ಮಂಡ್ಯ: ‘ಮೈಸೂರು ಮುಡಾ ಹಗರಣದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಅಸ್ತ್ರ ಹೂಡಿದ್ದು, ಜಾತಿಯ ಹೆಸರಲ್ಲಿ ರಾಜಕಾರಣ ಮಾಡುವುದು ಬೇಡ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದರು.
ನಗರದ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆ ಎದುರು ಗುರುವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಿರುದ್ಧ ಏಕವಚನ ಪದ ಬಳಕೆ ಹಾಗೂ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಬಾಂಗ್ಲಾ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗುತ್ತೇವೆಂಬ ಹೇಳಿಕೆ ಖಂಡಿಸಿ, ಜಿಲ್ಲಾ ಬಿಜೆಪಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
‘ಪದೇ ಪದೇ ಜಾತಿಯ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿರುವ ಸಿದ್ದರಾಮಯ್ಯ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಇಂತಹ ಜಾತಿಯವರ ಮೇಲೆ ಮಾತ್ರ ದೂರು ದಾಖಲಿಸಿ, ಇನ್ನೊಂದಿಷ್ಟು ಜಾತಿಗಳ ಮೇಲೆ ದೂರು ದಾಖಲಿಸಿಕೊಳ್ಳಬೇಡಿ ಎಂದು ಆದೇಶಿಸಲಿ. ತಪ್ಪು ಮಾಡಿ ನಾನು ಕುರುಬ ಸಮುದಾಯದವನು ಎಂದು ಬೊಬ್ಬೆ ಹೊಡೆಯುವ ಸಿದ್ದರಾಮಯ್ಯ ತಪ್ಪಿತಸ್ಥನಾಗದಿದ್ದರೆ ನಾನು ಜಾತಿವಾದಿ ಅಲ್ಲ ಎನ್ನುತ್ತಿದ್ದರು. ಈ ದ್ವಂದ್ವ ನಿಲುವನ್ನು ಬಿಡಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ದಲಿತ ಹಾಗೂ ಸಣ್ಣ ಸಮುದಾಯಕ್ಕೆ ಸೇರಿದ ರಾಜ್ಯಪಾಲರನ್ನು ಏಕವಚನದಲ್ಲಿ ಮನಬಂದಂತೆ ಕಾಂಗ್ರೆಸ್ಸಿಗರು ನಿಂದಿಸಿದ್ದಾರೆ. ಇದನ್ನು ಪ್ರಶ್ನಿಸಿದರೆ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದೆಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಹಾಗಾದರೆ ಅದೇ ಜಾತಿ ಅಸ್ತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಬಚಾವಾಗಲು ಏಕೆ ಬಳಸುತ್ತಾರೆ. ಸಿದ್ದರಾಮಯ್ಯಗೊಂದು ನ್ಯಾಯ, ರಾಜ್ಯಪಾಲರಿಗೊಂದು ನ್ಯಾಯವೇ’ ಎಂದು ಪ್ರಶ್ನಿಸಿದರು.
ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವ ರಾಜ್ಯಪಾಲರು ಮುಖ್ಯಮಂತ್ರಿಗಳನ್ನು ಬಂಧಿಸಿ ಎಂದು ಆದೇಶಿಸಿಲ್ಲ. ಬದಲಾಗಿ ಮುಡಾ ಸೈಟಿನ ಬಗ್ಗೆ ತನಿಖೆ ನಡೆಸಲಿ ಎಂದು ಆದೇಶಿಸಿದ್ದಾರೆ. ಅಷ್ಟಕ್ಕೆ ಸಿದ್ದರಾಮಯ್ಯ ಏಕೆ ಭಯ ಪಡಬೇಕು. ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಬಣ್ಣ ಬಯಲಾಗಲಿದೆ ಎಂಬ ಆತಂಕದಲ್ಲಿದ್ದಾರೆ. ತಪ್ಪು ಮಾಡಿಲ್ಲವೆಂದರೆ ರಾಜಾರೋಷವಾಗಿ ತನಿಖೆ ಎದುರಿಸಲಿ ಎಂದರು.
ಡಿಸೋಜಾ ಹೇಳಿಕೆಗೆ ಖಂಡನೆ:
ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಬಾಂಗ್ಲಾ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗುತ್ತೇವೆ ಎಂದು ಹೇಳಿದ್ದಾರೆ. ಬಾಂಗ್ಲಾ ಹಿಂಸಾಚಾರದಲ್ಲಿ ಅಸಂಖ್ಯಾತ ಹಿಂದೂಗಳನ್ನು ಹತ್ಯೆ ಮಾಡಲಾಗಿದೆ. ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರವಾಗಿದೆ. ಹಾಗಾದರೆ ಅದೇ ಮಾದರಿಯನ್ನು ಕರ್ನಾಟಕದಲ್ಲಿ ತರಲು ಡಿಸೋಜಾ ಹಾಗೂ ಕಾಂಗ್ರೆಸ್ಸಿಗರು ಹೊರಟಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ನಮ್ಮ ರಾಜ್ಯದಲ್ಲೂ ಕಾಂಗ್ರೆಸ್ಸಿಗರು ಹಿಂದೂಗಳನ್ನು ಹತ್ಯೆ ಮಾಡುತ್ತಾರೆಯೇ? ಆ ರೀತಿ ಆಗಲು ನಾವು ಬಿಡುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್, ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ಕೆ.ಎಸ್. ನಂಜುಂಡೇಗೌಡ, ಮುಖಂಡರಾದ ಅಶೋಕ್ ಜಯರಾಂ, ಎಸ್.ಪಿ.ಸ್ವಾಮಿ, ಸಿ.ಟಿ.ಮಂಜುನಾಥ್, ನಾಗಾನಂದ್ ಸೇರಿದಂತೆ ಹಲವರು ಭಾಗವಹಿಸಿದ್ದರು.
‘ವೈಟ್ನರ್ ಸತ್ಯಾಂಶ ಹೊರಗೆ ಬರಲಿ’
‘ಸಿದ್ದರಾಮಯ್ಯ ಮೈಸೂರಿನಲ್ಲಿ ಬದಲಿ ನಿವೇಶನ ಪಡೆದಿದ್ದೇನೆ ಎಂಬ ನೆಪದಲ್ಲಿ 14 ಸೈಟುಗಳನ್ನು ನುಂಗಿದ್ದಾರೆ. ಬಳಿಕ ತನ್ನ ಸಾವಿರಾರು ಬೆಂಬಲಿಗರು ನಿವೇಶನ ಪಡೆಯಲು ಅನುವು ಮಾಡಿಕೊಟ್ಟಿದ್ದಾರೆ. ಇದರ ರೂವಾರಿ ಮುಖ್ಯಮಂತ್ರಿಗಳ ಭಂಟ ಮೈಸೂರು ಮುಡಾ ಅಧ್ಯಕ್ಷ ಮರಿಗೌಡ’ ಎಂದು ಆರ್.ಅಶೋಕ್ ಆರೋಪಿಸಿದರು. ‘ಸಿಎಂ ಪತ್ನಿ ನಿವೇಶನಕ್ಕೆ ಪತ್ರ ಬರೆದಿರುವುದು ಇದೀಗ ವೈರಲ್ ಆಗಿದೆ. ಆದರೆ ಅದನ್ನು ವೈಟ್ನರ್‌ನಲ್ಲಿ ಅಳಿಸಿದ್ದಾರೆ. ಮುಖ್ಯಮಂತ್ರಿಗಳ ಪತ್ನಿ ಮೈಸೂರಿನ ವಿಜಯನಗರದಲ್ಲೇ ನನಗೆ ಸೈಟು ಬೇಕೆಂದು ಬರೆದಿರುವ ಅಂಶ ಅದಾಗಿದ್ದು ಆದರೆ ಅದನ್ನು ವೈಟ್ನರ್‌ನಲ್ಲಿ ಅಳಿಸಿ ಹಾಕಿದ್ದಾರೆ. ಇದರ ಬಗ್ಗೆ ನಿಜಾಂಶ ಹೊರಬರಬೇಕೆಂದರೆ ಸಿಬಿಐ ತನಿಖೆ ಆಗಲೇಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.