ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೆಮನೆ ; ಕಠಿಣ ನಿಯಮ: ‘ಆತ್ಮನಿರ್ಭರ’ ಜಾರಿಗೆ ಅಡ್ಡಿ

ಸಿಬಿಲ್‌ ಸ್ಕೋರ್‌ ನೆಪ, ಆಲೆಮನೆ ಮಾಲೀಕರು ಅರ್ಜಿಗಳು ತಿರಸ್ಕೃತ, ಆಸ್ತಿ ಭದ್ರತೆಗೆ ಒತ್ತಡ
Last Updated 29 ಜುಲೈ 2021, 15:16 IST
ಅಕ್ಷರ ಗಾತ್ರ

ಮಂಡ್ಯ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಆತ್ಮನಿರ್ಭರ ಭಾರತ’ ಯೋಜನೆ ಜಾರಿಯಾಗಿ ವರ್ಷ ಕಳೆದರೂ ಇಲ್ಲಿಯವರೆಗೆ ಜಿಲ್ಲೆಯ ಯಾವುದೇ ಆಲೆಮನೆ ಪುನಶ್ಚೇತನ ಕಂಡಿಲ್ಲ. ಬ್ಯಾಂಕ್‌ಗಳ ಕಠಿಣ ನಿಯಮಗಳಿಂದಾಗಿ ಆಲೆಮನೆ ಮಾಲೀಕರು ಸಲ್ಲಿಸುತ್ತಿರುವ ಸಾಲದ ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ.

ಆತ್ಮನಿರ್ಭರ ಯೋಜನೆ ವ್ಯಾಪ್ತಿಗೆ ಮಂಡ್ಯ ಜಿಲ್ಲೆಯ ‘ಬೆಲ್ಲ’ ಆಯ್ಕೆಯಾಗಿದ್ದು ಆಲೆಮನೆಗಳಿಗೆ ಪುನಶ್ಚೇತನ ನೀಡುವು ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಹೇರಳವಾಗಿ ಉತ್ಪಾದನೆಯಾಗುವ ಬೆಲ್ಲಕ್ಕೆ ಉತ್ತಮ ಬ್ರ್ಯಾಂಡ್‌ ರೂಪ, ಮಾರುಕಟ್ಟೆ ಕಲ್ಪಿಸುವುದು ಯೋಜನೆಯ ಉದ್ದೇಶ. ರಾಸಾಯನಿಕ ಮುಕ್ತ ಬೆಲ್ಲ ಉತ್ಪಾದನೆ ಮಾಡಿ ಹೊರ ರಾಜ್ಯ, ಹೊರ ದೇಶಗಳಿಗೆ ಉತ್ತಮ ಗುಣಮಟ್ಟದ ಬೆಲ್ಲ ಕಳುಹಿಸುವ ಗುರಿ ಇದೆ.

ಈ ಬಗ್ಗೆ ರೈತರು ಹಾಗೂ ಆಲೆಮನೆ ಮಾಲೀಕರಲ್ಲಿ ಈಗಾಗಲೇ ಅರಿವು ಮೂಡಿಸಲಾಗಿದೆ. ಯೋಜನೆ ಅಡಿ ಕಡಿಮೆ ಬಡ್ಡಿದರದಲ್ಲಿ ₹ 30 ಲಕ್ಷದವರೆಗೆ ಸಾಲ ದೊರೆಯುತ್ತದೆ. ₹ 10 ಲಕ್ಷ ಮೌಲ್ಯದ ಆಲೆಮನೆ ಉಪಕರಣಗಳಿಗೆ ಸಹಾಯಧನ ದೊರೆಯುತ್ತದೆ. ಈಗಾಗಲೇ 50ಕ್ಕೂ ಹೆಚ್ಚು ಆಲೆಮನೆ ಮಾಲೀಕರು ಯೋಜನೆ ಅಡಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಬ್ಯಾಂಕ್‌ಗಳ ಕಠಿಣ ನಿಯಮಗಳಿಂದಾಗಿ ಯಾವುದೇ ಆಲೆಮನೆ ಮಾಲೀಕ ಸಾಲ ಪಡೆಯಲು ಸಾಧ್ಯವಾಗಿಲ್ಲ.

ಸಿಬಿಲ್‌ ನೆಪ: ಸಾಲ ನೀಡುವಾಗ ಬ್ಯಾಂಕ್‌ಗಳು ಪರಿಗಣಿಸುವ ಸಿಬಿಲ್‌ (ಕ್ರೆಡಿಟ್‌ ಇನ್ಫರ್ಮೇಷನ್‌ ಬ್ಯೂರೊ ಇಂಡಿಯಾ ಲಿಮಿಟೆಡ್‌) ಸ್ಕೋರ್‌ನಲ್ಲಿ ಆಲೆಮನೆ ಮಾಲೀಕರ ಸಾಲದ ಅರ್ಜಿಗಳು ಅರ್ಹತೆ ಪಡೆಯುತ್ತಿಲ್ಲ. ಇದನ್ನೇ ನೆಪ ಮಾಡಿಕೊಂಡಿರುವ ಬ್ಯಾಂಕ್‌ಗಳು ಅರ್ಜಿಯನ್ನು ತಿರಸ್ಕಾರ ಮಾಡುತ್ತಿವೆ.

ಪ್ರಸ್ತುತ ಸನ್ನಿವೇಶದಲ್ಲಿ ಆಲೆಮನೆ ಮಾಲೀಕರು ಸಾಲದ ಸುಳಿಯಲ್ಲಿದ್ದು ಬ್ಯಾಂಕ್‌ಗಳ ಕಠಿಣ ನಿಯಮ ಪಾಲನೆ ಕಷ್ಟವಾಗುತ್ತದೆ. ಹೀಗಾಗಿ ನಿಯಮಗಳನ್ನು ಸರಳೀಕೃತಗೊಳಿಸಬೇಕು ಎಂದು ಆಲೆಮನೆ ಮಾಲೀಕರು ಒತ್ತಾಯ ಮಾಡಿದ್ದಾರೆ.

‘ಸಿಬಿಲ್‌ ಸ್ಕೋರ್‌ ಮಾನದಂಡ ಅನುಸರಿಸಿದರೆ ಮಂಡ್ಯ ಜಿಲ್ಲೆಯ ಯಾವುದೇ ಆಲೆಮನೆ ಮಾಲೀಕ ಸಾಲ ಪಡೆಯಲು ಸಾಧ್ಯವಿಲ್ಲ. ಹೀಗಿರುವಾಗ ಯೋಜನೆ ಜಾರಿ ಹೇಗೆ ಸಾಧ್ಯ? ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಬ್ಯಾಂಕ್‌ಗಳ ನಿಯಮಗಳನ್ನು ಸರಳೀಕೃತಗೊಳಿಸಲು ನಿರ್ದೇಶನ ನೀಡಬೇಕು’ ಎಂದು ಆಲೆಮನೆ ಮಾಲೀಕರ ಸಂಘದ ಅಧ್ಯಕ್ಷ ಸೋಮಶಂಕರೇಗೌಡ ಒತ್ತಾಯಿಸಿದರು.

‘ನಾವು ಹಲವರು ರೈತರಿಗೆ, ಆಲೆಮನೆ ಮಾಲೀಕರಿಗೆ ಜಾಮೀನು ಹಾಕಿದ್ದೇವೆ. ಸಾಲ ಪಡೆದವರು ಮರುಪಾವತಿ ಮಾಡದಿದ್ದರೆ ನಮ್ಮ ಸಿಬಿಲ್‌ ಸ್ಕೋರ್‌ನಲ್ಲಿ ತೊಂದರೆಯಾಗುತ್ತಿದೆ. ಆತ್ಮನಿರ್ಭರ ಯೋಜನೆ ಜಾರಿಗೆ ಅಡ್ಡಿಯಾಗಿರುವ ಕಠಿಣ ನಿಮಯ ತೆಗೆದುಹಾಕಬೇಕು’ ಎಂದು ಗಾಣದ ಮಾಲೀಕ ನಾಗರಾಜು ಆಗ್ರಹಿಸಿದರು.

ಭದ್ರತೆಗೆ ಒತ್ತಡ ಏಕೆ?: ಸಿಬಿಲ್‌ ನಿಯಮ ಮಾತ್ರವಲ್ಲದೇ ಭದ್ರತೆ ವಿಚಾರದಲ್ಲೂ ಬ್ಯಾಂಕ್‌ಗಳು ಕಠಿಣ ನಿಲುವು ತಾಳುತ್ತಿವೆ. ಯೋಜನೆಯ ನಿಯಮಾನುಸಾರ ಆಲೆಮನೆ ಜಾಗ, ಯಂತ್ರೋಪಕರಣ ಆಧಾರದ ಮೇಲೆ ಸಾಲ ನೀಡಬಹುದು. ಆದರೆ ಬ್ಯಾಂಕ್‌ ಅಧಿಕಾರಿಗಳು ಇತರ ಆಸ್ತಿ, ನಿವೇಶನ, ಮನೆಯನ್ನು ಭದ್ರತೆಯಾಗಿ ಇಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಆಲೆಮನೆ ಮಾಲೀಕರು ಆರೋಪಿಸುತ್ತಾರೆ.

‘ಬ್ಯಾಂಕ್‌ಗಳಲ್ಲಿ ನಮ್ಮ ಅರ್ಜಿಗಳು ಧೂಳು ಹಿಡಿಯುತ್ತಿರುವ ಕಾರಣ ಆತ್ಮನಿರ್ಭರ ಯೋಜನೆ ಜಾರಿ ಅಸಾಧ್ಯವಾಗಿದೆ. ನಿಯಮ ಸರಳಗೊಳಿಸದಿದ್ದರೆ ಇಂತಹ ಯೋಜನೆಗಳಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಆಲೆಮನೆ ಮಾಲೀಕರೊಬ್ಬರು ಬೇಸರ ವ್ಯಕ್ತಪಡಿಸಿದರು.

******

ದಾಖಲಾತಿ ಒದಗಿಸುವುದೇ ಕಷ್ಟ

ಆತ್ಮನಿರ್ಭರ ಭಾರತ ಯೋಜನ ಅಡಿ ಅರ್ಜಿ ಸಲ್ಲಿಸಲು ಆಲಮನೆ ಮಾಲೀಕರು ಪರದಾಡುತ್ತಿದ್ದಾರೆ. ಆನ್‌ಲೈನ್‌ನಲ್ಲಿ 20 ಪುಟದಷ್ಟು ಅರ್ಜಿ ಇದ್ದು ನೂರಾರು ದಾಖಲಾತಿ ಒದಗಿಸಬೇಕಾಗಿದೆ. ಎಲ್ಲಾ ಪ್ರಮಾಣ ಪತ್ರ ಒದಗಿಸುವಷ್ಟರಲ್ಲಿ ಹೈರಾಗಾಗುತ್ತಿದ್ದಾರೆ. ದಾಖಲಾತಿ ಒದಗಿಸಿದರೂ ಸಾಲ ಸಿಗುವುದು ಅನುಮಾನ, ಹೀಗಾಗಿ ಆಲೆಮನೆ ಮಾಲೀಕರು ಯೋಜನೆ ಕುರಿತು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

****

ಬ್ಯಾಂಕ್‌ ವಹಿವಾಟಿನಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಆದರೆ, ಯೋಜನೆ ಜಾರಿಗೆ ಮಹತ್ವ ನೀಡುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗುವುದು

– ಎಸ್‌.ಅಶ್ವತಿ, ಜಿಲ್ಲಾಧಿಕಾರಿ, ಆತ್ಮನಿರ್ಭರ ಯೋಜನೆ ಜಾರಿ ಸಮಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT