ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈವಿಕ ಇಂಧನ ಭವಿಷ್ಯದಲ್ಲಿ ಅನಿವಾರ್ಯ: ತಳವಾರ

ಪಿಇಎಸ್ ಎಂಜಿನಿಯರಿಂಗ್‌ ಕಾಲೇಜಿನ ಇಂಧನ ಘಟಕ– ಪದಾರ್ಥಗಳ ಮಳಿಗೆ ಉದ್ಘಾಟನೆ
Last Updated 10 ಏಪ್ರಿಲ್ 2021, 14:20 IST
ಅಕ್ಷರ ಗಾತ್ರ

ಮಂಡ್ಯ: ‘ಪೆಟ್ರೋಲ್‌, ಡೀಸೆಲ್‌ ದರ ಗಗನಕ್ಕೇರಿದ್ದು ಬದಲಿ ಇಂಧನದತ್ತ ಗಮನ ಹರಿಸುವುದು ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ಜೈವಿಕ ಇಂಧನ ಮುಂದಿನ ಪೀಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್‌.ಯು.ತಳವಾರ ಹೇಳಿದರು.

ನಗರದ ಪಿಇಎಸ್ ಎಂಜಿನಿಯರಿಂಗ್‌ ಕಾಲೇಜಿನ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ವತಿಯಿಂದ ರೂಪಿಸಲಾಗಿರುವ ಜೈವಿಕ ಇಂಧನ ಘಟಕ ಮತ್ತು ಜೈವಿಕ ಪದಾರ್ಥಗಳ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.

‘ಅತ್ಯಂಕ ಕಡಿಮೆ ಖರ್ಚಿನಲ್ಲಿ ಇಂಧನದ ಬೇಡಿಕೆ ಪೂರೈಸಬಲ್ಲ ಬದಲಿ ಇಂಧನದ ಹುಡುಕಾಟ ಅತ್ಯಾವಶ್ಯಕವಾಗಿದೆ. ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನ ವತಿಯಿಂದ ಜೈವಿಕ ಇಂಧನ ಘಟಕ ಸ್ಥಾಪಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ದೇಶ–ವಿದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಪಿಇಟಿ ಸಂಸ್ಥೆಯಿಂದ ಇನ್ನಷ್ಟು ಉತ್ತಮ ಕೆಲಸಗಳು ಆಗಬೇಕು’ ಎಂದರು.

‘ಜೈವಿಕ ಇಂಧನ ಸಂಶೋಧನಾ ಕೇಂದ್ರದಲ್ಲಿ ಇಂಧನ ಮಾತ್ರವಲ್ಲದೇ ಅದರ ಉಪ ಉತ್ಪನ್ನಗಳನ್ನೂ ತಯಾರಿಸಲಾಗಿದೆ. ಜನರು ಇದರ ಹೆಚ್ಚಿನ ಮಾಹಿತಿ ಪಡೆದು ಬಳಕೆ ಮಾಡಲು ಮನಸ್ಸು ಮಾಡಬೇಕು. ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಗೆ ಪೂರಕವಾಗಿ ಜೈವಿಕ ಇಂಧನ ಅಭಿಯಾನ ನಡೆಸಬಹುದು’ ಎಂದರು.

‘ಸಂಸ್ಥೆಯ ಹಿರಿಯರಾದ ಡಾ.ಎಚ್.ಡಿ.ಚೌಡಯ್ಯ ಅವರು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಸಂಸ್ಥೆಯ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅವರು ಇನ್ನೂ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುವ ಹಾದಿಯಲ್ಲಿದ್ದಾರೆ. ದೇಶದಲ್ಲಿ ಮುಂದೆ ಜೈವಿಕ ಇಂಧನಕ್ಕೆ ಹೆಚ್ಚಿನ ಆದ್ಯತೆ ದೊರಕಲಿದೆ. ಪಿಇಎಸ್ ಸಂಸ್ಥೆ ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲಿದೆ’ ಎಂದರು.

‘ಬಾಗಲಕೋಟೆ ಎಂಜಿನಿಯರ್ ಕಾಲೇಜಿನಲ್ಲಿ ಜೈವಿಕ ಇಂಧನ ಘಟಕ ಆರಂಭಿಸಿದ್ದು, ಬೇರೆ ಸಂಸ್ಥೆಗಳು ಸಹ ಈ ನಿಟ್ಟಿನಲ್ಲಿ ಮುಂದಾಗಬೇಕಿದೆ. ಜೈವಿಕ ಡೀಸೆಲ್ ಬಳಕೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸಬೇಕಿದೆ. ಸರ್ಕಾರ ಕೂಡ ಇಂತಹ ಸಂಸ್ಥೆಗಳಿಗೆ ನೆರವು ನೀಡಬೇಕು. ಇದರಿಂದ ತೈಲ ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರಬಹುದು’ ಎಂದರು.

ಪಿಇಟಿ ಮಾಜಿ ಅಧ್ಯಕ್ಷ ಡಾ.ಎಚ್.ಡಿ.ಚೌಡಯ್ಯ, ಉಪಾಧ್ಯಕ್ಷ ಬಸವಯ್ಯ, ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ನಿರ್ದೇಶಕ ಡಾ.ರಾಮಲಿಂಗಯ್ಯ, ಪ್ರಾಂಶುಪಾಲ ಡಾ.ಎಚ್.ವಿ.ರವೀಂದ್ರ, ಡಾ.ಎಲ್.ಪ್ರಸನ್ನಕುಮಾರ್, ಡಾ.ರೂಪೇಶ್, ಡಾ.ಮುರಳಿಕೃಷ್ಣ, ಡಾ.ದಿನೇಶ್‌ ಪ್ರಭು, ಡಾ.ಬಿ.ಎಸ್.ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT