ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಗಿರಿಯಲ್ಲಿ ದನಗಳ ಕಲರವ

ಬಲ್ಲೇನಹಳ್ಳಿ ಮಂಜುನಾಥ್
Published 11 ಫೆಬ್ರುವರಿ 2024, 5:43 IST
Last Updated 11 ಫೆಬ್ರುವರಿ 2024, 5:43 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ‘ಹೇಮಗಿರಿ’ ಎಂಬ ಹೆಸರೇ ಆಹ್ಲಾದಕರ. ಸುತ್ತಲೂ ಹಸಿರು, ಹೇಮಾವತಿ ನದಿಯ ಜುಳುಜುಳು ನಿನಾದ, ತಿಳಿಗಾಳಿಯ ಬೀಸು ಎಲ್ಲಿಗೋ ವಿಶೇಷ ಜಾಗಕ್ಕೆ ಬಂದಂತಹ ಅನುಭವ ನೀಡುತ್ತದೆ. ಪಟ್ಟಣದಿಂದ 10 ಕಿ.ಮೀ ದೂರದಲ್ಲಿರುವ ಹೇಮಗಿರಿ ಶ್ರೀಕ್ಷೇತ್ರ ಪ್ರಕೃತಿ ಸೌಂದರ್ಯದಿಂದ ಗಮನ ಸೆಳೆಯುತ್ತದೆ.

ಬಂಡಿಹೊಳೆ ಗ್ರಾಮ ಪಂಚಾಯಿತಿಗೆ ಸೇರಿದ ಹೇಮಗಿರಿಯಲ್ಲಿ ಈಗ ಭಾರಿ ದನಗಳ ಜಾತ್ರೆಯ ಕಲರವ ಆರಂಭವಾಗಿದೆ. ಈ ಬಾರಿ ಜ.16 ರಂದು ಬ್ರಹ್ಮರಥೋತ್ಸವವು ನಡೆಯಲಿದೆ. ನಾಡಿನ ವಿವಿಧೆಡೆಯಿಂದ ರಾಸುಗಳ ದಂಡು ಬಂದಿದ್ದು  ಇಡೀ ಪ್ರದೇಶ ರಾಸುಗಳಿಂದ ತುಂಬಿ ಹೋಗಿದೆ.

ಈ ಯಾತ್ರಾ ಸ್ಥಳ ಭೃಗು ಮಹರ್ಷಿಯ ತಪೋಭೂಮಿ ಎಂದು ಹೆಸರಾದ ಸ್ಥಳವಾಗಿದೆ. ಸಾಕ್ಷಾತ್ ಮಹಾವಿಷ್ಣುವೇ ಇಲ್ಲಿನ ಪ್ರಾಕೃತಿಕ ಸೌಂದರ್ಯ ಆಸ್ವಾದಿಸಲು ಬರುತಿದ್ದನೆಂದು ಪ್ರತೀತಿ ಇದೆ. ಜಾನಪದ ಮುಂಗೋಳಿ ರಂಗಸ್ವಾಮಿಭಟ್ಟರು ಬರೆದಿರುವ ಹೇಮಗಿರಿ ಪುರಾಣದಲ್ಲಿ ಸ್ಥಳ ಮಹತ್ವವನ್ನು ಉಲ್ಲೇಖಿಸಿದ್ದಾರೆ.

ಹೇಮಗಿರಿ ಬೆಟ್ಟದಲ್ಲಿ ಶ್ರಾವಣ ಮಾಸದ ಶನಿವಾರಗಳು, ಕಾರ್ತೀಕ ಮಾಸದ ಸೋಮವಾರಗಳು, ವೈಕುಂಠ ಏಕಾದಶಿಯಂದು ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿಯವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ.

ಹಸಿರಿನಿಂದ ಕಂಗೊಳಿಸುವ ಹೇಮಗಿರಿ ಬೆಟ್ಟವು ನಾನಾರೀತಿಯ ಪ್ರಾಣಿ ಪಕ್ಷಿಗಳಿಗೆ, ಔಷಧೀಯ ಸಸ್ಯಗಳಿಗೂ ತಾಣವಾಗಿದೆ. ಸಮೀಪದಲ್ಲಿ ಇರುವ ಹೊಸಪಟ್ಟಣ ಐತಿಹಾಸಿಕ ತಾಣವಾಗಿದ್ದು ವಿಶಾಲ ಕಾಡು ಮತ್ತು  ಕೋಟೆಯ ಆವಶೇಷಗಳನ್ನು ಹೊಂದಿದೆ.

ಮೈಸೂರು ಮಹಾರಾಜರು ನಿರ್ಮಿಸಿದ ಹೇಮಾವತಿ ಬ್ಲಫ್‌ ಇದ್ದು ಹೇಮಾವತಿ ನದಿಯ ನೀರು ಏತ್ತರವಾದ ಏರಿಯಿಂದ ಧುಮುಕುವುದನ್ನು ನೋಡುವುದೇ ಒಂದು ಖುಷಿಯಾದ ವಿಚಾರವಾಗಿದೆ. ಬೆಟ್ಟದ ಬುಡದಲ್ಲಿಯೇ ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠವಿದ್ದು ಶಿಕ್ಷಣ ಸಂಸ್ಥೆಗಳೂ ಇವೆ.

ರಾಜ್ಯದಲ್ಲಿಯೇ ದೊಡ್ಡ ದನಗಳ ಜಾತ್ರೆಯೆಂದು ಪ್ರಸಿದ್ಧಿ ಪಡೆದಿರುವ ಹೇಮಗಿರಿ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.  ಕನಿಷ್ಠ ಮೂಲ ಸೌಲಭ್ಯ ಇಲ್ಲದ ಪರಿಣಾಮ ಇಲ್ಲಿಗೆ ಬರುವ ಭಕ್ತರು, ಪ್ರವಾಸಿಗರು ಬೇಸರಪಟ್ಟುಕೊಳ್ಳುತ್ತಾರೆ.

ಬೆಟ್ಟದ ಪಾದದಲ್ಲಿರುವ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪವು ಸಂಪೂರ್ಣವಾಗಿ ಶಿಥಿಲವಾಗಿದ್ದು ನೆಲಕಚ್ಚುವ ಸ್ಥಿತಿಯಲ್ಲಿದೆ. ಈ ಹಿಂದೆ ಈ ಸಮುದಾಯ ಭವನವು ಭಕ್ತಾದಿಗಳು ಹಾಗೂ ಬಡ ಜನರಿಗೆ, ಜಾತ್ರೆಗೆ ಬಂದ ರೈತರಿಗೆ ಉಳಿದುಕೊಳ್ಳಲು ಆಶ್ರಯ ತಾಣವಾಗಿತ್ತು.

ಕ್ಷೇತ್ರದಲ್ಲಿ ಕುಡಿಯುವ ನೀರು, ಶೌಚಾಲಯ, ಬಟ್ಟೆ ಬದಲಿಸುವ ಕೊಠಡಿಗಳು, ಹೇಮಾವತಿ ನದಿ ಸೋಪಾನ ಕಟ್ಟೆಯಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಬೆಟ್ಟದ ಮುಂದೆಯೇ ನದಿ ಇರುವುದರಿಂದ ಬೋಟಿಂಗ್ ವ್ಯವಸ್ಥೆ ಮಾಡಬೇಕು. ಸಮೀಪದ ಹೊಸಪಟ್ಟಣ ದ್ವೀಪವನ್ನು ಅಭಿವೃದ್ದಿಪಡಿಸಲು ಸರ್ಕಾರ ಗಮನಹರಿಸಿದರೆ ಹೇಮಗಿರಿ ಕ್ಷೇತ್ರ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತದೆ’ ಎಂದು ಬಂಡಿಹೊಳೆ, ಹೇಮಗಿರಿ ಮತ್ತು ಕುಪ್ಪಹಳ್ಳಿ ಗ್ರಾಮಸ್ಥರ ಮನವಿಯಾಗಿದೆ.

ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ

ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ

‘ಇಲ್ಲಿನ ಜಾತ್ರೆಯನ್ನು ನೋಡುತ್ತಲೆ ನಾನು ಬೆಳೆದಿದ್ದೇನೆ. ಇಲ್ಲಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಹೇಮಗಿರಿ ಕ್ಷೇತ್ರವು ಮತ್ತೆ ತನ್ನ ಗತವೈಭವವನ್ನು ಪಡೆಯಲು, ದನಗಳ ಜಾತ್ರೆಯ ಸಂಭ್ರಮವನ್ನು ಹೆಚ್ಚಿಸಲು ಕ್ರಮ ವಹಿಸುತ್ತೇನೆ’ ಎಂದು ಶಾಸಕ ಎಚ್‌.ಟಿ.ಮಂಜು ಹೇಳಿದರು.

ಅಭಿವೃದ್ಧಿಯಲ್ಲಿ ಹಿಂದುಳಿದ ಹೇಮಗಿರಿ ಶ್ರೀಕ್ಷೇತ್ರಕ್ಕೆ ಮೂಲಸೌಲಭ್ಯ ನೀಡಲು ಆಗ್ರಹ ಸೋಪಾನ ಕಟ್ಟೆಯಲ್ಲಿ ಕಾಣದ ಸ್ವಚ್ಛತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT