ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತೃಪಕ್ಷ: ಬೆಲೆ ಏರಿಕೆ ನಡುವೆ ಖರೀದಿ ಜೋರು

ಕೊರೊನಾ ಇದ್ರೆ ಇರ್ತದೆ ಹಬ್ಬ ಮಾಡ್ದೆ ಇರೋಕಾಯ್ತದಾ ಎನ್ನುತ್ತಲೇ ಖರೀದಿಸಿದ ಜನ
Last Updated 17 ಸೆಪ್ಟೆಂಬರ್ 2020, 7:06 IST
ಅಕ್ಷರ ಗಾತ್ರ

ಮಂಡ್ಯ: ನಗರದ ಮಾರುಕಟ್ಟೆಯಲ್ಲಿ ಮಹಾಲಯ ಅಮಾವಾಸ್ಯೆ ಅಂಗವಾಗಿ ಪಿತೃಪಕ್ಷ ಹಬ್ಬದ ಮುನ್ನಾ ದಿನ ಬುಧವಾರ ಬೆಲೆ ಏರಿಕೆ ನಡುವೆಯೂ ಖರೀದಿ ಜೋರಾಗಿ ನಡೆಯಿತು. ಜನರು ಅಂತರ ಕಾಯ್ದುಕೊಳ್ಳಲಿಲ್ಲ ಹಲವರು ಮುಖಗವಸು ಧರಿಸದೇ ಖರೀದಿಯಲ್ಲಿ ತೊಡಗಿದ್ದರು.

ಬುಧವಾರ ಮಧ್ಯಾಹ್ನದ ನಂತರ ಗ್ರಾಮಾಂತರ ಪ್ರದೇಶಗಳಿಂದ ನಗರದ ಮಾರುಕಟ್ಟೆಗೆ ಬಂದ ಜನರು ಹಬ್ಬದ ತಯಾರಿಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಮಾರುಕಟ್ಟೆ, ಪೇಟೆ ಬೀದಿಯ ರಸ್ತೆಗಳು ಜನರಿಂದ ತುಂಬಿ ತುಳುಕುತ್ತಿತ್ತು. ಖರೀದಿಗೆ ಮಾರುಕಟ್ಟೆಗೆ ಹೊಕ್ಕರೆ ಹೊರಗೆ ಬರುವುದು ಗಂಟೆಯ ಮೇಲಾಗುತ್ತಿತ್ತು. ಆ ಪರಿ ಜನರು ಕಿಕ್ಕಿರಿದು ತುಂಬಿದ್ದರು.

ನಿತ್ಯವೂ ನೂರರ ಮೇಲೆ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜನರು ಕೊರೊನಾ ಇದ್ರೆ ಇರ್ತದೆ ಹಬ್ಬ ಮಾಡ್ದೆ ಇರೋಕಾಯ್ತದಾ ಎನ್ನುತ್ತಲೇ ಬಟ್ಟೆ, ದಿನಸಿ, ತರಕಾರಿ, ಗ್ರಂಧಿಗೆ ಅಂಗಡಿಗಳು ಹಾಗೂ ತಳ್ಳುಗಾಡಿಗಳು ಮುಂದೆ ಜನರ ಸಾಲುಗಟ್ಟಿ ನಿಂತಿದ್ದರು. ಹಬ್ಬದ ಎಡೆಗೆ ಬೇಕಾದ ಬಟ್ಟೆ, ತಿನಿಸುಗಳ ತಯಾರಿಕೆ ಬೇಕಾದ ಪದಾರ್ಥಗಳು, ಹಣ್ಣು, ತರಕಾರಿಗಳ ಖರೀದಿಗೆ ಮುಗಿಬಿದ್ದರು.

ಕೋವಿಡ್‌ ನಂತರ ದಿನಗಳಲ್ಲಿ ಮಾರುಕಟ್ಟೆಯಲ್ಲಿ ತಳ್ಳುಗಾಡಿಗಳು ಇಲ್ಲದೆ ರಸ್ತೆಗಳೆಲ್ಲವೂ ಬಿಕೋ ಎನ್ನುತ್ತಿದ್ದವು. ಲಾಕ್‌ಡೌನ್‌ ಸಡಿಲಿಕೆ ನಂತರ ಅಲ್ಲೊಂದು ಇಲ್ಲೊಂದು ತಳ್ಳುಗಾಡಿಗಳು ಕಾಣ ಸಿಗುತ್ತಿದ್ದವು. ಹಬ್ಬದ ಹಿನ್ನೆಲೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ತಳ್ಳು ಗಾಡಿ ಹಾಕಿ ವ್ಯಾಪಾರದಲ್ಲಿ ನಿರತರಾಗಿದ್ದರು.

ಬೆಲೆ ಏರಿಕೆ ನಡುವೆ ಹಬ್ಬದ ತಯಾರಿ: ಹಣ್ಣು, ತರಕಾರಿ, ಹೂವು ಸೇರಿದಂತೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೇರಿತ್ತು. ಹಬ್ಬ ಬರುವುದೇ ವರ್ಷಕ್ಕೆ ಒಮ್ಮೆ ಬೆಲೆ ಏರಿಕೆ ಮುಖ ನೋಡಿ ಹಬ್ಬ ಮಾಡದೆ ಬಿಡಲಾಗುವುದೇ ಎಂದು ಭರ್ಜರಿ ತಯಾರಿ ನಡೆಸಿದರು.

ಮಂಡ್ಯ ತಾಲ್ಲೂಕಿನ ಹಲವೆಡೆ ಬುಧವಾರವೇ ಹಬ್ಬವನ್ನು ಆಚರಿಸಿದರು. ಮನೆಯ ಹಿರಿಯರಿಗೆ ಅವರಿಷ್ಟದ ಭೋಜನ ತಯಾರಿಸಿ ಎಡೆ ಇಟ್ಟು, ಪ್ರಾರ್ಥಿಸಿದರು.

ಸೋಮವಾರ ₹ 80 ಇದ್ದ ಬೀನ್ಸ್‌ ಬುಧವಾರ ₹ 100ಕ್ಕೆ ಏರಿತ್ತು. ₹ 40 ಇದ್ದ ಕ್ಯಾರೆಟ್‌ ₹ 50, ₹ 20 ಇದ್ದ ಬದನೇಕಾಯಿ ₹ 30, ₹ 30 ಇದ್ದ ಈರುಳ್ಳಿ ₹ 40, ಸೌತೇಕಾಯಿ ಒಂದಕ್ಕೆ ₹ 10, ನಿಂಬೆಹಣ್ಣು ₹ 4–5, ₹ 60 ಇದ್ದ ಹಸಿರುಮೆಣಸಿನಕಾಯಿ ₹ 80 ಆಗಿತ್ತು.

₹ 100 ಇದ್ದ ಸೇಬು ₹ 120, ಬೀಜರಹಿತ ದ್ರಾಕ್ಷಿ ₹ 160, ದಾಳಿಂಬೆ ₹ 100, ಮೂಸಂಬಿ, ಸಪೋಟ ₹ 60, ಮರಸೇಬು ₹ 80, ಸೀತಾಫಲ ₹ 40, ಏಲಕ್ಕಿಬಾಳೆಹಣ್ಣು ₹ 50–60, ಪಚ್ಚಬಾಳೆ ₹ 20 ಆಗಿತ್ತು.

ಎರಡು ದಿನದ ಹಿಂದೆ ಕಡಿಮೆ ಇದ್ದ ಹೂವಿನ ಬೆಲೆ ಹಬ್ಬದ ಹಿನ್ನೆಲೆಯಲ್ಲಿ ದಿಢೀರನೇ ಏರಿಕೆ ಕಂಡಿದೆ. ₹ 30 ಇದ್ದ ಮಾರು ಮಲ್ಲಿಗೆ ₹ 180–200, ₹ 40 ಇದ್ದ ಕನಕಾಂಬರ ₹ 120–150, ₹ 40 ಇದ್ದ ಸೇವಂತಿ ₹ 80, ₹ 20 ಇದ್ದ ಕಾಕಡ ₹ 80ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT