ಸೋಮವಾರ, ನವೆಂಬರ್ 23, 2020
22 °C
ಕನ್ನಡಪರ ಚಳವಳಿಗಳಲ್ಲಿ ಬಿ.ಶಂಕರಬಾಬು ಭಾಗಿ

ಮಾತೃ ಭಾಷೆ ಮರಾಠಿಯಾದರೂ ಕನ್ನಡ ಕೆಲಸಕ್ಕೆ ಇವರು ಸದಾ ಮುಂದು

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ, ಸಣ್ಣದೊಂದು ಬೀಡಾ ಅಂಗಡಿ ನಡೆಸುವ ಬಿ.ಶಂಕರಬಾಬು ಅವರ ಮಾತೃಭಾಷೆ ಮರಾಠಿ. ಆದರೆ, ಅವರ ಕನ್ನಡ ಪ್ರೇಮಕ್ಕೆ ಎಣೆಯಿಲ್ಲ.

ಹತ್ತು ವರ್ಷಗಳಿಂದ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕನ್ನಡ ಪ್ರೀತಿಯನ್ನು ಮೆರೆಯುತ್ತಿರುವ ಶಂಕರಬಾಬು, ಪ್ರತಿ ವರ್ಷ ನವೆಂಬರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾ ಬಂದಿದ್ದಾರೆ. ಮಂಡ್ಯ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದು, ತಾಲ್ಲೂಕಿನಾದ್ಯಂತ ರಥಯಾತ್ರೆ ಹಮ್ಮಿಕೊಂಡು ಕನ್ನಡ ಮತ್ತು ಕರ್ನಾಟಕದ ಹಿರಿಮೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ.

ಕನ್ನಡ ಶಾಲೆಗಳಲ್ಲಿ ಓದುವ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಬಟ್ಟೆ, ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸುತ್ತಾರೆ. ತೋರಿಕೆಗಾಗಿ ಕನ್ನಡಾಭಿಮಾನ ಪ್ರದರ್ಶಿಸದೇ, ತಮ್ಮ ಮಕ್ಕಳನ್ನು ಸ್ವಗ್ರಾಮದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ನಡೆದಿರುವ ಕಾವೇರಿ ಚಳವಳಿಗಳಲ್ಲಿ ಹಲವು ಬಾರಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ರೈತರ ಜತೆಗೂಡಿ ಕಾವೇರಿ ನೀರಿಗಾಗಿ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ಕೇಂದ್ರ ಸರ್ಕಾರದ ಕಚೇರಿಗಳು, ಪ್ರವಾಸಿ ತಾಣಗಳಲ್ಲಿರುವ ರೆಸಾರ್ಟ್‌ಗಳು, ಹೋಟೆಲ್‌ಗಳ ಮುಂದೆ ಕನ್ನಡ ಭಾಷೆಯಲ್ಲಿ ಫಲಕಗಳನ್ನು ಹಾಕುವಂತೆ ಚಳವಳಿಯನ್ನೂ ಮಾಡಿದ್ದಾರೆ.

ವರನಟ ಡಾ.ರಾಜಕುಮಾರ್‌, ಶಂಕರನಾಗ್‌, ವಿಷ್ಣುವರ್ಧನ್‌, ಅಂಬರೀಷ್‌ ಅವರ ಹೆಸರಿನಲ್ಲಿ ಕಾರ್ಯ ಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.

‘ನಮ್ಮ ತಂದೆ ಬಸವರಾಜು ಕನ್ನಡ ಹೋರಾಟಗಾರರು. ಕರ್ನಾಟಕ ರಕ್ಷಣಾ ವೇದಿಕೆ ಸ್ಥಾಪನೆಯಾದಾಗ ಜಾಣಗೆರೆ ವೆಂಕಟರಾಮಯ್ಯ, ನಾರಾಯಣಗೌಡ ಅವರಿಗೆ ಹತ್ತಿರವಾಗಿದ್ದು, ಚಳವಳಿ ಮಾಡಿದ್ದರು. ಕನ್ನಡ ನಾಡು ಮತ್ತು ಭಾಷೆ ಬಗೆಗೆ ಅವರಿಗಿದ್ದ ಪ್ರೀತಿ, ಅಭಿಮಾನ ಸಹಜವಾಗಿ ನನಗೂ ಬಂದಿದೆ. ಕನ್ನಡ ಮತ್ತು ಕರ್ನಾಟಕದ ಗೌರವಕ್ಕೆ ಧಕ್ಕೆ ಬಂದರೆ ಸಿಟ್ಟು ಬರುತ್ತದೆ. ಮನೆ ಮಂದಿಯೆಲ್ಲ ಕನ್ನಡದಲ್ಲೇ ಮಾತನಾಡುತ್ತೇವೆ’ ಎಂದು ಶಂಕರಬಾಬು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು