ಭಾನುವಾರ, ನವೆಂಬರ್ 28, 2021
20 °C

ಏತ ನೀರಾವರಿ ಯೋಜನೆ: ಶೀಘ್ರ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ಕೆ.ಬೆಟ್ಟಹಳ್ಳಿ ‌‌ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿದಂತೆ ವಿವಿಧ ಭಾಗಗಳಲ್ಲಿ ಕೆರೆ ತುಂಬಿಸುವ ಶ್ಯಾದನಹಳ್ಳಿ ಚೆಕ್‌ ಡ್ಯಾಂ ಏತ ನೀರಾವರಿ ಯೋಜನೆಯು ಶಿಗ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.

ತಾಲ್ಲೂಕಿನ ಕೆ.ಬೆಟ್ಟಹಳ್ಳಿ ಗ್ರಾ.ಪಂ.ನ ಹುಲ್ಕೆರೆ ಗ್ರಾಮದಲ್ಲಿ ಶನಿವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಉದ್ಫಾಟಿಸಿ ಅವರು ಮಾತನಾಡಿದರು.

ಈಗಾಗಲೇ ಬನಘಟ್ಟ ಏತ ನೀರಾವರಿ ಯೋಜನೆಯಿಂದ ಮೇಲುಕೋಟೆ ಭಾಗದ ಕೆರೆಗಳು ತುಂಬುತ್ತಿದ್ದು, ನೀರಾವರಿ ಪ್ರದೇಶ ಗಳಾಗಿ ಮಾರ್ಪಾಟ್ಟಿವೆ. ದುದ್ದ ಏತನೀರಾವರಿ ಯೋಜನೆಯ ಕಾಮಗಾರಿ ‌ಪ್ರಗತಿಯಲ್ಲಿದ್ದು, ಅದೂ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.

ಕಚ್ಚಾ ಸಾಮಗ್ರಿ ಕೊಡಿಸಿ: ‘ಕಲ್ಲುಗಣಿಗಾ ರಿಕೆಯ ಕ್ರಷರ್‌ಗಳನ್ನು ಸ್ಥಗಿತಗೊಳಿಸುವ ಉಪ ವಿಭಾಗಾಧಿಕಾರಿಗಳೇ, ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೂ ಕಚ್ಚಾ ಸಾಮಗ್ರಿಗಳನ್ನು ಕೊಡಿಸಿ’ ಎಂದು ಶಾಸಕ ಪುಟ್ಟರಾಜು, ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಅವರಿಗೆ ಹೇಳಿದರು. ಆದರೆ, ಉಪ ವಿಭಾಗಾಧಿಕಾರಿ ಶಿವಾನಂದ ಮೂರ್ತಿ ಪ್ರತಿಕ್ರಿಯೆ ನೀಡಲಿಲ್ಲ.

ಸ್ಥಳದಲ್ಲೇ ಬಗೆಹರಿಸಿ: ಮುಖ್ಯಮಂತ್ರಿ ಸೂಚನೆ ಮೇರೆಗೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಶೇ 80ರಷ್ಟು ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿ ಉಳಿದಂತೆ ಮೇಲ್ಪಟ್ಟ ಅಧಿಕಾರಿಗಳ ಮಟ್ಟದಲ್ಲಿ ಬಗೆಹರಿಸುವ ಕ್ರಮಕೈಗೊಳ್ಳಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಾರದೊಳಗೆ ಕ್ರಮ ವಹಿಸಿ: ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಕಾರ್ಯಕ್ರಮದಲ್ಲಿ ಜನರು ನೀಡುವ ಅಹವಾಲುಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲೇ ಬಗೆಹರಿಸಿ. ಸಮಸ್ಯೆಗಳ ಕ್ಲಿಷ್ಟವಾಗಿದ್ದರೆ ಒಂದು ವಾರದೊಳಗೆ ಬಗೆಹರಿಸುವ ಕ್ರಮವಹಿಸಬೇಕು. ಇಲ್ಲದಿದ್ದರೆ ಅಂಥ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸಮಸ್ಯೆಗಳ ಮಹಾಪೂರ: ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಹಲವರು ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಮಾಡಿಕೊಂಡರು. ಸಾಮಾಜಿಕ ಭದ್ರತೆಯ ಪಿಂಚಣೆ ನಿಂತುಹೋಗಿದೆ.  3 ತಿಂಗಳಿನಿಂದಲೂ ಪಿಂಚಣಿ ಬರುತ್ತಿಲ್ಲ ಎಂದು ಕೆಲವರು ಸಮಸ್ಯೆ ಹೇಳಿಕೊಂಡರು. ಗ್ರಾಮದ ಡೇರಿಯ ಜಾಗ ನೋಂದಣಿಯಾಗಿಲ್ಲ. ಡೇರಿಯಲ್ಲಿ ಲೆಕ್ಕಪತ್ರ ನಿರ್ವಹಣೆ ಸರಿಯಾಗಿಲ್ಲ ಎಂದು ಸಣ್ಣಮ್ಮ ದೂರಿದರು.

ಕೆ.ಬೆಟ್ಟಹಳ್ಳಿ ‌ಹಾಗೂ ಡಾಮಡಹಳ್ಳಿ ಗ್ರಾಮಗಳ ಸ್ಮಶಾನ ಜಾಗವು ಒತ್ತುವರಿ ಯಾಗಿದೆ, ತೆರವುಗೊಳಿಸಿ ಎಂದು ಅಲ್ಲಿಯ ಜನರು ಅಹವಾಲು ನೀಡಿದರು.

ಕಾರ್ಯಕ್ರಮದಲ್ಲಿ 97ಅರ್ಜಿಗಳನ್ನು ಸ್ವೀಕರಿಸಲಾಯಿತು. 23 ಪೈಕಿ ಆರ್‌ಟಿಸಿಗಳು, 7 ಪೌತಿ ಖಾತೆ ಅರ್ಜಿಗಳು, 19 ಪಿಂಚಣಿ ಅರ್ಜಿಗಳು ಹಾಗೂ 48 ಇತರ ಅರ್ಜಿಗಳನ್ನು ಸ್ವೀಕರಿಸಿ, 49 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಯಿತು. 48 ಅರ್ಜಿಗಳು ಇತರ ಇಲಾಖೆ ಹಾಗೂ ಕಂದಾಯ ಇಲಾಖೆಯ ಹೆಚ್ಚಿನ ವಿಚಾರಣೆಗೆ ಸಂಬಂಧಪಟ್ಟಂತೆ ಅರ್ಜಿಗಳು ಉಳಿದಿರುತ್ತವೆ. ಮುಂಬ ರುವ 15 ದಿನಗಳಲ್ಲಿ ಮುಕ್ತಾಯ ಮಾಡಲಾಗುವುದು ಎಂದು ಅವರು ತಿಳಿಸಿದರು.

ಈಗ ಹುಲ್ಕೆರೆ ಗ್ರಾಮವು ಪೈಕಿ ಆರ್‌ಟಿಸಿ ಮುಕ್ತ ಗ್ರಾಮವಾಗಿದೆ ಎಂದು ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಆರ್.ಪಿ.ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಕೇಗೌಡ, ಮನ್‌ಮುಲ್ ಅಧ್ಯಕ್ಷ ರಾಮಚಂದ್ರ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಗುರುಸ್ವಾಮಿ, ತಾ.ಪಂ.ಮಾಜಿ ಸದಸ್ಯ ನಿಂಗೇಗೌಡ, ಜಿಲ್ಲಾ ಹಾಪ್‌ಕಾಮ್ಸ್‌ ನಿರ್ದೇಶಕ ಕೆ.ಮಹೇಶ್, ಪೊಲೀಸ್ ಇನ್‌ಸ್ಪೆಕ್ಟರ್‌ ಕೆ.ಪ್ರಭಾಕರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು