ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿ, ಮಾಜಿ ಶಾಸಕರ ವಿರುದ್ಧ ಸೋಮಶೇಖರ್ ವಾಗ್ದಾಳಿ

ಪೂರಿಗಾಲಿ ಏತ ನೀರಾವರಿ ಯೋಜನೆ ಬಗ್ಗೆ ವಿವರ ನೀಡಿಕೆ
Last Updated 4 ಸೆಪ್ಟೆಂಬರ್ 2020, 2:12 IST
ಅಕ್ಷರ ಗಾತ್ರ

ಮಳವಳ್ಳಿ: ‘ನನ್ನ ಅವಧಿಯಲ್ಲಿ ಮಂಜೂರು ಆಗಿರುವ ನೀರಾವರಿ ಯೋಜನೆಗಳಲ್ಲಿ ಹೆಸರು ಗಳಿಸಲು ಹಾಲಿ ಮತ್ತು ಮಾಜಿ ಶಾಸಕರ ಪೈಪೋಟಿ ನಡೆದಿರುವುದು ವಿಪರ್ಯಾಸ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಸೋಮಶೇಖರ್ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2004ಕ್ಕಿಂತ ಮುಂಚೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಹಲವಾರು ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದೆ. 2004ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದ ಡಾ.ಕೆ.ಅನ್ನದಾನಿ ಆ ಯೋಜನೆಗಳನ್ನು ಪೂರ್ಣಗೊಳಿಸಲಿಲ್ಲ. ನನ್ನ ಅವಧಿಯಲ್ಲಿಯೇ ಪೂರಿಗಾಲಿ ಏತ ನೀರಾವರಿ ಯೋಜನೆಗೆ ನೀರಿನ ಮೂಲ ಹುಡುಕಿ ನೀರಾವರಿ ತಜ್ಞರೊಂದಿಗೆ ಚರ್ಚಿಸಿ ರೂಪುರೇಷ ಸಿದ್ಧಪಡಿಸಲಾಗಿತು. ₹ 30 ಕೋಟಿ ವೆಚ್ಚದಲ್ಲಿ ಆಡಳಿತ್ಮಾತಕ ಅನುಮೋದನೆ ಪಡೆದು ಟೆಂಡರ್ ಸಹ ಆಗಿತ್ತು. ಅದನ್ನೇ ಪಿ.ಎಂ.ನರೇಂದ್ರಸ್ವಾಮಿ ಅವರು ಗೆದ್ದ ಮೇಲೆ ಹನಿ ಮತ್ತು ತುಂತುರು ನೀರಾವರಿಗೆ ಯೋಜನೆಗೆ ಬಳಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ನಾನು ಶಾಸಕನಾಗಿದ್ದ ವೇಳೆಯಲ್ಲಿ ಕ್ಷೇತ್ರದಲ್ಲಿ ನಿವೇಶನ ರಹಿತರನ್ನು ಗುರುತಿಸಿ 25 ಸಾವಿರ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿತ್ತು. ಹಾಲಿ ಮತ್ತು ಮಾಜಿ ಶಾಸಕರು ಕಳೆದ 16 ವರ್ಷಗಳಿಂದ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಅನುದಾನ ನೀಡಿಲ್ಲ’ಎಂದರು.

‘2003-04ರಲ್ಲಿ ಪ್ರಧಾನ ಮಂತ್ರಿಗಳ ಗ್ರಾಮೋದಯ ಯೋಜನೆಯಡಿ ಅಂತರ್ಜಲ ಅಭಿವೃದ್ಧಿ ₹ 62 ಲಕ್ಷ ವೆಚ್ಚದ ಕಾಮಗಾರಿ, ಇಗ್ಗಲೂರು ಡ್ಯಾಂ ನಿಂದ ನೀರು ತಂದು ಶುದ್ಧ ಕುಡಿಯುವ ನೀರು ಪೂರೈಕೆ, ನೆಟ್ಕಲ್ ಜಲಾಶಯದಿಂದ ನೀರು ಶುದ್ಧೀಕರಿಸಿ ಒದಗಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ತಂದಿದ್ದೆ. ಆದರೆ, ನನ್ನ ಬಹುಪಾಲು ಯೋಜನೆಗಳು ನನೆಗುದಿಗೆ ಬೀಳಲು ಶಾಸಕ ಡಾ.ಕೆ.ಅನ್ನದಾನಿ ಅವರೇ ಕಾರಣ’ ಎಂದು ದೂರಿದರು.

ಅನ್ನದಾನಿ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಡಾ.ಕೆ.ಅನ್ನದಾನಿ, ‘ನಾನು ಎಲ್ಲೂ ಬೇರೆಯವರು ತಂದ ಯೋಜನೆಗಳು ನಾನು ತಂದಿದ್ದೇನೆ ಎಂದು ಹೇಳಿಲ್ಲ. ನನ್ನ ಅವಧಿಯಲ್ಲಿ ಸಾಕಷ್ಟು ನೀರಾವರಿ ಯೋಜನೆಗಳನ್ನು ಜಾರಿ ಮಾಡಿದ್ದು, ನನ್ನ ಅಭಿವೃದ್ಧಿ ಕೆಲಸಗಳನ್ನು ಸಹಿಸದೇ ಈ ರೀತಿ ಆರೋಪ ಮಾಡುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT