಾ ವ್ಯಾಪ್ತಿಯಲ್ಲಿ ಆಟೊ ಓಡಿಸುವಂಥ ಅನುಮತಿ ನೀಡಬೇಕು’ ಎಂದು ಆಟೊ ಚಾಲರ ಸಂಘದ ಮುಖಂಡರಾದ ರಾಮಕೃಷ್ಣ ಒತ್ತಾಯಿಸಿದರು.

ರಸ್ತೆಯಲ್ಲಿ ಮಂಡಿಯುದ್ದ ಗುಂಡಿ

ಮಂಡ್ಯ ನಗರದಾದ್ಯಂತ ಮುಖ್ಯರಸ್ತೆ, ಸಣ್ಣ ಪುಟ್ಟ ರಸ್ತೆಗಳಲ್ಲಿರುವ ಮಂಡಿಯುದ್ದ ಗುಂಡಿಗಳು ಆಟೊ ಚಾಲಕರನ್ನು ಕಂಗೆಡಿಸಿವೆ.

ಮಳೆ ಬಂದರೆ ರಸ್ತೆಗಳು ಕಾಲುವೆಗಳಂತೆ ತುಂಬಿ ಹರಿಯುತ್ತವೆ. ಈ ಸಂದರ್ಭದಲ್ಲಿ ರಸ್ತೆಗಳಿದ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಆಟೊ ಚಾಲಕರಿಗೆ ರಸ್ತೆಗಳ ದುಸ್ಥಿತಿ ಒಂದು ರೀತಿಯ ದುಸ್ವಪ್ನದಂತೆ ಕಾಡುತ್ತಿವೆ. ಆಟೊಗಳಿಗೆ ಹಾನಿಯಾಗುತ್ತಿದ್ದು, ಸಾವಿರಾರು ರೂಪಾಯಿ ವೆಚ್ಚವಾಗುತ್ತಿದೆ. ಖರ್ಚು ನಿಭಾಯಿಸಲು ಸಾಧ್ಯವಾಗದ ಚಾಲಕರು ಆಟೊ ಓಡಿಸುವ ವೃತ್ತಿಯನ್ನೇ ಬಿಟ್ಟು ಅನ್ಯ ಉದ್ಯೋಗ ನೋಡಿಕೊಳ್ಳುತ್ತಿದ್ದಾರೆ.

‘ಕೋವಿಡ್‌ನಿಂದಾಗಿ ನಷ್ಟ ಹೊಂದಿದ್ದೇವೆ. ಈಗಲೂ ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಕೋವಿಡ್‌ ಸೃಷ್ಟಿಸಿದ ಸಂಕಷ್ಟದಿಂದ ನೂರಾರು ಜನ ಚಾಲಕರು ಆಟೊ ಓಡಿಸುವುದನ್ನೇ ಬಿಟ್ಟು ಹಳ್ಳಿಗೆ
ತೆರಳಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ರಸ್ತೆಗಳ ದುಸ್ಥಿತಿಯಿಂದ ಆಟೊಗಳನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಸೊಂಟ
ನೋವು ನಮ್ಮನ್ನು ಕಾಡುತ್ತಿದೆ. ಆರೋಗ್ಯ ಹಾಳಾಗುತ್ತಿದೆ’ ಎಂದು ಚಾಲಕರು ಹೇಳುತ್ತಾರೆ.

ಗೂಡ್ಸ್‌ ಗಾಡಿ: ವಾರಕ್ಕೊಂದು ಬಾಡಿಗೆ

ಒಂದೆಡೆ ಆಟೊ ಚಾಲರು ಹಲವು ರೀತಿಯ ಸಮಸ್ಯೆ ಅನುಭವಿಸುತ್ತಿದ್ದರೆ ಸರಕು ಸಾಗಿಸುವ ಆಪೆ ಆಟೊಗಳು, ಕ್ಯಾಂಟರ್‌ ಚಾಲಕರು ಇನ್ನೊಂದು ರೀತಿಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಡೀಸೆಲ್‌ ದರ ಏರಿಕೆಯಾಗಿದ್ದರೂ ಅವರು ಸಾಗಣೆ ದರ ಏರಿಕೆ ಮಾಡಿಲ್ಲ.

ಸಿಲ್ವರ್‌ ಜ್ಯೂಬಿಲಿ ಉದ್ಯಾನದ ಪಕ್ಕದ ಜಾಗದಲ್ಲಿ 40ಕ್ಕೂ ಹೆಚ್ಚು ಗೂಡ್ಸ್‌ ಗಾಡಿಗಳು ನಿಂತಿರುತ್ತವೆ. ಗ್ರಾಹಕರು ಯಾರೇ ಬಂದರೂ ಚಾಲಕರು ಅವರ ಮೇಲೆ ಮುಗಿ ಬೀಳುತ್ತಾರೆ. ಒಬ್ಬರು ಒಂದು ದರ ಹೇಳಿದರೆ ಅದಕ್ಕಿಂತ ಕಡಿಮೆ ದರ ಹೇಳಲು ಸ್ಪರ್ಧೆ ನಡೆಸುತ್ತಾರೆ. ಚಾಲಕರ ನಡುವೆ ಇರುವ ಸ್ಪರ್ಧೆಯಿಂದಾಗಿ ಅವರು ನಿಗದಿತ ದರ ಪಡೆಯಲು ಸಾಧ್ಯವಾಗುತ್ತಿಲ್ಲ. ಅವರ ಸ್ಪರ್ಧೆಯೇ ಅವರಿಗೆ ಮುಳುವಾಗಿ ಪರಿಣಮಿಸಿದೆ.

‘ವಾಹನಗಳನ್ನು ಸುಮ್ಮನೇ ನಿಲ್ಲಿಸಿಕೊಂಡಿದ್ದೇವೆ. ಪ್ರತಿನಿತ್ಯ ಬಾಡಿಗೆ ಸಿಗುವುದಿಲ್ಲ. ನಷ್ಟದ ಮೇಲೆ ನಷ್ಟವಾಗುತ್ತಿದೆ. ಕೋವಿಡ್‌ ಪರಿಸ್ಥಿತಿ ಬಂದ ಮೇಲೆ ಮನೆ ಖಾಲಿಮಾಡುವರು, ವಸ್ತುಗಳನ್ನು ಸಾಗಿಸುವವರು ಇಲ್ಲವಾಗಿದ್ದಾರೆ. ಹೀಗಾಗಿ ಜೀವನ ನಡೆಸುವುದೇ ಕಷ್ಟವಾಗಿದೆ. ಕೆಲವು ಸಂದರ್ಭದಲ್ಲಿ ವಾರಕ್ಕೆ ಒಂದೇ ಒಂದು ಬಾಡಿಗೆ ಸಿಕ್ಕಿದೆ’ ಎಂದು ಚಾಲಕ ಶಂಕರ್‌ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT