ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ಹೋಟೆಲ್‌ ಆಹಾರದಲ್ಲಿ ಕ್ಯಾನ್ಸರ್‌ಕಾರಕ ಅಂಶ

ಜಿಲ್ಲಾ ಸಲಹಾ ಸಮಿತಿ ಸಭೆ; ಅನಿರೀಕ್ಷಿತ ದಾಳಿ ನಡೆಸಲು ಎಡಿಸಿ ನಾಗರಾಜು ಸೂಚನೆ
Published 13 ಫೆಬ್ರುವರಿ 2024, 13:58 IST
Last Updated 13 ಫೆಬ್ರುವರಿ 2024, 13:58 IST
ಅಕ್ಷರ ಗಾತ್ರ

ಮಂಡ್ಯ: ‘ಆಹಾರ ಮಾರಾಟಗಾರರು ಲಾಭದ ದುರಾಸೆಗೆ ಒಳಗಾಗಿ ವಿಷಕಾರಿ ರುಚಿಯ ಪೌಡರ್‌, ಬಣ್ಣದ ರಾಸಾಯನಿಕ ಬಳಸುತ್ತಿರುವುದು ಕಂಡುಬಂದಿದೆ. ಈ ರಾಸಾಯನಿಕರಗಳು ಕ್ಯಾನ್ಸರ್‌ಕಾರಕವಾಗಿದ್ದು ಸಾರ್ವಜನಿಕರ ಆರೋಗ್ಯಕ್ಕೆ ಮಾರಕ ಪರಿಣಾಮ ಬೀರುತ್ತಿವೆ. ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್‌, ಕ್ಯಾಂಟೀನ್, ಬೀದಿ ಬದಿ ವ್ಯಾಪಾರಿಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಕ್ರಮ ಜರುಗಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ‘ಟೇಸ್ಟಿಂಗ್ ಪೌಡರ್, ಕಲರ್ ಏಜೆಂಟ್ಸ್ ಬಳಕೆ ವಿರುದ್ಧ ಜಾಗೃತಿ ಮೂಡಿಸುವುದು ಅತ್ಯಾವಶ್ಯಕವಾಗಿದೆ. ರುಚಿಯ ಆಸೆಗೆ ವಿಷಕಾರಿ ಆಹಾರ ಸೇವಿಸುತ್ತಿರುವ ಜನಸಾಮಾನ್ಯರು ಹಲವು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸುರಕ್ಷಿತವಲ್ಲದ ಆಹಾರ ಸೇವಿಸಿ ಕ್ಯಾನ್ಸರ್ ಮುಂತಾದ ರೋಗಗಳಿಂದ ಬಳಲುತ್ತಿದ್ದಾರೆ’ ಎಂದರು.

‘ಅನಧಿಕೃತ ಹೋಟೆಲ್‌, ಕ್ಯಾಂಟೀನ್‌ ಜೊತೆಗೆ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದೆ. ಇವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಆಹಾರ ಪದಾರ್ಥಗಳ ತಯಾರಿಕೆ, ವಿತರಣೆ, ಶೇಖರಣೆ ಮಾಡುವ ವ್ಯಾಪಾರಿಗಳು ಕಾಯ್ದೆಯಡಿ ನೋಂದಣಿ ಮಾಡಿಸಿ ಪರವಾನಗಿ ಪಡೆಯಬೇಕು’ ಎಂದರು.

‘ಜಿಲ್ಲೆಯಲ್ಲಿ ಕೆಲವು ಬೆಲ್ಲ ತಯಾರಿಕೆಯ ಆಲೆಮನೆಗಳಲ್ಲಿ ಹಾನಿಕಾರಕ ರಾಸಾಯನಿಕ ಬಳಸುತ್ತಿದ್ದಾರೆ. ಬ್ಲೀಚಿಂಗ್‌ ಪೌಡರ್‌, ಸಫೋಲೆಟ್ ಸೋಡಿಯಂ ಬೈ ಕಾರ್ಬೋನೆಟ್, ಪಾಸ್ಪೋರಿಕ್ ಆ್ಯಸಿಡ್‌, ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಮುಂತಾದ ಬಣ್ಣದ ರಾಸಾಯನಿಕ ಬಳಸುವುದು ಕಂಡುಬರುತ್ತಿದೆ. ಇದನ್ನು ತಡೆಯಲು ಜಿಲ್ಲೆಯ ಎಲ್ಲಾ ಬೆಲ್ಲ ತಯಾರಿಕಾ ಘಟಕಗಳ ಮಾಲೀಕರಿಗೆ ಕಾರ್ಯಾಗಾರ ಮಾಡಿ ಮಾಹಿತಿ ಜಾಗೃತಿ ಮೂಡಿಸಬೇಕು’ ಎಂದರು.

‘ನ್ಯಾಯಬೆಲೆ ಅಂಗಡಿಗಳು, ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುವ ಎಲ್ಲಾ ಶಾಲೆಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು, ಸರ್ಕಾರಿ ಅಥವಾ ಖಾಸಗಿ ಉಗ್ರಾಣಗಳು, ಹಣ್ಣಿನ ವಿತರಕರು, ಮಾರಾಟಗಾರರು ಹಾಗೂ ವ್ಯಾಪಾರಿಗಳು, ರಸ್ತೆ ಬದಿ ವ್ಯಾಪಾರಿಗಳು, ಮಾಂಸ ಮಾರಾಟಗಾರರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು’ ಎಂದರು.

‘ನಗರಸಭೆ ಪೌರಾಯುಕ್ತರು, ತಾಲ್ಲೂಕು ಪಂಚಾಯಿತಿ ಇಒ, ಪಿಡಿಒಗಳು ತಮ್ಮ ಕಚೇರಿಯಿಂದ ಆಹಾರ ಉದ್ದಿಮೆಗಳಿಗೆ ಅನುಮತಿ ನೀಡುವ ಮೊದಲು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದ ಅಡಿ ನೋಂದಣಿ ಕಡ್ಡಾಯಗೊಳಿಸಲು ಸೂಚಿಸಬೇಕು' ಎಂದರು.

‘ಸಾರ್ವಜನಿಕ ಶಿಕ್ಷಣ ಇಲಾಖೆಯು ತಮ್ಮ ವ್ಯಾಪ್ತಿಯಲ್ಲಿ ಬರುವ ಹಾಸ್ಟೆಲ್ ಹಾಗೂ ಅಕ್ಷರ ದಾಸೋಹ ಶಾಲೆಗಳಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಎಂಎಸ್‌ಪಿಸಿ, ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಹಾಸ್ಟೆಲ್‌ಗಳಿಗೂ ನೋಂದಣಿ ಕಡ್ಡಾಯವಾಗಿದೆ’ ಎಂದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಧರಣಿ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಎಸ್.ನಿರ್ಮಲಾ ಇದ್ದರು.

ಅನಧಿಕೃತ ಕುಡಿಯುವ ನೀರಿನ ಘಟಕ
‘ಅನಧಿಕೃತ ಪ್ಯಾಕೇಜ್ಡ್‌ ಕುಡಿಯುವ ನೀರು ತಯಾರಿಕೆ ಮಾರಾಟವನ್ನು ಹೈಕೋರ್ಟ್‌ ನಿಷೇಧಿಸಿದೆ. ಅಧಿಕೃತವಾಗಿ ಕುಡಿಯುವ ನೀರು ತಯಾರಿಸುವ ಸಂಸ್ಥೆಗಳು ಬ್ಯೂರೊ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್‌ (ಬಿಐಎಸ್‌) ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆಯಬೇಕು. ಜೊತೆಗೆ ಎಫ್‌ಎಸ್‌ಎಸ್‌ಎಐನಿಂದ ಪರವಾನಗಿಯನ್ನೂ ಪಡೆಯಬೇಕು’ ಎಂದು ನಾಗರಾಜ್‌ ತಿಳಿಸಿದರು. ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಡಾ.ಕೆ.ಆರ್.ಶಶಿಧರ್ ಮಾತನಾಡಿ ‘ಜಿಲ್ಲೆಯಲ್ಲಿ ಒಟ್ಟು 12 ಪ್ಯಾಕೇಜ್ಡ್ ನೀರಿನ ಘಟಕಗಳು ಬಿಐಎಸ್‌ ಪ್ರಮಾಣ ಪತ್ರ ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆದು ಕಾರ್ಯ ನಿರ್ವಹಿಸುತ್ತಿವೆ. 3 ಅನಧಿಕೃತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳನ್ನು ಮುಚ್ಚಿಸಲಾಗಿದೆ. 6 ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಸ್ವಯಂ ಮುಚ್ಚಲ್ಪಟ್ಟಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT