ಮಂಡ್ಯ: ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮ ಖಂಡಿಸಿ, ನಿತ್ಯ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಬೇಕೆಂಬ ಆದೇಶಕ್ಕೆ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ಸಿಗದ ಕಾರಣ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಶನಿವಾರ ಕರೆ ನೀಡಿದ್ದ ಮಂಡ್ಯ, ಮದ್ದೂರು ಬಂದ್ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು.
ರೈತ ಹಿತರಕ್ಷಣಾ ಸಮಿತಿ ಬಂದ್‌ಗೆ ಕರೆ ಕೊಟ್ಟಾಗ ವಿವಿಧ ಸಂಘಟನೆಗಳ ಮುಖಂಡರಿಗೆ, ರಾಜಕೀಯ ಪಕ್ಷಗಳ ಮುಖಂಡರಿಗೆ, ಸಾರ್ವಜನಿಕರಿಗೆ ಬಂದ್ ಯಶಸ್ವಿಯಾಗುವ ವಿಶ್ವಾಸ ಇರಲಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನ ಬಂದ ನಂತರ ಮಂಡ್ಯ ಬಂದ್ ಆಚರಣೆಗೆ ಕೇವಲ 2 ದಿನ ಮಾತ್ರವಿತ್ತು. ಕಡಿಮೆ ಅವಧಿಯಲ್ಲಿ ಆಯೋಜನೆಗೊಂಡ ಬಂದ್‌ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಯಿತು.
ವರ್ತಕರು, ಸಂಘಟನೆಗಳು, ಆಟೊ, ಖಾಸಗಿ ಬಸ್ ಚಾಲಕರು, ವಕೀಲರು, ವಿದ್ಯಾರ್ಥಿಗಳು ತೋರಿದ ಪ್ರತಿಕ್ರಿಯೆ ರೈತ ಹಿತರಕ್ಷಣಾ ಸಮಿತಿಯ ನಿರೀಕ್ಷೆಯನ್ನೂ ಮೀರಿಸಿತು. ಇಡೀ ಬಂದ್‌ನಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.
ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಮಂಡ್ಯ ನಗರದಲ್ಲಿ ಸರ್ಕಾರಿ ಬಸ್ ಸಂಚಾರ ಇಲ್ಲದೆ ಪ್ರಯಾಣಿಕರು ಪರದಾಡಿದರು. ನಗರದ ಬಸ್ ನಿಲ್ದಾಣದಿಂದ ಬೆಳಿಗ್ಗೆ ಸಂಚಾರ ಆರಂಭಿಸಿದ್ದವು. ಆದರೆ ಹೋರಾಟದ ತೀವ್ರತೆ ಹೆಚ್ಚಾದಾಗ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದವು. ಸಾರಿಗೆ ಬಸ್ ನಿಲ್ದಾಣಕ್ಕೆ ಬಸ್‌ಗಳು ಬಾರದ ಹಿನ್ನೆಲೆಯಲ್ಲಿ ನಿಲ್ದಾಣ ಬಿಕೋ ಎನ್ನುತ್ತಿತ್ತು. ಬೆಂಗಳೂರು-ಮೈಸೂರು ಮತ್ತು ಇತರೆ ಪಟ್ಟಣ, ಗ್ರಾಮೀಣ ಪ್ರದೇಶಕ್ಕೆ ತೆರಳಬೇಕಾದ ಪ್ರಯಾಣಿಕರು ಬಸ್‌ಗಾಗಿ ಕಾದು ಪರದಾಡಿದರು.
ಕಾವೇರಿ ಹೋರಾಟ ಹತ್ತಿಕ್ಕಲು ಪೊಲೀಸರು ಯತ್ನಿಸಿದ್ದಾರೆ ಎಂದು ಹೋರಾಟಗಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನೆಯ ಕೇಂದ್ರ ಸ್ಥಳ ಜೆ.ಸಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಪೊಲೀಸರೇ ಬಂದ್ ಮಾಡಿದ್ದರು. ವೃತ್ತದ ಕಡೆಗೆ ನಾಲ್ಕು ದಿಕ್ಕಿನಲ್ಲೂ ಯಾವುದೇ ವಾಹನ ಸಂಚಾರ ಮಾಡದಂತೆ ಬ್ಯಾರಿಕೇಡ್ ಹಾಕಲಾಗಿತ್ತು, ಪಶ್ಚಿಮ ಪೊಲೀಸ್ ಠಾಣೆ ಹಾಗೂ ಕರ್ನಾಟಕ ಬಾರ್ ವೃತ್ತದ ಬಳಿ ರಸ್ತೆ ಬಂದ್ ಮಾಡಿದ್ದರೆ.
ಪೊಲೀಸ ಕ್ರಮ ಕಾವೇರಿ ಹೋರಾಟಗಾರರನ್ನು ರೊಚ್ಚಿಗೆಬ್ಬಿಸಿತು. ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಪೊಲೀಸರು ರಸ್ತೆ ಬಂದ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಹೋರಾಟಗಾರರೇ ತೆರಳಿ ಬ್ಯಾರಿಕೇಡ್‌ಗಳನ್ನು ಕಿತ್ತು ಒಗೆಯುವುದಾಗಿ ಕಿಡಿಕಾರಿದರು. ನಂತರ ರೈತ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಹಿತ ರಕ್ಷಣಾ ಸಮಿತಿಯ ಮುಖಂಡರು ಪಾದಯಾತ್ರೆ ಹೊರಟು ಸರ್ ಎಂ.ವಿ. ಪ್ರತಿಮೆ ಎದುರಿನ ಧರಣಿ ಸ್ಥಳಕ್ಕೆ ತೆರಳಿ ನಿರಂತರ ಧರಣಿ ಮುಂದುವರೆಸಿದರು. ವಕೀಲರು ನ್ಯಾಯಾಲಯ ಕಲಾಪದಿಂದ ಹೊರಗುಳಿದರು ಕಾವೇರಿ ಹೋರಾಟ ಬೆಂಬಲಿಸಿದರು. ವಕೀಲರ ಸಂಘದ ಆವರಣದಿಂದ ಮೆರವಣಿಗೆ ಹೊರಟು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಹೋರಾಟ ಬೆಂಬಲಿಸಿದರು.
ಮಂಡ್ಯದ ಅಶೋಕನಗರದ ಸೋನಾಕ್ಷಿ ಸಾಕು ನಾಯಿ ‘ಕಾವೇರಿ ನಮ್ಮದು’ ಎಂದು ಬರೆದ ಖಾಲಿ ಕೊಡವನ್ನು ಕಚ್ಚಿಕೊಂಡು ಓಡಾಡಿತು. ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತನೊಬ್ಬ ಪಟಾಪಟಿ ಚಡ್ಡಿ ಧರಿಸಿ ಕನ್ನಡ ಬಾವುಟ ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಮುಖಂಡರಾದ ಎಂ.ಎಸ್.ಆತ್ಮಾನಂದ, ಸುನಂದಾ ಜಯರಾಂ, ಕೆ.ಬೋರಯ್ಯ, ಸಿದ್ದರಾಮೇಗೌಡ, ಇಂಡವಾಳು ಚಂದ್ರಶೇಖರ್, ಮಂಜುನಾಥ್, ಅಂಬುಜಮ್ಮ, ಎಂ.ವಿ.ಕೃಷ್ಣ, ಪ್ರಭಾಕರ್, ಭಾಗವಹಿಸಿದ್ದರು.
ಬಿಕೋ ಎಂದ ಪೇಟೆಬೀದಿ, ರಾಷ್ಟ್ರೀಯ ಹೆದ್ದಾರಿ ಸ್ವಯಂಪ್ರೇರಿತವಾಗಿ ಮುಚ್ಚಿದ ಅಂಗಡಿ–ಮುಂಗಟ್ಟು ವಿದ್ಯಾರ್ಥಿಗಳು, ವಕೀಲರು, ವರ್ತಕರಿಂದ ಬೆಂಬಲ
ಧ್ವನಿ ಎತ್ತದಿದ್ದರೆ ಬದುಕಿದ್ದೂ ಸತ್ತಂತೆ; ಸಿ.ಟಿ.ರವಿ
ಬಿಜೆಪಿ ಮುಖಂಡ ಸಿ.ಟಿ.ರವಿ ಮಾತನಾಡಿ ‘ಆಡಳಿತ ನಡೆಸುವ ಪಕ್ಷಗಳು ಬದಲಾಗಿವೆ ಆದರೆ ರೈತ ಹಿತರಕ್ಷಣಾ ಸಮಿತಿ ನಿಲುವುಗಳು ಎಂದಿಗೂ ಬದಲಾಗಿಲ್ಲ. ನನ್ನ ಸಾರ್ವಜನಿಕ ಜೀವನ ಪ್ರಾರಂಭವಾಗಿದ್ದೇ ರೈತ ಚಳುವಳಿ ಮೂಲಕ. ನನಗೂ ರೈತ ಕುಟುಂಬದ ಹಿನ್ನೆಲೆ ಇದೆ. ರೈತನ ನೋವುನಲಿವು ನನಗೆ ಗೊತ್ತಿದೆ. ಇವತ್ತು ನಡೆಯುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ಇದ್ದರೆ ಬದುಕಿದ್ದೂ ಸತ್ತಂತೆ ಆ ಕಾರಣಕ್ಕೆ ಪ್ರತಿಭಟನೆಗೆ ಬಂದಿದ್ದೇನೆ’ ಎಂದರು. ‘ಕಾಂಗ್ರೆಸ್ಸಿಗರು ಪಾದಯಾತ್ರೆ ಮಾಡಿದಾಗ ಜನರಿಗೆ ವಿಶ್ವಾಸ ಹೆಚ್ಚಿತ್ತು ಹಾಗಾಗಿ ಅವರನ್ನು ದೊಡ್ಡಮಟ್ಟದಲ್ಲಿ ಗೆಲ್ಲಿಸಿದರು. ಕಾಂಗ್ರೆಸ್ ಅಧಿಕಾರ ಹಿಡಿದ ಬಳಿಕ ರೈತರ ಹಿತ ಮರೆತಿದೆ. ಮಗು ಅತ್ತಾಗ ತಾಯಿ ಹಾಲು ಕೊಡುತ್ತಾಳೆ ಆದರೆ ತಮಿಳುನಾಡು ಕೇಳುವ ಮುನ್ನ ನಮ್ಮ ಸರ್ಕಾರ ನೀರು ಬಿಟ್ಟಿರುವುದು ಖಂಡನೀಯ. ವಾಸ್ತವಿಕ ಪರಿಸ್ಥಿತಿಗೆ ಮನವರಿಕೆ ಮಾಡುವ ಕೆಲಸ ಆರಂಭದಲ್ಲೇ ಆಗಬೇಕಾಗಿತ್ತು’ ಎಂದರು. ‘ವಾಡಿಕೆಗಿಂದ ಈ ಬಾರಿ ಮಳೆ ಕಡಿಮೆ ಇದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ತುಂಬಾ ಕಡಿಮೆ ಇದೆ. ಈ ಆದೇಶ ಪಾಲಿಸಿದ್ರೆ ಡ್ಯಾಂ ನಲ್ಲಿ ಕೇವಲ 6 ಟಿಎಂಸಿ ಅಡಿ ಮಾತ್ರ ನೀರು ಮಾತ್ರ ಉಳಿಯುತ್ತದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಎಲ್ಲಿಂದ ತರುವುದು ಎಂಬ ಪ್ರಶ್ನೆ ಮೂಡಿದೆ. ಕಬಿನಿ ಕೆಆರ್‌ಎಸ್ ಕಟ್ಟಿದ್ದು ತಮಿಳುನಾಡಿಗೆ ಬೇಕಾದಾಗ ನೀರು ಬಿಡುವುದಕ್ಕೆ ಅಲ್ಲ’ ಎಂದರು. ‘ಮಳೆ ಆದಾಗ ನಾವ್ಯಾರು ನೀರು ಯಾಕೆ ಬಿಟ್ಟಿರಿ ಎಂದು ಕೇಳಿಲ್ಲ. ಆದರೆ ಸಂಕಷ್ಟ ಇದ್ದ ಕಾಲದಲ್ಲಿ ನೀರು ಬಿಡಬಾರದು. ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದವರು ಈಗ ಎಲ್ಲಿಗೆ ಹೋದರು. ರಾಜ್ಯದ ಹಿತ ಮುಖ್ಯವಾ ಇಲ್ಲಾ ನಿಮಗೆ ರಾಜಕೀಯ ಸಂಬಂಧ ಮುಖ್ಯವಾ’ ಎಂದು ಪ್ರಶ್ನಿಸಿದರು.
ಡಿಕೆಶಿ ವಿರುದ್ಧ ಆಕ್ರೋಶ
ರಾಜ್ಯ ಸರ್ಕಾರವನ್ನು ಎಷ್ಟ ಬೇಕಾದರೂ ಬೈಯಿರಿ ಎಂದು ಲಘುವಾಗಿ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ‘ಡಿ.ಕೆ.ಶಿವಕುಮಾರ್ ಅವರು ಲಘುವಾಗಿ ಮಾತನಾಡುವುದನ್ನು ಬಿಡಬೇಕು. ರೈತರು ಬೇಕಾದರೆ ಕೋರ್ಟ್‌ಗೆ ಹೋಗಲಿ ಎಂದು ಮೊದಲು ಹೇಳಿ ಅಪಹಾಸ್ಯಕ್ಕೆ ಈಡಾಗಿದ್ದರು. ಈಗಲೂ ರಾಜ್ಯ ಸರ್ಕಾರವನ್ನು ಎಷ್ಟು ಬೇಕಾದರೂ ಬೈದುಕೊಳ್ಳಿ ಎಂದು ಲಘುವಾಗಿ ಮಾತನಾಡಿದ್ದಾರೆ. ಅವರು ಗಂಭೀರವಾಗಿ ಮಾತನಾಡುವುದನ್ನು ಕಲಿಯಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದರು. ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.