ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರಷ್ಟಾಚಾರದಲ್ಲಿ ಮುಳುಗಿದ ಕಾಂಗ್ರೆಸ್‌: ಆರೋಪ

ಮುಡಾ ಹಗರಣ: ಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ
Published 9 ಜುಲೈ 2024, 15:51 IST
Last Updated 9 ಜುಲೈ 2024, 15:51 IST
ಅಕ್ಷರ ಗಾತ್ರ

ಮಂಡ್ಯ: ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಹಗರಣ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಆಡಳಿತದ ಅವಧಿಯಲ್ಲಿ ನಡೆದಿರುವ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ವಿರೋಧಿಸಿ ಬಿಜೆಪಿಯಿಂದ ಜುಲೈ 12ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಅಶ್ವತ್ಥನಾರಾಯಣ ಹೇಳಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ 100 ದಿನಗಳಲ್ಲೇ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಾಂಗ್ರೆಸ್‌ ಶಾಸಕ ಬಸವರಾಜ ರಾಯರೆಡ್ಡಿ ಅವರು ‘ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲಾಗುತ್ತಿಲ್ಲ. ನಾವು ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ವಿಷಾದಿಸಿರುವುದು ಸಾಕ್ಷಿಯಾಗಿದೆ ಎಂದರು. 

ರಾಜ್ಯದಲ್ಲಿ ಮೂರು ಎಸ್‌.ಐ.ಟಿ.ಗಳನ್ನು ರಚಿಸಿದ್ದು, ಅದರಲ್ಲಿ ಪ್ರಜ್ವಲ್ ರೇವಣ್ಣ, ದರ್ಶನ್ ಪ್ರಕರಣದ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿದೆ. ಆದರೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ಮಾತ್ರ ಸರಿಯಾಗಿ ನಡೆಯುತ್ತಿಲ್ಲ. ಇದಕ್ಕೆ ಕಾರಣರಾದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರನ್ನು ಮತ್ತು ಶಾಸಕ ಬಸವರಾಜ ದದ್ದಲ್ ಅವರನ್ನು ಏಕೆ ಬಂಧಿಸಿಲ್ಲ’ ಎಂದು ಪ್ರಶ್ನಿಸಿದರು.

ಮೈಸೂರಿನ ಮುಡಾ ನಿವೇಶನಕ್ಕೆ ಸಂಬಂಧಿಸಿದಂತೆ ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಾ ರಾಜ್ಯದ ಜನರನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರಿನ ಅರ್ಕಾವತಿ ಬಡಾವಣೆಯಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಮುಚ್ಚಿಹಾಕುವಲ್ಲಿ ಯಶಸ್ವಿಯಾಗಿದ್ದರು. ಮೈಸೂರು ಮುಡಾ ನಿವೇಶನ ಹಗರಣದಲ್ಲಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಪೌರಾಡಳಿತ ಸಚಿವ ಭೈರತಿ ಸುರೇಶ್ ‘ಮುಡಾ’ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಕಡತಗಳು ನಾಪತ್ತೆಯಾಗಿವೆ. ಅವುಗಳನ್ನು ಅವರೇ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕೊಂಡೊಯ್ದಿರಬಹುದು, ಈ ಎಲ್ಲ ಭ್ರಷ್ಟಾಚಾರ ಖಂಡಿಸಿ ಜು.12ರಂದು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.

ಮುಖಂಡರಾದ ಸಿ.ಪಿ. ಉಮೇಶ್, ಸಿದ್ದರಾಮಯ್ಯ, ಎಸ್.ಪಿ. ಸ್ವಾಮಿ, ವಸಂತ್‌ಕುಮಾರ್, ಇಂದ್ರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT